Today Top News: ಕಾಂತಾರಕ್ಕೆ ಕಂಟಕ, ರಾಹುಲ್‌ಗೆ ಬೆದರಿಕೆ: ಇಂದಿನ ಪ್ರಮುಖ 5 ಟಾಪ್ ನ್ಯೂಸ್

Published : Sep 30, 2025, 07:31 AM IST
top stories today

ಸಾರಾಂಶ

Today’s top 5 news in kannada: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ನವೆಂಬರ್ ನಂತರ ಸಂಪುಟ ವಿಸ್ತರಣೆಯಾಗುವ ಸುಳಿವನ್ನು ಸಚಿವ ಜಮೀರ್ ಅಹ್ಮದ್ ನೀಡಿದ್ದಾರೆ. 

1.ನೆರೆ ಪೀಡಿತ ಜಿಲ್ಲೆಗಳಲ್ಲಿಂದು ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಜಯಪುರ, ಯಾದಗಿರಿ, ಬೀದರ್‌ ಮತ್ತು ಕಲಬುರಗಿ ಜಿಲ್ಲೆಗಳ ಮಳೆ, ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು 11.40ರ ವೇಳೆಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ಬಳಿಕ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ವಿಜಯಪುರ, ಯಾದಗಿರಿ, ಬೀದರ್‌ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮಳೆ ಹಾನಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಮಧ್ಯಾಹ್ನ 2 ವೇಳೆಗೆ ಸಮೀಕ್ಷೆ ಪೂರ್ಣಗೊಳಿಸಿ ಕಲಬುರಗಿ ನಗರದ ಐವಾನ್‌-ಇ-ಷಾಹಿ ವಸತಿ ಗೃಹಕ್ಕೆ ಆಗಮಿಸಲಿದ್ದಾರೆ.

2.ಸಂಪುಟ ವಿಸ್ತರಣೆ : ಸಚಿವ ಜಮೀರ್‌ ಕೊಟ್ರು ಹೊಸ ಸುಳಿವು

ಬಳ್ಳಾರಿ : ‘ನವೆಂಬರ್‌ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಬಳ್ಳಾರಿಯವರೇ ಆಗಿರುವ ಬಿ.ನಾಗೇಂದ್ರ ಅವರು ಮತ್ತೆ ಸಂಪುಟ ಸೇರಲಿದ್ದು, ಇನ್ನು 15 ದಿನಗಳಲ್ಲಿ ಅವರಿಗೆ ಸಚಿವರಾಗುವ ಯೋಗ ಕೂಡಿ ಬರಲಿದೆ. ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ’ ಎಂದು ವಸತಿ, ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.  ಇದೇ ವೇಳೆ, ಸಿಎಂ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ. ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದರು.

3.ಕನ್ನಡದಲ್ಲಿ ರಿಷಬ್‌ ಶೆಟ್ಟಿ ಮಾತು: ತೆಲುಗು ಪ್ರೇಕ್ಷಕರಿಂದ ಟ್ರೋಲ್‌, ಕಾಂತಾರ ಸಿನಿಮಾಗೆ ಬಹಿಷ್ಕಾರದ ಕರೆ

ಬೆಂಗಳೂರು (ಸೆ.30): ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ‘ಕಾಂತಾರ 1’ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡದಲ್ಲಿ ಮಾತನಾಡಿದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ವಿರುದ್ಧ ತೆಲುಗು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಸಿಟ್ಟು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ‘ಕಾಂತಾರ 1’ ಚಿತ್ರ ಬಹಿಷ್ಕರಿಸಲು ಕರೆ ನೀಡಿದ್ದು, #BoycottKantaraChapter1, #RespectTelugu ಎನ್ನುವ ಹ್ಯಾಷ್‌ ಟ್ಯಾಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗುತ್ತಿವೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜೂ.ಎನ್‌ಟಿಆರ್‌ ಕೂಡ ಟ್ರೋಲ್‌ಗೆ ತುತ್ತಾಗಿದ್ದಾರೆ.

4.ರಂಗೋಲಿಯಲ್ಲಿ ಐ ಲವ್‌ಮೊಹಮ್ಮದ್‌ : ಮಹಾಗ್ರಾಮ ಉದ್ವಿಗ್ನ ಸ್ಥಿತಿ - ಆರೋಪಿ ವಶಕ್ಕೆ

ಮುಂಬೈ: ಐ ಲವ್‌ ಮೊಹಮ್ಮದ್‌ ವಿವಾದ ದಿನೇ ದಿನೇ ಐ ಲವ್‌ ಮೊಹಮ್ಮದ್‌ ವಿವಾದ ವ್ಯಾಪಕವಾಗುತ್ತಿದ್ದು, ಇದೀಗ ಮಹಾರಾಷ್ಟ್ರದ ಅಹಲ್ಯಾನಗರದ ಮಿಲಿವಾಡಾದಲ್ಲಿ ಗುಂಪೊಂದು ರಂಗೋಲಿಯಲ್ಲಿ ಐ ಲವ್‌ ಮೊಹಮ್ಮದ್‌ ಎಂದು ಬರೆದಿದೆ. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ರಂಗೋಲಿ ಬಿಡಿಸಿದವನನ್ನು ಪೊಲೀಸರು ಬಂಧಿಸಿದರಾದರೂ ಕ್ರೋಧ ತಣಿಯದೆ, ಮುಸ್ಲಿಂ ಯುವಕರು ಹೆದ್ದಾರಿ ತಡೆದು, ಕಲ್ಲುತೂರಾಟ ನಡೆಸಿದ್ದಾರೆ. ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ‘ಕೋಮುಸಾಮರಸ್ಯ ಹಾಳುಗೆಡಹುವ ಉದ್ದೇಶದಿಂದಲೇ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

5.ಭಾರತದಲ್ಲೂ ಜೆನ್‌ ಝೀ ಹೋರಾಟ ಬಯಸಿದ್ರೆ ರಾಹುಲ್‌ ಎದೆಗೆ ಗುಂಡು

ತಿರುವನಂತಪುರ: ದೇಶದ ಜನತೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎದೆಗೆ ಗುಂಡಿಕ್ಕಬಹುದು ಎಂದು ಕೇರಳದ ಬಿಜೆಪಿ ನಾಯಕರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಈ ಬಗ್ಗೆ ಕಾಂಗ್ರೆಸ್‌ ನಾಯಕರು, ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಪತ್ರ ಮುಖೇನ ದೂರಿದ್ದಾರೆ. 

ಬಾಂಗ್ಲಾ, ನೇಪಾಳದಲ್ಲಿ ನಡೆದ ಜೆನ್‌ ಝೀ ಪ್ರತಿಭಟನೆ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ವಕ್ತಾರ ಮಹಾದೇವನ್‌ ‘ಭಾರತದಲ್ಲಿ ನರೇಂದ್ರ ಮೋದಿ ಪ್ರಧಾನಿಯಾ ಗಿರುವುದರಿಂದ ಅಂತಹ ಪರಿಸ್ಥಿತಿ ಬರುವುದಿಲ್ಲ. ಭಾರತೀಯರು ನರೇಂದ್ರ ಮೋದಿಯವರ ಪರವಾಗಿ ನಿಂತಿದ್ದಾರೆ. ರಾಹುಲ್‌ ಗಾಂಧಿ ಅಂತಹ ಸನ್ನಿವೇಶ ಸೃಷ್ಟಿಯಾಗಬೇಕು ಎಂದು ಬಯಸಿದರೆ ಗುಂಡುಗಳು ಅವರ ಎದೆಗೆ ಚುಚ್ಚಬಹುದು’ ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!