ದಾವಣಗೆರೆ- ಚಿತ್ರದುರ್ಗ- ತುಮಕೂರು ಹೊಸ ರೈಲ್ವೆ ಮಾರ್ಗಕ್ಕೆ 238 ಎಕರೆ ಅಗತ್ಯ

By Kannadaprabha NewsFirst Published Jun 27, 2020, 3:28 PM IST
Highlights

ದಾವಣಗೆರೆ- ಚಿತ್ರದುರ್ಗ- ತುಮಕೂರು ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒಟ್ಟು ವಿಸ್ತೀರ್ಣ 238 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ. ಈಗಾಗಲೇ 209 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ನೋಟಿಫಿಕೇಷನ್‌ ಆಗಿದ್ದು, ಇನ್ನೊಂದು ತಿಂಗಳಲ್ಲೇ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಲಿದೆ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದಾವಣಗೆರೆ(ಜೂ.27): ದಾವಣಗೆರೆ- ಚಿತ್ರದುರ್ಗ- ತುಮಕೂರು ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 14 ಗ್ರಾಮಗಳು ಒಳಪಡಲಿವೆ. ಒಟ್ಟು ವಿಸ್ತೀರ್ಣ 238 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ ಎಂದು ವಿಶೇಷ ಭೂ ಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್‌ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಸಿ.ಅಂಗಡಿ ಅಧ್ಯಕ್ಷತೆಯ ರೈಲ್ವೆ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 209 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ನೋಟಿಫಿಕೇಷನ್‌ ಆಗಿದ್ದು, ಇನ್ನೊಂದು ತಿಂಗಳಲ್ಲೇ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಲಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಮಾತನಾಡಿ, ಹುಬ್ಬಳ್ಳಿ-ಚಿಕ್ಕಜಾಜೂರು ರೈಲ್ವೆ ಟ್ರ್ಯಾಕ್‌ ಡಬ್ಲಿಂಗ್‌ ಲೈನ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಒಂದು ಸ್ಟ್ರೆಚ್‌ಗೆ ಜನರಲ್‌ ಅವಾರ್ಡ್‌ ಮಾಡಬೇಕಿದೆ. ಇದಕ್ಕಾಗಿ .5 ಕೋಟಿ ಠೇವಣಿ ಇಡಬೇಕಿದೆ ಎಂದು ಹೇಳಿದರು.

ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಆಮೆಗತಿಯಲ್ಲಿ ಭೂ ಸ್ವಾಧೀನ!

ವಿಶೇಷ ಭೂ ಸ್ವಾಧೀನಾಧಿಕಾರಿ ಸರೋಜಾ ಮಾತನಾಡಿ, ಶಿವಮೊಗ್ಗ- ಶಿಕಾರಿಪುರ- ರಾಣೇಬೆನ್ನೂರು ಹೊಸ ರೈಲ್ವೆ ಮಾರ್ಗಕ್ಕಾಗಿ 2 ಹಂತದಲ್ಲಿ ಒಟ್ಟು 1349.23 ಎಕರೆ ಜಮೀನು ಭೂ ಸ್ವಾಧೀನ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ರೈಲ್ವೆ ಸಚಿವ ಸುರೇಶ ಅಂಗಡಿ ಮಾತನಾಡಿ, ಇನ್ನು 4 ತಿಂಗಳಲ್ಲೇ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಬೇಕು. ರೈಲ್ವೆ ಸೇವೆಗೆ ಸಂಬಂಧಿಸಿದಂತೆ ನಮ್ಮ ಆದ್ಯತೆ ಸುರಕ್ಷತೆ, ಸ್ವಚ್ಛತೆ ಮತ್ತು ಸಮಯಪ್ರಜ್ಞೆಯಾಗಿದೆ. ಸಮಯಕ್ಕೆ ಸಹ ಹೆಚ್ಚು ಒತ್ತು ನೀಡಲಿದ್ದು, ರೈಲ್ವೆ ಸಾರ್ವಜನಿಕರ ಆಸ್ತಿಯಾಗಿದೆ. ಸಾರ್ವಜನಿಕರು ರೈಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ರಾಜ್ಯದ ಪ್ರಸ್ತಾಪಿತ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾಧಿಕಾರಿಗಳು, ಎಸ್‌ಎಲ್‌ಓಗಳು ಎಷ್ಟುಬೇಗ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಭೂಮಿಯನ್ನು ನೀಡುತ್ತಾರೋ ಅಷ್ಟೇ ಬೇಗನೆ ಕಾಮಗಾರಿಯನ್ನೂ ಕೈಗೆತ್ತಿಕೊಂಡು, ಪೂರ್ಣಗೊಳಿಸುವ ಕೆಲಸವನ್ನು ಇಲಾಖೆ ಮಾಡುತ್ತದೆ ಎಂದು ಸುರೇಶ ಅಂಗಡಿ ಸ್ಪಷ್ಟಪಡಿಸಿದರು.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!