ಸುವರ್ಣನ್ಯೂಸ್ ಮತ್ತು ಕನ್ನಡಪ್ರಭದಿಂದ ಭಾವಕವಿಗೆ ಭಾವುಕ ಮಾತು: ಗೀತೆ ನಮನ

Kannadaprabha News   | Kannada Prabha
Published : Jun 01, 2025, 05:16 AM IST
HS Venkateshamurthy

ಸಾರಾಂಶ

ಅಗಲಿದ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೌರವಾರ್ಥ ‘ಕನ್ನಡಪ್ರಭ’ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವತಿಯಿಂದ ‘ಇಷ್ಟುಕಾಲ ಒಟ್ಟಿಗಿದ್ದು...’ ಗಾನನಮನ ಸಲ್ಲಿಸಲಾಯಿತು.

ಬೆಂಗಳೂರು (ಜೂ.01): ಅಗಲಿದ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೌರವಾರ್ಥ ‘ಕನ್ನಡಪ್ರಭ’ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವತಿಯಿಂದ ‘ಇಷ್ಟುಕಾಲ ಒಟ್ಟಿಗಿದ್ದು...’ ಗಾನನಮನ ಸಲ್ಲಿಸಲಾಯಿತು. ಎಚ್‌ಎಸ್‌ವಿ ಅವರ ಒಡನಾಡಿಗಳು ತಮ್ಮ ಒಡನಾಟದ ಘಳಿಗೆ ಸ್ಮರಿಸಿ ಭಾವುಕರಾದರು. ಬನಶಂಕರಿಯ ಬಿಎನ್‌ಎಂ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಡ್ 6 ಹಾಗೂ ಸೈಡ್ ವೇಯ್ಸ್ 6 ಸಹಯೋಗದಲ್ಲಿ ನಡೆದ ಗಾನ ನಮನದಲ್ಲಿ ನೂರಾರು ಮಂದಿ ಸೇರಿ ಭಾವ ಗೀತೆ, ಮಾತು ಕೇಳುತ್ತಾ ಭಾವುಕರಾದರು. ಗಾಯಕ ರಾಮಚಂದ್ರ ಹಡಪದ್ ಮತ್ತು ಗಾಯಕಿ ನಾಗಚಂದ್ರಿಕಾ ಭಟ್ ಅವರ ತಂಡ ಎಚ್‌ಎಸ್‌ವಿ ಅವರ ಜನಪ್ರಿಯ ಹಾಡುಗಳನ್ನು ಹಾಡಿ ಕೃಷ್ಣ ಕವಿಗೆ ನಮಿಸಿದರು.

ಅವರ ಅತೀ ಆಪ್ತ ಒಡನಾಡಿಗಳಾದ ನಿರ್ದೇಶಕ ಟಿ.ಎನ್. ಸೀತಾರಾಮ್, ಕವಿ ಬಿ.ಆರ್. ಲಕ್ಷ್ಮಣರಾವ್, ಶ್ರೀನಿವಾಸ್ ಕಪ್ಪಣ್ಣ, ದುಂಡಿರಾಜ್, ಲೇಖಕರಾದ ಜೋಗಿ ಅವರು ಹೇಳಿದ ಒಡನಾಟದ ಕತೆಗಳು ಹಾಡಿನ ಭಾವದ ಗುಂಗು ಹೆಚ್ಚಿಸಿದವು. ಹನಿಗವಿ ದುಂಡಿರಾಜ್ ಅವರು ಒಡನಾಟದ ಕತೆ ಹೇಳುತ್ತಾ ಹನಿಗವನ ವಾಚಿಸಿದರು. ನಟ ಶ್ರೀನಗರ ಕಿಟ್ಟಿ ಅವರು ತಮ್ಮ ಪ್ರೊಡಕ್ಷನ್‌ನ ಧಾರವಾಹಿಗೆ ಬರೆದುಕೊಟ್ಟ ಗೀತೆ ಸ್ಮರಿಸಿ ಭಾವುಕರಾದರು. ನಿರ್ದೇಶಕ ನಾಗಶೇಖರ ಸಹ ನುಡಿ ನಮನ ಸಲ್ಲಿಸಿದರು. ರಾಘವೇಂದ್ರ ಕಾಂಚನ್ ಹಾಗೂ ಭಾವನಾ ನಾಗಯ್ಯ ಅವರು ಕಾವ್ಯದ ಹಿಂದಿನ ಕತೆ, ಒಡನಾಟದ ಘಳಿಗೆಗಳನ್ನು ಹೇಳುತ್ತಾ ಇಡೀ ಕಾರ್ಯಕ್ರಮ ನಿರೂಪಿಸಿದ್ದು ಎಲ್ಲರನ್ನೂ ಹಿಡಿದಿಟ್ಟಿತು.

ಸಿ.ಅಶ್ವತ್ಥ್, ಎಚ್ಚೆಸ್ವಿಯಿಂದ ನನ್ನ ಧಾರಾವಾಹಿಗಳು ಜನಪ್ರಿಯ: ನನ್ನ ಧಾರಾವಾಹಿಗಳಿಗೆ ಎಚ್‌ಎಸ್‌ವಿ ಗೀತೆ ಬರೆದರು‌. ಸಿ.ಅಶ್ವತ್ಥ್ ಹಾಡಿದರು. ಅವರಿಬ್ಬರಿಂದ ನನ್ನ ಧಾರಾವಾಹಿಗಳು ಜನಪ್ರಿಯವಾದವು ಎಂದು ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಂ ಹೇಳಿದರು. ಮತದಾನ ಹಾಗೂ ಮುಕ್ತ ಧಾರಾವಾಹಿಗೆ ಕಾವ್ಯ ಬರೆದುಕೊಟ್ಟ ಘಳಿಗೆ ಸ್ಮರಿಸುತ್ತಾ, ಎಚ್‌ಎಸ್‌ವಿ ದುಃಖ ಮತ್ತು ನೋವಿನ ಬಿಡುಗಡೆಗಾಗಿ ಬರೆದರು ಎಂದು ವ್ಯಾಖ್ಯಾನಿಸಿದರು. ಸಿ.ಅಶ್ವತ್ಥ್ , ಎಚ್ಎಸ್ವಿ ಹಾಗೂ ನನಗಾಗಿ ಅನೇಕ ಒಳ್ಳೆ ಹಾಡು ಹುಟ್ಟಿದವು. ಅವರ ನಿಧನದಿಂದ ನನಗೆ ತುಂಬಾ ನಷ್ಟವಾಗಿದೆ. ಇನ್ಮುಂದೆ ಯಾರಿಂದ ಬರೆಯಿಸಲಿ. ಮತ್ತೆ ಹುಟ್ಟಿದರೆ ನಿಮ್ಮನ್ನು ಒಡನಾಡುವ ಅವಕಾಶ ಸಿಗಲಿ ಎನ್ನುತ್ತಾ ಭಾವುಕ ಮಾತು ಮುಗಿಸಿದರು. ಜಯನಗರ ಶಾಸಕ ರಾಮಮೂರ್ತಿ ಸಹ ಭಾಗವಹಿಸಿದ್ದರು.

ಎಚ್ಎಸ್‌ವಿ ಅಂತಹವರನ್ನು ಸ್ಮರಿಸದಿದ್ದರೆ ಮತ್ತೊಮ್ಮೆ ಅವರನ್ನು ಕೊಂದಂತೆ. ಕನ್ನಡ ಭಾವಲೋಕ ಶ್ರೀಮಂತಗೊಳಿಸಿದವರು ಎಚ್ಎಸ್ವಿ. ಅವರ ಕೊನೆಯ ದಿನಗಳಲ್ಲಿ ಅವರೊಡನೆ ಒಡನಾಡುವ ಅದೃಷ್ಟ ನನ್ನದಾಗಿತ್ತು.
- ರವಿ ಹೆಗಡೆ, ಪ್ರಧಾನ ಸಂಪಾದಕರು, ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ

ವಿಷಾದಕ್ಕೆ, ಒಂಟಿತನಕ್ಕೆ ಹೀಗೆ ಒಂದೊಂದು ಭಾವಕ್ಕೂ ಹಾಡು ಕೊಟ್ಟವರು ಎಚ್ಎಸ್ವಿ. ಭಾವಗೀತೆಯ ತೇರನೆಳೆದವರು. ನಮ್ಮ ಎಲ್ಲ ಭಾವನೆಗೂ ಶಬ್ದ ಕೊಟ್ಟವರು. ಕವಿ ಬದುಕಿರೋದೆ ಅವರ ಕಾವ್ಯಗಳಿಂದ. ಅವರು ಮತ್ತೆ‌ ಮತ್ತೆ ಜೀವಂತರಾಗಿರುತ್ತಾರೆ.
- ಅಜಿತ್ ಹನಮಕ್ಕನವರ್, ಸಂಪಾದಕರು, ಏಷ್ಯಾನೆಟ್ ಸುವರ್ಣ ನ್ಯೂಸ್

ನಮ್ಮೆಲ್ಲರ ಭಾವನೆಗಳನ್ನು ಸರಳ ಶಬ್ದಗಳಲ್ಲಿ ಹಿಡಿದುಕೊಟ್ಟವರು ಎಚ್‌ಎಸ್‌ವಿ. ಅವರ ಒಂದೊಂದು ಹಾಡು ಒಂದೊಂದು ಗ್ರಂಥದಷ್ಟು ಅರ್ಥ ತುಂಬಿದವು. ಅವರನ್ನು ಸ್ಮರಿಸುವುದೇ ಅವರನ್ನು ಜೀವಂತವಾಗಿರಿಸಿಕೊಳ್ಳೋ ಒಳ್ಳೆ ವಿಧಾನ.
- ಡಾ. ಮಂಜುನಾಥ್, ಸಂಸದರು

ಕುಗ್ರಾಮದಲ್ಲಿ ಹುಟ್ಟಿ ದೊಡ್ಡ ಕವಿಯಾಗುವ ಸಂಕಲ್ಪ ಬಲದಿಂದ ಬೆಳೆದವರು ಎಚ್‌ಎಸ್‌ವಿ. ಮೊದಲಿಂದ ದೊಡ್ಡ ಕವಿಯಾಗೋ ಆಸೆಯಿಂದಲೇ ಶ್ರಮ ಹಾಕಿದವರು. ಅವರಿಗೆ ಚಳವಳಿ ಬೆಂಬಲ ಇರಲಿಲ್ಲ. ಗಾಡ್ ಫಾದರ್ ಇರಲಿಲ್ಲ. ಅವರ ಸಾಲುಗಳನ್ನು ಹಾಡುತ್ತಾ ಎಸ್ಪಿಬಿ ಅಂತಹವರು ಕಣ್ಣೀರಾಗಿದ್ದರು. ಒಬ್ಬರನೊಬ್ಬರು ವಿಮರ್ಶಿಸುತ್ತಾ ಬೆಳೆದವರು ನಾವು.
- ಬಿ.ಆರ್. ಲಕ್ಷ್ಮಣರಾವ್, ಖ್ಯಾತ ಕವಿ

ಕವಿ ತನ್ನದೇ ಕಾವ್ಯದ ಗುಂಗಿನಲ್ಲಿದ್ದರೂ ನಮ್ಮೆಲ್ಲ ಭಾವಗಳ ಬಗ್ಗೆಯೂ ಬರೆಯುತ್ತಾರೆ. ಕಷ್ಟಗಳನ್ನೇ‌ ಕಾವ್ಯವನ್ನಾಗಿಸಿದವರು ಎಚ್.ಎಸ್. ವೆಂಕಟೇಶಮೂರ್ತಿ. ಕವಿ ಮತ್ತು ಕಾವ್ಯ ಬೇರೆ ಅಲ್ಲ.
- ಜೋಗಿ, ಲೇಖಕರು ಹಾಗೂ ಕನ್ನಡಪ್ರಭ ಪುರವಣಿ ಸಂಪಾದಕರು

ನಾನು ಕವಿ ಅಲ್ಲದಿದ್ದರೂ ಎಚ್ಎಸ್‌ವಿ ಅವರ ಒಡನಾಡಿಯಾಗಿದ್ದೆ. ಅವರ ಕಾವ್ಯಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ತೃಪ್ತಿ ಇದೆ. ಏನೇ ಬರೆದುಕೊಡಿ ಅಂದ್ರೂ ದುಡ್ಡು ಕೇಳದೆ ಕೆಲಸ ಮಾಡಿಕೊಡುತ್ತಿದ್ದರು.
- ಶ್ರೀನಿವಾಸ್ ಕಪ್ಪಣ್ಣ, ರಂಗಕರ್ಮಿ

ಒಬ್ಬ ಜನಮಾನಸದ ಕವಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಇದು. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಈ ಕಾರ್ಯಕ್ರಮ ನಮ್ಮ ಸಂಸ್ಕೃತಿ ಬಗ್ಗೆ ಭರವಸೆ ಮೂಡಿಸಿದೆ. ಎಚ್ಚೆಸ್ವಿ ಅವರ ನಮ್ಮೆಲ್ಲರಿಗೂ ಋಣ ಭಾರ ಹೊರಿಸಿದ್ದಾರೆ.
- ಎಂ.ಎಸ್ ಮೂರ್ತಿ, ಖ್ಯಾತ ಚಿತ್ರಕಲಾವಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ