Deadline for Kamal Haasan: ಕಮಲ್‌ ಹಾಸನ್‌ ಕ್ಷಮೆ ಕೇಳಲು ನಾಳೆ ಗಡುವು: ಥಗ್‌ ಲೈಫ್‌ ಬಿಡುಗಡೆಗೆ ಬಿಡೋದಿಲ್ಲ!

Kannadaprabha News   | Kannada Prabha
Published : Jun 01, 2025, 06:08 AM IST
kamal haasan rejected bollyood films allah rakha ghayal to ghatak

ಸಾರಾಂಶ

‘ನಟ ಕಮಲ್‌ ಹಾಸನ್‌ ಅವರಿಗೆ ಕ್ಷಮೆ ಕೇಳಲು ಸೋಮವಾರದವರೆಗೆ ಗಡುವು ನೀಡಿದ್ದು, ನಂತರ ಕ್ಷಮೆ ಕೇಳಿದರೂ ‘ಥಗ್‌ ಲೈಫ್‌’ ಸಿನಿಮಾ ಬಿಡುಗಡೆ ಮಾಡುವುದಿಲ್ಲ’ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌ ಹೇಳಿದ್ದಾರೆ.

ಬೆಂಗಳೂರು (ಜೂ.01): ‘ನಟ ಕಮಲ್‌ ಹಾಸನ್‌ ಅವರಿಗೆ ಕ್ಷಮೆ ಕೇಳಲು ಸೋಮವಾರದವರೆಗೆ ಗಡುವು ನೀಡಿದ್ದು, ನಂತರ ಕ್ಷಮೆ ಕೇಳಿದರೂ ‘ಥಗ್‌ ಲೈಫ್‌’ ಸಿನಿಮಾ ಬಿಡುಗಡೆ ಮಾಡುವುದಿಲ್ಲ’ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌ ಹೇಳಿದ್ದಾರೆ. ಈ ಮಾತಿಗೆ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಕೂಡ ದನಿಗೂಡಿಸಿದೆ.

ಈ ಕುರಿತು ‘ಕನ್ನಡಪ್ರಭ’ ಜತೆಗೆ ಮಾತನಾಡಿದ ಕೆ.ವಿ.ಚಂದ್ರಶೇಖರ್‌, ‘ಇದು ಭಾಷೆಯ ವಿಚಾರ. ವ್ಯವಹಾರವನ್ನೂ ಮೀರಿದ ಸೂಕ್ಷ್ಮ ವಿಚಾರ. ಹೀಗಾಗಿ ನಮಗೆ ಭಾಷೆಯೇ ಮುಖ್ಯ. ನಮ್ಮ ಭಾಷೆ ಬಗ್ಗೆ ಕೇವಲವಾಗಿ ಮಾತನಾಡಿದವರಿಗೆ ಅವರ ತಪ್ಪು ಏನೆಂಬುದನ್ನು ತಿಳಿಯಪಡಿಸಬೇಕಿದೆ. ಈ ನಿಟ್ಟಿನಲ್ಲಿ ಕಮಲ್‌ ಹಾಸನ್‌ ಕ್ಷಮೆ ಕೇಳುವುದಿದ್ದರೆ ಸೋಮವಾರದ ಒಳಗೆ ಕೇಳಬೇಕು. ಸೋಮವಾರದ ನಂತರ ಕ್ಷಮೆ ಕೇಳಿದರೂ ಅವರ ‘ಥಗ್‌ ಲೈಫ್‌’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ನಮ್ಮ ಪ್ರದರ್ಶಕರ ಸಂಘ ನಿರ್ಧರಿಸಿದೆ’ ಎಂದರು.

ಕ್ಷಮೆ ಕೇಳುವುದೊಂದೇ ಪರಿಹಾರ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಮಾತನಾಡಿ, ‘ಕಮಲ್‌ ಹಾಸನ್‌ ಅವರ ಹೇಳಿಕೆ ಈಗ ಸಿನಿಮಾ ಪ್ರಶ್ನೆ ಅಥವಾ ಸಮಸ್ಯೆಯಾಗಿಲ್ಲ. ಇಡೀ ಕರ್ನಾಟಕದ, ಕನ್ನಡಿಗರ ಸ್ವಾಭಿಮಾನದ ವಿಷಯವಾಗಿದೆ. ಹೀಗಾಗಿ ಅವರು ಕನ್ನಡಿಗರ ಕ್ಷಮೆ ಕೇಳದಿದ್ದರೆ ನಾವು ಸಿನಿಮಾ ಬಿಡುಗಡೆ ಮಾಡಲ್ಲ. ವಿತರಕರು ಕೂಡ ಯಾರೂ ಮುಂದೆ ಬಂದಿಲ್ಲ. ಚಿತ್ರಮಂದಿರದ ಮಾಲೀಕರೂ ಈ ಸಿನಿಮಾ ಬಿಡುಗಡೆಗೆ ಸಿದ್ಧರಿಲ್ಲ. ಈ ಸಮಸ್ಯೆಗೆ ಕಮಲ್‌ ಹಾಸನ್‌ ಕ್ಷಮೆ ಕೇಳುವುದೊಂದೇ ಪರಿಹಾರ. ಅದು ಸೋಮವಾರದ ಒಳಗೆ ಕೇಳಬೇಕು’ ಎಂದು ಹೇಳಿದ್ದಾರೆ.

ಸಚಿವರೂ ಪತ್ರ ಬರೆದಿದ್ದಾರೆ: ಇದೇ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಮಾತನಾಡಿ, ‘ಈ ಪ್ರಕರಣವನ್ನು ರಾಜ್ಯ ಸರ್ಕಾರವೂ ಗಂಭೀರವಾಗಿ ಪರಿಗಣಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರೇ ಪತ್ರ ಬರೆದು, ‘ಕಮಲ್‌ ಹಾಸನ್‌ ಕ್ಷಮೆ ಕೇಳದೆ ಹೋದರೆ ಸಿನಿಮಾ ಬಿಡುಗಡೆ ಮಾಡಬೇಡಿ’ ಎಂದು ತಿಳಿಸಿದ್ದಾರೆ. ಸಚಿವರ ಈ ಸೂಚನೆಗೆ ನಾವು ಬದ್ಧರಾಗಿರುತ್ತೇವೆ. ಈ ವಿಚಾರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ರಾಜ್ಯ ಸರ್ಕಾರ ಏನೇ ಕ್ರಮ, ತೀರ್ಮಾನ ತೆಗೆದುಕೊಂಡರೂ ನಿರ್ಮಾಪಕರ ಸಂಘ ಅದರ ಜತೆಗೆ ಇರುತ್ತದೆ’ ಎಂದು ತಿಳಿಸಿದ್ದಾರೆ.

‘ಕನ್ನಡ ಭಾಷೆ ಬಗ್ಗೆ ಕೇವಲವಾಗಿ ಮಾತನಾಡಿ, ಇಷ್ಟೆಲ್ಲ ಸಮಸ್ಯೆ, ವಿವಾದ ಮಾಡಿರುವ ಕಮಲ್‌ ಹಾಸನ್‌ ಅವರು ಕ್ಷಮೆ ಕೇಳಿದರೂ ಒಂದು ತಿಂಗಳ ನಂತರ ಅವರ ಸಿನಿಮಾ ಬಿಡುಗಡೆ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದಿರುವ ಉಮೇಶ್‌ ಬಣಕಾರ್‌, ‘ಹೀಗೆ ಕನ್ನಡ ಭಾಷೆ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ಕಾನೂನಿನಲ್ಲೂ ಶಿಕ್ಷೆಯಾಗುವಂತಹ ಕಾನೂನು ತರಬೇಕು’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ