
ಮಂಡ್ಯ (ಅ.05): ಸ್ಲಂ ಬೋರ್ಡ್, ರಾಜೀವ್ ಗಾಂಧಿ ಯೋಜನೆಯಲ್ಲಿ ಬಿಜೆಪಿಯವರು ಒಂದು ಮನೆ ಕೊಟ್ಟಿದ್ದರೂ ನಾನು ದೇವರಾಣೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಬಿಜೆಪಿಯವರು ಇದನ್ನು ಸಾಬೀತು ಮಾಡಿದರೆ ಇಂದು ಸಂಜೆಯೇ ರಾಜ್ಯಪಾಲರ ನಿವಾಸಕ್ಕೆ ಹೋಗಿ ರಾಜೀನಾಮೆ ಪತ್ರ ಕೊಡುವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಅವರು ಬಿಜೆಪಿ ನಾಯಕರಾದ ಆರ್.ಅಶೋಕ್ ಮತ್ತು ವಿಜಯೇಂದ್ರ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಪಟನಾ: ಮತದಾನಕ್ಕೆ ಬುರ್ಖಾ ಧರಿಸಿ ಬರುವ ಮಹಿಳೆಯರ ಮುಖವನ್ನು ಮತದಾನ ಗುರುತಿನ ಚೀಟಿಯಲ್ಲಿ ಪರಿಶೀಲಿಸಿ ಬಳಿಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ವಿಧಾನಸಭೆ ಚುನಾವಣೆ ಪರಿಶೀಲನೆಗಾಗಿ ಶನಿವಾರ ಪಟನಾಗೆ ಆಗಮಿಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಈ ಬೇಡಿಕೆ ಇರಿಸಿದ್ದಾರೆ. ‘ಮತದಾನವನ್ನು 1 ಅಥವಾ 2 ಹಂತಗಳಲ್ಲಿ ಮಾಡಬೇಕು. ಅದಕ್ಕೂ ಮೊದಲು ಮತಪಟ್ಟಿಗೆ ಮುತ್ತಿಗೆ ಹಾಕಿರುವ ಇತಿಹಾಸ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಬೇಕು. ಭದ್ರತಾ ಪಡೆಗಳ ಪರೇಡ್ ಮಾಡಬೇಕು. ಬುರ್ಖಾ ಧರಿಸಿದ ಮಹಿಳೆಯರ ಮುಖವನ್ನು ಸರಿಯಾಗಿ ಪರಿಶೀಲಿಸಿ ನಂತರ ಮತದಾನಕ್ಕೆ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
3.ಗೋಕಾಕ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಹೃದಯಾಘಾತದಿಂದ ಸಾವು
ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಸತೀಶ ಬಾಗನ್ನವರ (16) ಆರೋಗ್ಯದಲ್ಲಿ ಶನಿವಾರ ಬೆಳಗ್ಗೆ ಏರುಪೇರು ಉಂಟಾಗಿದೆ. ತಮ್ಮ ಬದುಕುಳಿಯುವುದಿಲ್ಲ ಎಂಬ ಸುದ್ದಿ ಅಣ್ಣ ಬಸವರಾಜ ಬಾಗನ್ನವರ (24)ಗೆ ತಿಳಿದು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ತಮ್ಮನ ಸಾವಿನ ಸುದ್ದಿ ಕೇಳಿ ಬಸವರಾಜ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
4.ಬಸವ ಅಭಿಯಾನಕ್ಕೆ ಸಿಎಂ ಹೋದ್ರೆ ಕೈ ನಾಶ; ವೀರಶೈವ ಲಿಂಗಾಯತ ಶ್ರೀಗಳು ಎಚ್ಚರಿಕೆ
ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಸಿಎಂ ಹೋದರೆ ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿಯಾಗಲಿದೆ ಎಂದು ವೀರಶೈವ ಲಿಂಗಾಯತ ಮಠಾಧೀಶರು, ಸ್ವಾಮೀಜಿಗಳು ಎಚ್ಚರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಕುರಿತು ಬಾಗಲಕೋಟೆಯಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ದಿಂಗಾಲೇಶ್ವರ ಸ್ವಾಮೀಜಿ, ಭಾನುವಾರ ಅರಮನೆ ಮೈದಾನದಲ್ಲಿ ನಡೆಯುವುದು ಪ್ರತ್ಯೇಕ ಲಿಂಗಾಯತವಾದಿಗಳ ಕಾರ್ಯಕ್ರಮವಾಗಿದೆ. ಬಹುಶಃ ಇದು ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿ ಹಾಡುತ್ತೆ ಎನ್ನುವ ಪೂರ್ವ ಸೂಚನೆ ಕಾಣುತ್ತಿದೆ.
5.ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕೇಸ್ ದಾಖಲು : ಡಿ.ಕೆ.ಶಿವಕುಮಾರ್ ಸೂಚನೆ
ಬೆಂಗಳೂರು : ದಸರಾ ಹಬ್ಬ ಹಾಗೂ ರಜೆಗಳ ಹಿನ್ನೆಲೆ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಇದರ ನಿವಾರಣೆಗೆ ಅಭಿಯಾನ ಕೈಗೊಂಡಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಲು ಡಬ್ಬಿಗಳು ಇಟ್ಟಿರುವ ಬಗ್ಗೆ ಪಾಲಿಕೆಗಳ ಆಯುಕ್ತರಿಂದ ವರದಿ ಕೇಳಿದ್ದೇನೆ. ಜಿಬಿಎ ಹಾಗೂ ಐದು ಪಾಲಿಕೆಗಳ ಆಯುಕ್ತರು ಸೇರಿ ಇತರೆ ನಗರಗಳಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಂಬುದನ್ನು ತಿಳಿದುಕೊಂಡು ವರದಿ ನೀಡುವಂತೆ ತಿಳಿಸಿದ್ದೇನೆ. ಎಲ್ಲೆಂದರಲ್ಲಿ ಕಸ ಬಿದ್ದಿದ್ದರೆ ಅದರ ಫೋಟೋ ತೆಗೆದು ಪಾಲಿಕೆಗಳು ಸೂಚಿಸಿರುವ ದೂರವಾಣಿ ಸಂಖ್ಯೆಗೆ ಕಳುಹಿಸಬೇಕು ಎಂದು ಅವರು ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ