ಯುಗಾದಿ ಹಬ್ಬ ಮತ್ತು ಪಂಚಾಂಗ ಶ್ರವಣದ ಅವಿನಾಭಾವ ಸಂಬಂಧವನ್ನು ಈ ಲೇಖನ ವಿವರಿಸುತ್ತದೆ. ಪಂಚಾಂಗ ಶ್ರವಣವು ಭವಿಷ್ಯದ ನಿರೀಕ್ಷೆಗಳನ್ನು ತಿಳಿಯಲು ಮತ್ತು ಮಳೆ, ಬೆಳೆಗಳ ಬಗ್ಗೆ ಮಾಹಿತಿ ಪಡೆಯಲು ಒಂದು ಮಾರ್ಗವಾಗಿದೆ.
- ನಾರಾಯಣ ಯಾಜಿ
ಯುಗಾದಿ ಹಬ್ಬಕ್ಕೂ ಪಂಚಾಂಗ ಶ್ರವಣಕ್ಕೂ ಅವಿನಾಭಾವ ಸಂಬಂಧವಿದೆ. ಆ ದಿನ ಬೆಳಿಗ್ಗೆಯೇ ಎದ್ದು ಬೇವು- ಬೆಲ್ಲವನ್ನು ಹಂಚಿ ಸಂಭ್ರಮ ಪಟ್ಟರೆ ಸಾಯಂಕಾಲ ಆಗುತ್ತಿದ್ದಂತೆ ಮಠವೋ, ದೇವಾಲಯವೋ, ಅರಳಿಕಟ್ಟೆಯೋ ಯಾವುದೋ ಒಂದೆಡೆ ಎಲ್ಲರೂ ಸೇರಿ ಅಲ್ಲಿ ಬಲ್ಲವರು ಪಂಚಾಂಗವನ್ನು ಓದುವ ಘಳಿಗೆಗಾಗಿ ಕಾದಿರುತ್ತಾರೆ. ಕೇಳುಗರಿಗೆ ವೈಯಕ್ತಿಕ ಆಸೆ ಏನಿಲ್ಲ. ಆದರೆ ಬರುವ ವರ್ಷ ಮಳೆ ಹೇಗಿರಬಹುದು, ಯಾವ ಬೆಳೆ ಬೆಳೆದರೆ ಅನುಕೂಲ, ಚಿನ್ನದ ದರ ಎಷ್ಟಾಗಬಹುದು ಎನ್ನುವ ವಿಷಯಗಳನ್ನು ಕೇಳಿ ತಿಳಿದುಕೊಳ್ಳುವ ಕುತೂಹಲ.
ಮುಂದಿನ ಒಂದು ವರ್ಷದ ನಿರೀಕ್ಷೆಗಳು, ಮಗಳದ್ದೋ-ಮಗನದ್ದೋ ಮದುವೆ, ಮನೆ ಕಟ್ಟುವಿಕೆ ಎಲ್ಲವೂ ನಿರ್ಧಾರವಾಗುವುದು ಈ ಪಂಚಾಂಗ ಶ್ರವಣದ ಆಧಾರದಲ್ಲಿದೆ. ಒಳಿತನ್ನು ಹೇಳಿದರೆ ದೇವರ ಕೃಪೆಯೆಂದೂ, ಕೆಡಕನ್ನು ವಿವರಿಸಿದರೆ ಅದನ್ನು ತಪ್ಪಿಸಲು ದೇವರಿಗೆ ಮೊರೆ ಹೋಗುವುದೆಂದು ನಂಬಿಕೆ ಅವರದ್ದು. ಕೊನೆಯಲ್ಲಿ ಮಂಗಳಾರತಿ ಸ್ವೀಕರಿಸಿ ತೆರಳುತ್ತಾರೆ.
ದೀಪಾವಳಿ, ನವರಾತ್ರಿ, ಸಂಕ್ರಾಂತಿ ಹಬ್ಬಗಳು ಆರಾಧನೆಯ ಹಬ್ಬವಾದರೆ ಯುಗಾದಿ ಭವಿಷ್ಯದ ನಿರೀಕ್ಷೆಯ ಹಬ್ಬ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಪಂಚಾಂಗ ಶ್ರವಣ ಅಥವಾ ಓದುವುದು ಎನ್ನುವುದು ಇತ್ತೀಚೆಗೆ ಕೇವಲ ಚಡಂಗವಾಗಿದೆ. ಒಂಟಿಕೊಪ್ಪಲು, ಧಾರ್ಮಿಕ, ಬಗ್ಗೋಣ ಅಥವಾ ಉಡುಪಿ ಪಂಚಾಂಗಗಳೆಲ್ಲದರಲ್ಲಿ ಬರೆದಿಟ್ಟ ವರ್ಷಫಲದ ವರದಿ ಹೇಳುವುದಷ್ಟಕ್ಕೆ ಸೀಮಿತವಾಗಿದೆ.
ಕಾಲಗಣನೆಯ ವೈಶಿಷ್ಟ್ಯ
ಪ್ರಪಂಚದ ಇತಿಹಾಸದಲ್ಲಿ ಕಾಲಗಣನೆಯಲ್ಲಿ ಭಾರತೀಯರು ಅಗ್ರಸ್ಥಾನ ಪಡೆಯುತ್ತಾರೆ. ಪ್ರಾಚೀನ ಭಾರತದಲ್ಲಿ ಕಾಲಗಣನೆ ಎಂದರೆ, ಅದು ಯಾವುದೋ ಪ್ರದೇಶದಲ್ಲಿ ಇರುವ ಸಮಯವನ್ನು ಎಲ್ಲಾ ಕಡೆಯೂ ಅನುಸರಿಸುವುದಲ್ಲ. ಪ್ರತೀ ಸ್ಥಳಕ್ಕೂ ಅದರದೇ ಆದ ಕಾಲ ಮತ್ತು ಸಮಯ ಇದೆ ಎನ್ನುವ ಅರಿವಿತ್ತು. ಅಲಹಾಬಾದ್ ಸಮೀಪದ ‘ಮಿರ್ಜಾಪುರ’ (82.5 ಡಿಗ್ರಿ ರೇಖಾಂಶ) ಎನ್ನುವ ಪ್ರದೇಶದ ಸಮಯವನ್ನು ಭಾರತದ (IST) ಸಮಯ ಪಾಲನೆಯನ್ನಾಗಿ ಗಣಿಸಲಾಗುತ್ತಿದೆ. ಸುಮ್ಮನೆ ಒಂದು ಲೆಕ್ಕವನ್ನು ಗಮನಿಸಿ, ಭಾರತದ ಪೂರ್ವಾಂಚಲದ ಕೊನೆಯ ಪ್ರದೇಶವಾದ ಅರುಣಾಚಲದ ‘ಕಿಬಿತು’ (97.395 ಡಿಗ್ರಿ ರೇಖಾಂಶ) ಪ್ರದೇಶಕ್ಕೂ ಪಶ್ಚಿಮದ ಕೊನೆಯ ಪ್ರದೇಶವಾದ ಗುಜರಾತ್ ರಾಜ್ಯದ ಕಛ್ ತೀರದ ಸರ್ ಕ್ರೀಕ್ ಪ್ರದೇಶ (68.1941 ಡಿಗ್ರಿ ರೇಖಾಂಶ)ಕ್ಕೂ ನಡುವೆ ಸುಮಾರು 30 ಡಿಗ್ರಿ (2900 ಕಿ.ಮೀ.) ಅಂತರವಿದೆ. ಈ ಎರಡೂ ಪ್ರದೇಶಗಳ ನಡುವೆ ಸುಮಾರು ಎರಡು ಗಂಟೆಯಷ್ಟು ವ್ಯತ್ಯಾಸ.
IST ಪ್ರಕಾರ, ಸೂರ್ಯ ಸುಮಾರು 5 ಗಂಟೆಗೆ ‘ಕಿಬಿತು’ವಿನಲ್ಲಿ ಮೂಡಿದರೆ ‘ಸರ್ ಕ್ರೀಕ್’ನಲ್ಲಿ 7 ಗಂಟೆಗೆ ಮೂಡುತ್ತಾನೆ. ಅದೇ ಮಿರ್ಜಾಪುರದಲ್ಲಿ ಆಗ 6 ಗಂಟೆ. ಗ್ರೀನ್‌ವಿಚ್ ಸಮಯಪಾಲನೆಯಲ್ಲಿನ ಕೊರತೆಯಿದು. ಅನೇಕ ಸಲ ನಮ್ಮಲ್ಲಿ ಒಂದೇ ಹಬ್ಬ ಬೇರೆ ಬೇರೆ ಪಂಚಾಂಗಗಳ ಪ್ರಕಾರ ಬೇರೆ ದಿನಗಳಲ್ಲಿ ಬರುವುದುಂಟು. ಅದಕ್ಕಾಗಿ ಗೇಲಿಗೂ ಒಳಗಾಗಿವೆ. ಇದಕ್ಕೆ ಕಾರಣ ಪಂಚಾಂಗದ ಸಮಯಪಾಲನೆ ಸ್ಥಳೀಯವಾಗಿರುವುದು. ಕರ್ನಾಟಕದ ಅಧಿಕೃತ ಪಂಚಾಂಗವಾದ ಒಂಟಿಕೊಪ್ಪಲು ಮೈಸೂರಿನ ರೇಖಾಂಶದ ಸಮಯವನ್ನು ಅನುಸರಿಸಿದರೆ, ಉಡುಪಿ ಪಂಚಾಂಗ ಉಡುಪಿಯ, ಬಗ್ಗೋಣ ಪಂಚಾಂಗ ಗೋಕರ್ಣದ, ಧಾರ್ಮಿಕ ಪಂಚಾಂಗ ಕೊಲ್ಲೂರಿನ ರೇಖಾಂಶವನ್ನು ಆಧರಿಸಿ ಮಾಡಿದ ಲೆಕ್ಕಾಚಾರವಾಗಿದೆ. ಒಂದು ರೇಖಾಂಶಕ್ಕೂ ಮತ್ತೊಂದು ರೇಖಾಂಶಕ್ಕೂ 4 ನಿಮಿಷದ ಅಂತರ. ಹಾಗಾಗಿ ಹೆಚ್ಚಿನ ಸಲ ಪಂಚಾಂಗದಲ್ಲಿ ಒಂದೇ ಹಬ್ಬ ಬೇರೆ ಬೇರೆ ದಿವಸ ಬರುವುದುಂಟು.
ಮಂತ್ರಿಮಂಡಲ ಕೌತುಕ
ಜನ್ಮ ಪತ್ರಿಕೆಯ ಗ್ರಹಗಳಲ್ಲಿ ಸೂರ್ಯನೇ ಯಾವಾಗಲೂ ರಾಜ. ಶನಿಗ್ರಹ ಸೇವಕ, ಮಂಗಳಗ್ರಹ ಸೇನಾಧಿಪತಿ ಹೀಗೆ ಸಾಗುತ್ತವೆ. ಆದರೆ ವರ್ಷ ಫಲದಲ್ಲಿ ಹಾಗಲ್ಲ. ಪ್ರತಿ ವರ್ಷವೂ ಓರ್ವ (ಛಾಯಾ ಗ್ರಹಗಳಾದ ರಾಹು ಕೇತುವನ್ನು ಬಿಟ್ಟು) ರಾಜನಾಗುತ್ತಾನೆ. ಆತನ ಸಹಾಯಕ್ಕೆ ಒಂಭತ್ತು ಮಂತ್ರಿಗಳು ಇರುತ್ತಾರೆ. ಅವರವರ ಗುಣ ಸ್ವಭಾವಕ್ಕೆ ಅನುಸರಿಸಿ ಆಯಾ ಸಂವತ್ಸರದಲ್ಲಿ ಮಳೆ, ಬೆಳೆ, ಪ್ರಕೃತಿ ವಿಕೋಪಗಳುಂಟಾಗುತ್ತವೆ ಎಂದು ನಂಬಲಾಗುತ್ತದೆ. ಪಂಚಾಂಗ ಶ್ರವಣದ ಈ ಮುಖ್ಯಭಾಗ ಮೂಲತಃ ‘ಕಾಲಪ್ರಕಾಶಿಕಾ’ ಮತ್ತು ‘ಪರಾಶರ ಹೋರಾ’ ಶಾಸ್ತ್ರವನ್ನು ಆಧರಿಸಿದೆ. ರಾಜ ಮತ್ತು ಇನ್ನಿತರ ಮಹತ್ವದ ಖಾತೆಗಳಾದ ಅಮಾತ್ಯ, ಸೈನ್ಯಾಧಿಪತಿ, ಮಳೆಯಾಧಿಪತಿಗಳೆಲ್ಲವೂ ನಿರ್ಧಾರವಾಗುವುದು ಸೂರ್ಯ ಯಾವ ಯಾವ ವಾರಗಳಂದು ಅದಕ್ಕೆ ನಿರ್ಧರಿಸಲ್ಪಟ್ಟ ರಾಶಿ ಮತ್ತು ನಕ್ಷತ್ರಗಳನ್ನು ಪ್ರವೇಶಿಸುವ ದಿನದಿಂದಾಗುತ್ತದೆ.
ಯುಗಾದಿ ಹಬ್ಬವೆಂದರೆ ಬ್ರಹ್ಮ ಈ ಸೃಷ್ಟಿಯನ್ನು ಪ್ರಾರಂಭಿಸಿದ ದಿವಸ. ಸನಾತನ ಪಂಚಾಂಗದ ವರ್ಷ ಪ್ರಾರಂಭವಾಗುವುದೇ ಯುಗಾದಿಯ ದಿನದಿಂದ. ಬ್ರಹ್ಮ ಸ್ವಯಂಭು ಮನ್ವಂತರದಲ್ಲಿ ಈ ಸೃಷ್ಟಿಯನ್ನು ಪ್ರಾರಂಭಿಸಿದ ದಿನವಿದು. ಹೊಸ ಸಂವತ್ಸರ ಯಾವ ವಾರ ಪ್ರಾರಂಭವಾಗುತ್ತದೆಯೋ ಆ ದಿನದ ಗ್ರಹದ ಅಧಿಪತಿಯನ್ನು ಆಯಾ ವರ್ಷದ ರಾಜನೆಂದು ಪರಿಗಣಿಸುತ್ತಾರೆ.
ಇಲ್ಲಿ ಬಹುಮುಖ್ಯವಾದ ಅಂಶವೆಂದರೆ, ಚಂದ್ರ ರೇವತಿ ನಕ್ಷತ್ರದಲ್ಲಿರಬೇಕು, ವಿಶ್ವಾವಸು ಸಂವತ್ಸರದ ಚೈತ್ರಮಾಸದ ಮೊದಲ 2025ರ ಮಾರ್ಚ್ 30 ರ ರವಿವಾರದಂದು ಬರುತ್ತದೆ. ಆ ದಿವಸದ ನಿತ್ಯ ನಕ್ಷತ್ರ ರೇವತಿಯಾಗಿದೆ. ವಿಶ್ವಾವಸು ಸಂವತ್ಸರದ ರಾಜ ಸೂರ್ಯನಾಗಿದ್ದಾನೆ. ಸೂರ್ಯನ ಗುಣಲಕ್ಷಣಗಳೆಂದರೆ, ಉರಿ ಮತ್ತು ಕ್ರೂರ ಗ್ರಹವಾದ ಕಾರಣ ಆತ ಇರುವಲ್ಲಿ ನೀರಿನ ಕೊರತೆ ಇರುತ್ತದೆ. ಕಳೆದ ವರ್ಷದ ಚೈತ್ರ ಪಾಡ್ಯ 2024ರ ಏಪ್ರಿಲ್ 9ರ ಮಂಗಳವಾರ ಬಂದಿತ್ತು. ಹಾಗಾಗಿ ಕಳೆದ ವರ್ಷದ ರಾಜ ಕುಜಗ್ರಹವಾಗಿದ್ದ. ಎರಡನೆಯ ಮಹತ್ವದ ಸ್ಥಾನ ಮಂತ್ರಿ. ಇಲ್ಲಿಯೂ ಸೂರ್ಯನ ಮೊದಲ ರಶ್ಮಿ ಮೇಷ ರಾಶಿಯನ್ನು ಪ್ರವೇಶಿಸುವ ವಾರದ ಅಧಿಪತಿಯನ್ನು ಮಂತ್ರಿ ಎಂದು ಗುರುತಿಸಲಾಗುತ್ತದೆ.
ಇದನ್ನೂ ಓದಿ: ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಅದೇ ದಿನ ಮಧ್ಯಾಹ್ನ ಸುಮಾರು 12.49 ಘಂಟೆಗೆ ಸೂರ್ಯ ಮೇಷರಾಶಿಯ ಪ್ರಾರಂಭವಾಗುವ ಅಶ್ವಿನಿ ನಕ್ಷತ್ರವನ್ನು ಪ್ರವೇಶಿಸುವುದರಿಂದ ಅಮಾತ್ಯನಾಗಿ ರವಿಯೇ ಕಾರ್ಯವನ್ನು ನಿರ್ವಹಿಸುತ್ತಾನೆ. ಈ ವರ್ಷ ರವಿಯ ಪ್ರತಾಪ ಇಲ್ಲಿಗೇ ಮುಗಿಯುತ್ತಿಲ್ಲ. ಮಳೆಯನ್ನು ತರುವ ಮೋಡಗಳ ಅಧಿಪತಿಯೂ(ನೀರಾವರಿ ಮಂತ್ರಿ) ಅವನೇ ಆಗಿದ್ದಾನೆ. ಮಳೆಯನ್ನು ಆರ್ದ್ರಾ ನಕ್ಷತ್ರದ ಮೂಲಕ ಲೆಕ್ಕ ಹಾಕುತ್ತಾರೆ. ಇಂದಿಗೂ ಸಹ ಹಳ್ಳಿಗಳಲ್ಲಿ ‘ಆರ್ದ್ರಾ ಮಳೆಯಂತೆ ಉಳಿದ ಆರು ಮಳೆ’ ಎನ್ನುವ ಗಾದೆಯಿದೆ. ಸೂರ್ಯ ಆರ್ದ್ರಾ ನಕ್ಷತ್ರಕ್ಕೆ ಪ್ರವೇಶಿಸುವ ಮುಹೂರ್ತದ ವಾರದ ಅಧಿಪತಿ ನೀರಾವರಿ ಮಂತ್ರಿಯಾಗಿರುತ್ತಾನೆ.
ಜೂ.6ಕ್ಕೆ ಆರ್ದ್ರಾ ನಕ್ಷತ್ರ ಪ್ರವೇಶ
ಸಾಮಾನ್ಯವಾಗಿ ಜೂನ್ 21 ಅಥವಾ 22 ಕ್ಕೆ ಸೂರ್ಯ ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ(ಮಿಥುನ ರಾಶಿ). ಈ ವರ್ಷ ಆರ್ದ್ರಾ ನಕ್ಷತ್ರ ಜೂನ್ ತಿಂಗಳ 26 ರಂದು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ರವಿವಾರವೇ ಬರುವುದರಿಂದ ಮತ್ತೆ ನೀರಾವರಿ ಖಾತೆಯನ್ನೂ ಸೂರ್ಯನೇ ತನ್ನಲ್ಲಿ ಇರಿಸಿಕೊಂಡಿದ್ದಾನೆ. ಒಟ್ಟಾರೆಯಾಗಿ ನೋಡಿದರೆ ಈ ವರ್ಷ ಸೂರ್ಯ ಹೆಚ್ಚಿನ ಎಲ್ಲಾ ಖಾತೆಗಳನ್ನು ತನ್ನಲ್ಲಿಯೇ ಇರಿಸಿಕೊಂಡು ಸರ್ವಾಧಿಕಾರಿಯಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ!
ರೈತರಿಗೆ ಮಳೆಗಾಲದ ಬೆಳೆ ಬಹು ಮುಖ್ಯ. ಮಳೆ ಸರಿಯಾಗಿ ಬಿದ್ದರೂ ಒಮ್ಮೊಮ್ಮೆ ರೋಗವೂ, ಪ್ರವಾಹವೋ ಬಂದು ಬೆಳೆ ಸರಿಯಾಗಿ ಬಾರದೇ ಹೋಗಬಹುದು. ಇದನ್ನು ತಿಳಿಯಲಿಕ್ಕೆ ಸೂರ್ಯನು ಪುನರ್ವಸು ನಕ್ಷತ್ರದ ನಾಲ್ಕನೆಯ ಪಾದಕ್ಕೆ (10-13.20 ಡಿಗ್ರಿ) ಬರುವುದನ್ನು ಕಾಯಬೇಕು. ಸುಮಾರು ಜುಲೈ 14- 16ರ ಹೊತ್ತಿಗೆ ಕರ್ಕ ಸಂಕ್ರಾಂತಿಯಂದು ಯಾವ ವಾರ ಬರುತ್ತದೆಯೋ ಆ ವಾರದ ಗ್ರಹಾಧಿಪತಿ (ಈ ಸಲ ಗುರುವಾರ-ಗುರು ಗ್ರಹ). ಮಳೆಗಾಲದ ಬೆಳೆಗಳಾದ ಭತ್ತ, ರಾಗಿ ಮುಂತಾದ ಆಹಾರ ಪದಾರ್ಥಗಳ ಅಧಿಪತಿಯಾಗುತ್ತಾನೆ. ಹಣ್ಣು ಮತ್ತು ತರಕಾರಿಗಳ ಭವಿಷ್ಯವನ್ನು ತಿಳಿಯುವುದು ಸೂರ್ಯ ತುಲಾ ರಾಶಿಗೆ ಪ್ರವೇಶಿಸುವ ವಾರದ ಅಧಿಪತಿಯ ದಿನದಂದು.
ಈ ಸಲ ಇದು ಬುಧವಾರ ಬರುವುದು ಹಾಗಾಗಿ ಬುಧ ಇದರ ಅಧಿಪತಿ.
ಅದೇ ಬೇಸಿಗೆಯ ಬೆಳೆಗಳ ಭವಿಷ್ಯ ಸೂರ್ಯ ಧನು ರಾಶಿಗೆ ಪ್ರವೇಶಿಸುವ ದಿನದಂದು (ಡಿಸೆಂಬರ್ 15 ರ ಸೋಮವಾರ) ಅಂದರೆ, ಚಂದ್ರ ಬೇಸಿಗೆಯ ಬೆಳೆಯ ಅಧಿಪತಿಯಾಗಲಿದ್ದಾನೆ. ಸೂರ್ಯ ಸಿಂಹ ರಾಶಿಗೆ ಪ್ರವೇಶಿಸುವ ದಿನದ ಅಧಿಪತಿ ರಕ್ಷಣಾ ಮಂತ್ರಿಯಾಗಲಿದ್ದಾನೆ. ಈ ಸಲ ಆಗಸ್ಟ್ 16ರ ಶನಿವಾರ, ಶನಿ ರಕ್ಷಣಾ ಮಂತ್ರಿ).
ಮೇಲಿನ ಎಲ್ಲಾ ಸಂಗತಿಗಳು ಮೇಲುಸ್ತರದಲ್ಲಿ ಮೊದಲು ಹಳ್ಳಿಯ ರೈತಾಪಿ ಜನರಿಗೆ ತಿಳಿದಿತ್ತು. ಅದನ್ನು ನಂಬಿ ಆಚರಿಸುತ್ತಿದ್ದರು. ಹವಾಮಾನ ವರದಿ ಆ ಕಾಲದಲ್ಲಿ ಸರಿಯಾಗಿ ಇಲ್ಲದ ಕಾಲದಲ್ಲಿ ಇವು ಅನೇಕ ಬಾರಿ ನಿಜವೂ ಆಗುತ್ತಿದ್ದವು. ಇಂದಿಗೂ ಗ್ರಾಮದಲ್ಲಿ ಬಾವಿ ತೋಡುವಾಗ ಜಲಮೂಲವನ್ನು ‘Y’ ಆಕಾರದ ಕಟ್ಟಿಗೆಯ ಕೊಂಬೆಯಿಂದಲೋ, ತೆಂಗಿನ ಕಾಯಿಯನ್ನು ಕೈಯಲ್ಲಿ ಹಿಡಿದು ನಡೆಯುವಾಗ ಜಲತಜ್ಞನ ಕೈಯಲ್ಲಿ ಥಟ್ಟನೆ ಎದ್ದು ನಿಲ್ಲುವುದರ ಮೂಲಕ ಕಂಡುಹಿಡಿಯುವುದನ್ನು ಗಮನಿಸಬಹುದು.
ಇದನ್ನೂ ಓದಿ: ಯುಗಾದಿಯಿಂದ ಈ ರಾಶಿ ಕೈ ಹಿಡಿಯಲಿದೆ ಅದೃಷ್ಟ, ಯಾರಿಗೆ ಬೇವು, ಯಾರಿಗೆ ಬೆಲ್ಲ
ಅಂಥ ಸ್ಥಳದಲ್ಲಿ ಬಾವಿ ತೋಡಿದಾಗ ಹೆಚ್ಚಾಗಿ ನೀರಿನ ಸೆಲೆ ಚೆನ್ನಾಗಿ ಬಂದಿರುವುದೂ ಸಹ ಗಮನಿಸಿದ್ದೇನೆ. ನಂಬಿದವರಿಗೆ ಇಂಬು ನಮದಿದ್ದರೆ ತೊಂದರೆಯೇನೂ ಇಲ್ಲ. ಬದುಕಿನಲ್ಲಿ ಬೇವು ಮತ್ತು ಬೆಲ್ಲವನ್ನು ಸಮನಾಗಿ ಸ್ವೀಕರಿಸಬೇಕು ಎನ್ನುವುದನ್ನು ಯುಗಾದಿ ಹಬ್ಬ ತಿಳಿಸುವುದು. ಬರುವುದನ್ನು ಎದುರಿಸಲು ಬೇಕಾದ ಮಾನಸಿಕ ಸ್ಥೈರ್ಯವನ್ನು ಪಂಚಾಂಗದ ಫಲ ನೀಡುತ್ತದೆ.