ಬೆಂಗಳೂರು(ನ.11): ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು ಟಿಪ್ಪು ಸುಲ್ತಾನ್(Tippu Jayanti) ಜಯಂತಿಗೆ ಶುಭ ಕೋರುವ ಪೋಸ್ಟನ್ನು ಸಾಮಾಜಿಕ ಜಾಲ(Social Media) ತಾಣದಲ್ಲಿ ಹಾಕಿದ್ದು, ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾದದ್ದಲ್ಲದೇ ಹಲವರು ಟ್ರೋಲ್(Troll) ಮಾಡಿದ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ. ‘ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸುವ ಜೊತೆಗೆ ಸಮಾನತೆ-ಸಹಬಾಳ್ವೆಯ ಚಿಂತನೆಯೊಂದಿಗೆ ಜನಪರ ಆಡಳಿತ ನೀಡಿದ ಟಿಪ್ಪು ಜಯಂತಿಯಂದು ಅವರಿಗೆ ಗೌರಪೂರ್ವಕ ನಮನಗಳು’ ಎನ್ನುವ ಪೋಸ್ಟ್ ಹಾಕಿದ್ದರು. ಇದು ಜಾಲತಾಣದಲ್ಲೂ ಟ್ರೋಲ್ ಆಗಿದೆ. ಸಂಘ ಪರಿವಾರದ ನಾಯಕರ ಕೆಂಗಣ್ಣಿಗೂ ಗುರಿಯಾಗಿದ್ದು, ಕೊನೆಗೆ ಶಾಸಕರು ಅದನ್ನು ಡಿಲೀಟ್ ಮಾಡಿದ್ದಾರೆ.
ಬಿಜೆಪಿ ಮೊದಲಿನಿಂದಲೂ ಟಿಪ್ಪು ಜಯಂತಿಯನ್ನು ವಿರೋಧಿಸುತ್ತ ಬಂದಿದೆ. ಅಲ್ಲದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಟಿಪ್ಪು ಜಯಂತಿಯನ್ನು ರದ್ದು ಮಾಡಿತ್ತು. ಆದರೆ ಶಾಸಕ ದಢೇಸ್ಗೂರು ಇದನ್ನು ಗಣನೆಗೆ ತೆಗೆದುಕೊಳ್ಳದೇ ಜಯಂತಿಗೆ ಶುಭ ಕೋರಿ ಪೋಸ್ಟ್ ಮಾಡಿದ್ದರು.
'ಸಿದ್ದು ಸೃಷ್ಟಿಸಿದ ಮರಿ ಟಿಪ್ಪುಗಳಿಂದ ಮಂಗಳೂರಲ್ಲಿ ಗಲಭೆ..'!
ನಿಷೇಧಾಜ್ಞೆ ನಡುವೆ ಕುಟ್ಟಪ್ಪಗೆ ಶ್ರದ್ಧಾಂಜಲಿ
ಸೆಕ್ಷನ್ 144(ನಿಷೇಧಾಜ್ಞೆ) ಜಾರಿಯ ನಡುವೆಯೂ ಹಿಂದೂಪರ ಸಂಘಟನೆ ಮುಖಂಡ ಕುಟ್ಟಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲು ಯತ್ನಿಸಿದ ಹಿಂದೂಪರ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ ಘಟನೆ ನಗರದಲ್ಲಿ ಬುಧವಾರ ನಡೆಯಿತು.
ಚೌಡೇಶ್ವರಿ ದೇವಾಲಯದಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ಸಾಗಿ ಬಳಿಕ ಗಾಂಧಿ ಮೈದಾನದಲ್ಲಿ ಟಿಪ್ಪು ಜಯಂತಿ ಕಲಹ ಸಂದರ್ಭದಲ್ಲಿ ಮೃತರಾದ ಹಿಂದೂಪರ ಸಂಘಟನೆ ಮುಖಂಡ ಕುಟ್ಟಪ್ಪಗೆ ಶ್ರದ್ಧಾಂಜಲಿ ಅರ್ಪಿಸಲು ಹಿಂದೂ ಸಂಘಟನೆಗಳು ನಿರ್ಧರಿಸಿದ್ದವು. ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದಿಂದ ನಗರದ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ನಡೆಸಲಾಯಿತು. ದೇವಾಲಯದಿಂದ ಹೊರಬಂದ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದರು.
ಬಳಿಕ ಹಿಂದೂ ಜಾಗರಣ ವೇದಿಕೆ ವತಿಯಿಂದ ನಗರದ ಚೌಡೇಶ್ವರಿ ದೇವಾಲಯದಲ್ಲಿ ಶಾಂತಿ ಪೂಜೆ ನಡೆಸಿ, ದೇವಾಲಯದ ಸಭಾಂಗಣದಲ್ಲೇ ಸಭೆ ನಡೆಸಿ ಕುಟ್ಟಪ್ಪಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಟಿಪ್ಪು ಜಯಂತಿ ಆಚರಣೆಗೆ ವಿರೋಧ: ಬಿಜೆಪಿಗೆ ತರಾಟೆ
ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಬಹಳ ಅದ್ಧೂರಿಯಾಗಿ ಆಚರಿಸಿದ್ದ ಟಿಪ್ಪು ಜಯಂತಿಯನ್ನು ಅವರೇ ಆಚರಣೆ ಮಾಡಬಾರದು ಎಂದು ವಿರೋಧಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆಪಿಸಿಸಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ತರಾಟೆಗೆ ತೆಗೆದುಕೊಂಡರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವರದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಸರಳವಾಗಿ ಟಿಪ್ಪು ಜಯಂತಿ ಆಚರಿಸಲಾಯಿತು. ಈ ವೇಳೆ ಟಿಪ್ಪು ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಯಾವುದೇ ಗಲಭೆಗಳು ಸಹಾಯಕ ಘಟನೆಗಳು ನಡೆಯದಂತೆ ಟಿಪ್ಪು ಜಯಂತಿ ಆಚರಣೆಗೆ ಕಾನೂನಿನಲ್ಲಿ ಅವಕಾಶ ಇದೆ. ಅದರಂತೆ ಇಂದು ಸರಳವಾಗಿ ಆಚರಣೆ ಮಾಡಿದ್ದೇವೆ ಎಂದರು.
‘ದೇವಸ್ಥಾನ ಒಡೆದ ಧರ್ಮಭ್ರಷ್ಟನನ್ನು ಯಾಕೆ ಪಠ್ಯದಲ್ಲಿ ಇಟ್ಟುಕೊಳ್ಳಬೇಕು’
ಇದೇ ಸಂದರ್ಭದಲ್ಲಿ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಟಿಪ್ಪು ಎಂತಹ ಹೋರಾಟಗಾರ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಬಗ್ಗೆ ಹಲವು ಪಠ್ಯ ಪುಸ್ತಕಗಳಲ್ಲಿ ಹಲವಾರು ಬಗೆಯ ಲೇಖನಗಳು ಮುದ್ರಣಗೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ ಓದಿದ್ದೇವೆ. ಅದು ನಮ್ಮ ಮುಂದಿನ ಪೀಳಿಗೆಗೂ ತಿಳಿಯುವಂತಾಗಬೇಕು. ಮುಂದಿನ ಟಿಪ್ಪು ಜಯಂತಿಗೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಸಮವಸ್ತ್ರ ನೀಡಿ ಆಚರಿಸಲಾಗುವುದು ಎಂದರು. ಚಿಕ್ಕಣ್ಣ, ಚಾಂದ್ ಪಾಷಾ, ಸಲೀಂ ಪಾಷಾ, ಶಕೀಲ್ ಅಹಮದ್ ಸೇರಿದಂತೆ ನೂರಾರು ಮುಸ್ಲಿಂ ಮುಖಂಡರು ಇದ್ದರು.