ಕೋಲಾರದ ಮಾಲೂರು, ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ, ಮಲಗುಂಡಿ ಸ್ವಚ್ಛಗೊಳಿಸಿದ ಘಟನೆ ಮಾಸುವ ಮುನ್ನವೇ ಶಿವಮೊಗ್ಗದ ಭದ್ರಾವತಿಯಲ್ಲೂ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ (ಡಿ.29): ಕೋಲಾರದ ಮಾಲೂರು, ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ, ಮಲಗುಂಡಿ ಸ್ವಚ್ಛಗೊಳಿಸಿದ ಘಟನೆ ಮಾಸುವ ಮುನ್ನವೇ ಶಿವಮೊಗ್ಗದ ಭದ್ರಾವತಿಯಲ್ಲೂ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಭಾರ ಮುಖ್ಯಶಿಕ್ಷಕರನ್ನು ಅಮಾನತು ಮಾಡಿ ಗುರುವಾರ ಆದೇಶ ಹೊರಡಿಸಲಾಗಿದೆ. ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರ್ನಾಲ್ಕು ವರ್ಷಗಳ ಹಿಂದೆ ಶಾಲೆಯಲ್ಲಿದ್ದ ಸ್ವಚ್ಛತಾ ಸಿಬ್ಬಂದಿಯನ್ನು ಬಿಇಒ ಕಚೇರಿಗೆ ನಿಯೋಜಿಸಲಾಗಿತ್ತು. ಆ ಬಳಿಕ ಮಕ್ಕಳೇ ಶಾಲಾ ಆವರಣದಲ್ಲಿ ಕಸ ಹೊಡೆಯುವುದು, ಶೌಚಾಲಯ ಶುಚಿಗೊಳಿಸುವ ಕೆಲಸ ಮಾಡಿಕೊಂಡು ಬಂದಿದ್ದರು. ಮೂರು ವಿದ್ಯಾರ್ಥಿಗಳು ಸರದಿಯಂತೆ ದಿನ ಬಿಟ್ಟು ದಿನ ಶಾಲೆಯ ಸ್ವಚ್ಛತೆ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಒಂದು ವೇಳೆ ಸ್ವಚ್ಛತಾ ಕೆಲಸ ಮಾಡದಿದ್ದರೆ ವರ್ಗಾವಣೆ (ಟಿಸಿ) ಪತ್ರ ಕೊಡುವುದಾಗಿ ಹೇಳಿ ನಮ್ಮಿಂದ ಶೌಚಾಲಯ ಮತ್ತು ಶಾಲೆ ಆವರಣ ಸ್ವಚ್ಛಗೊಳಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಪ್ರಧಾನಿ ಮೋದಿ ಗ್ಯಾರಂಟಿಗಳ ಬಗ್ಗೆ ಮಾತನಾಡದ ಕಾಂಗ್ರೆಸ್ ಸರ್ಕಾರ: ನಾರಾಯಣಸ್ವಾಮಿ ವಾಗ್ದಾಳಿ
ಮುಖ್ಯ ಶಿಕ್ಷಕ ಅಮಾನತು: ಶಾಲಾ ಮಕ್ಕಳ ಕೈಯಲ್ಲೇ ಶೌಚಾಲಯ ಸ್ವಚ್ಛಗೊಳಿಸಿದ ಆರೋಪ ಹಿನ್ನೆಲೆಯಲ್ಲಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪರನ್ನು ಅಮಾನತು ಮಾಡಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ. ಘಟನೆ ಸಂಬಂಧ ಬುಧವಾರ ಮಧ್ಯಾಹ್ನ ಭದ್ರಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಗುರುವಾರ ಬೆಳಗ್ಗೆ ಘಟನೆ ಸಂಬಂಧ ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ ವರದಿ ಆಧಾರದ ಮೇಲೆ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪರನ್ನು ಅಮಾನತು ಮಾಡಲಾಗಿದೆ.
PSI Scam: ಎಚ್ಡಿಕೆ, ಇತರರಿಗೆ ಯಾಕೆ ನೋಟಿಸ್ ನೀಡಿದ್ದಾರೆಂದು ಗೊತ್ತಿಲ್ಲ: ಸಚಿವ ಪರಮೇಶ್ವರ್
ಬಿಇಒ ಕಚೇರಿಯಿಂದ ಮತ್ತೆ ಶಾಲೆಗೆ ಆಯಾ ವರ್ಗಾವಣೆ: ಮಕ್ಕಳ ಕೈಯಲ್ಲೇ ಶಾಲೆ ಶೌಚಾಲಯ ಸ್ವಚ್ಛತಾ ಕೆಲಸ ಮಾಡಿಸುತ್ತಿರುವ ಸಂಬಂಧ ದಲಿತ ಸಂಘರ್ಷ ಸಮಿತಿ ಮುಖಂಡರು ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬಿಇಒ ಕಚೇರಿಯಲ್ಲಿ ಕರ್ತವ್ಯಕ್ಕೆ ನೇಮಿಸಿದ್ದ ಆಯಾ ಗೀತಾರನ್ನು ವಾಪಸ್ ಗುಡ್ಡದ ನೇರಳೆಕೆರೆ ಶಾಲೆಗೆ ವರ್ಗಾಯಿಸಲಾಗಿದೆ. ಗುರುವಾರ ಗುಡ್ಡದ ನೇರಳೆಕೆರೆ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಆಯಾ ಗೀತಾ ಅವರು ಶಾಲೆ ಆವರಣ ಮತ್ತು ಶೌಚಾಲಯ ಸ್ವಚ್ಛತೆ ಮಾಡಿದ್ದಾರೆ.