Bitcoin ಹ್ಯಾಕರ್‌ ಶ್ರೀಕಿ ಚಾಜ್‌ರ್‍ಶೀಟಲ್ಲಿ ಕಾಂಗ್ರೆಸ್‌ನ ಹ್ಯಾರಿಸ್‌, ಲಮಾಣಿ ಮಕ್ಕಳ ಹೆಸರು!

Published : Nov 11, 2021, 06:37 AM ISTUpdated : Nov 11, 2021, 06:43 AM IST
Bitcoin ಹ್ಯಾಕರ್‌ ಶ್ರೀಕಿ ಚಾಜ್‌ರ್‍ಶೀಟಲ್ಲಿ ಕಾಂಗ್ರೆಸ್‌ನ ಹ್ಯಾರಿಸ್‌, ಲಮಾಣಿ ಮಕ್ಕಳ ಹೆಸರು!

ಸಾರಾಂಶ

* ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್‌ ಕಾಯಿನ್‌ ಹಗರಣ  * ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ತನಿಖೆ * ಶ್ರೀಕಿ ಚಾಜ್‌ರ್‍ಶೀಟಲ್ಲಿ ಕಾಂಗ್ರೆಸ್‌ನ ಹ್ಯಾರಿಸ್‌, ಲಮಾಣಿ ಮಕ್ಕಳ ಹೆಸರು * ಎರಡು ಪ್ರತ್ಯೇಕ ಆರೋಪಪಟ್ಟಿಗಳಲ್ಲಿ ಈ ಅಂಶ ಉಲ್ಲೇಖ

ಬೆಂಗಳೂರು(ನ.11): ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್‌ ಕಾಯಿನ್‌ ಹಗರಣದ (Bitcoin Scam) ಕೇಂದ್ರ ಬಿಂದು, ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಗೆ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ (Congress MLA NA Harris) ಪುತ್ರ ಹಾಗೂ ಹಾವೇರಿಯ ಮಾಜಿ ಸಚಿವ ರುದ್ರಪ್ಪ ಲಮಾಣಿ (Rudrappa Lamani) ಪುತ್ರನ ಜತೆ ಆಪ್ತ ಸ್ನೇಹವಿತ್ತು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎರಡು ಪ್ರತ್ಯೇಕ ಆರೋಪಪಟ್ಟಿಗಳಲ್ಲಿ ಈ ಅಂಶ ಉಲ್ಲೇಖವಾಗಿದೆ.

ಹ್ಯಾರಿಸ್‌ ಪುತ್ರ ಉಮರ್‌ ನಲಪಾಡ್‌ (Omar Haris Nalapad) ಹಾಗೂ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ (Darshan Lamani) ಜತೆ ಆತ್ಮೀಯ ಒಡನಾಟ ಹೊಂದಿದ್ದ ಶ್ರೀಕಿ, ಈ ನಾಯಕರ ಮಕ್ಕಳ ಜತೆ ಹಣಕಾಸು ವ್ಯವಹಾರ ಸಹ ಹೊಂದಿದ್ದ. ಅಲ್ಲದೆ, 2018ರಲ್ಲಿ ಉಮರ್‌ನ ಸೋದರ ಮೊಹಮ್ಮದ್‌ ನಲಪಾಡ್‌ ವಿರುದ್ಧ ದಾಖಲಾಗಿದ್ದ ಯುಬಿ ಸಿಟಿ (UB City) ಪಬ್‌ ಗಲಾಟೆ ಪ್ರಕರಣದಲ್ಲಿ ಶ್ರೀಕಿ ಆರೋಪಿಯಾಗಿದ್ದ. ಹಾಗೆಯೇ 2020ರಲ್ಲಿ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ಬಂಧಿತನಾಗಿದ್ದ ಡ್ರಗ್ಸ್‌ ಕೇಸ್‌ನಲ್ಲಿ ಶ್ರೀಕಿಯನ್ನು ಸಿಸಿಬಿ ಬಂಧಿಸಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಸಿಸಿಬಿ ಸಲ್ಲಿಸಿರುವ ಆರೋಪ ಪಟ್ಟಿಗಳಲ್ಲಿ ಕೂಡ ಉಲ್ಲೇಖವಾಗಿದೆ. ಈ ಮೂಲಕ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ವಾಗ್ದಾಳಿ ಮತ್ತೊಂದು ಮಜಲು ಪಡೆಯುವ ಸಾಧ್ಯತೆಗಳಿವೆ.

ವಿದೇಶದಿಂದ ಬಂದಾಗ ನಲಪಾಡ್‌ ಸ್ನೇಹ:

‘2015ರಲ್ಲಿ ನೆದರ್ಲೆಂಡ್‌ನಲ್ಲಿ ಬಿಎಸ್ಸಿ ಕಂಪ್ಯೂಟರ್‌ ಪದವಿ ಮುಗಿಸಿ ಬೆಂಗಳೂರಿಗೆ ಮರಳಿದೆ. ಆಗ ನನಗೆ ಸ್ನೇಹಿತ ಡಿ.ಕೆ.ಮನೀಶ್‌ ಮೂಲಕ ಉಮರ್‌ ನಲಪಾಡ್‌ ಹಾಗೂ ಆತನ ತಂಡದ ಪರಿಚಯವಾಯಿತು. ಆಮೇಲೆ ನಾವೆಲ್ಲ ಆತ್ಮೀಯ ಸ್ನೇಹಿತರಾದೆವು. ಮೂರು ವರ್ಷ ಕಾಲ ನಲಪಾಡ್‌ ಸೇರಿ ನಾವೆಲ್ಲ ಸ್ನೇಹಿತರು ಬಿಂದಾಸ್‌ ಆಗಿದ್ದೆವು’ ಎಂದು ಸಿಸಿಬಿ ಮುಂದೆ ಶ್ರೀಕಿ ಹೇಳಿದ್ದಾನೆ.

‘2018ರಲ್ಲಿ ಯುಬಿ ಸಿಟಿ ಪಬ್‌ನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಉಮರ್‌ ನಲಪಾಡ್‌ನ ಸೋದರ ಮೊಹಮ್ಮದ್‌ ನಲಪಾಡ್‌ನ ಬಂಧನವಾಯಿತು. ಆಗ ನಾಲ್ಕು ತಿಂಗಳು ಜೈಲಿನಲ್ಲಿದ್ದು ಬಳಿಕ ಮೊಹಮ್ಮದ್‌ ನಲಪಾಡ್‌ ಬಿಡುಗಡೆಯಾಗಿದ್ದ. ಈ ಗಲಾಟೆ ಪ್ರಕರಣದಲ್ಲಿ ನಾನು ಸಹ ಆರೋಪಿಯಾಗಿದ್ದೆ. ಆದರೆ ಪೊಲೀಸರ ಬಂಧನ ಭೀತಿಯಿಂದ ಬೆಂಗಳೂರು ತೊರೆದು ತಲೆಮರೆಸಿಕೊಂಡಿದ್ದ ನಾನು, ಕೊನೆಗೆ ಜಾಮೀನು ಪಡೆದೆ. ಯುಬಿ ಸಿಟಿ ಗಲಾಟೆ ಘಟನೆ ಬಳಿಕ ಉಮರ್‌ ನಲಪಾಡ್‌ ಮತ್ತು ನಾನು ಪ್ರತ್ಯೇಕರಾದೆವು’ ಎಂದಿದ್ದಾನೆ.

‘ತರುವಾಯ ನನಗೆ ಮತ್ತೊಬ್ಬ ಗೆಳೆಯ ಪ್ರಸಿದ್‌್ಧ ಶೆಟ್ಟಿಮುಖೇನ ಸುನೀಶ್‌ ಹೆಗ್ಡೆ ಹಾಗೂ ತಂಡದ ಪರಿಚಯವಾಯಿತು. ಆಗ ನಾನು ಬಿಟ್‌ ಕಾಯಿನ್‌ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಿಕೊಂಡು ಬಿಟ್‌ ಕಾಯಿನ್‌ ವಹಿವಾಟು ಶುರು ಮಾಡಿದೆ’ ಎಂದು ಸಿಸಿಬಿಗೆ ಶ್ರೀಕೃಷ್ಣ ಹೇಳಿಕೆ ನೀಡಿದ್ದಾನೆ.

‘ದೆಹಲಿಯ ಶಾಂಘ್ರಿಲಾ ಹೋಟೆಲ್‌ನಲ್ಲಿ ಉಮರ್‌ ನಲಪಾಡ್‌, ತುಷಾರ್‌, ಅಭಿಷೇಕ್‌ ಹಾಗೂ ಮುರಳಿ ಜತೆ ಪಾರ್ಟಿ ಮಾಡಿದ್ದೆ. ಪಂಜಾಬ್‌ನ ಚಂಡಿಗಢ, ಮುಂಬೈಗೆ ಹೋಗಲು ಪ್ರೈವೇಟ್‌ ಜೆಟ್‌ ಬಳಸಿದ್ದೆವು’ ಎಂದು ಉಮರ್‌ ನಲಪಾಡ್‌ನ ಸ್ನೇಹದ ಬಗ್ಗೆ ಶ್ರೀಕಿ ಹೇಳಿದ್ದಾನೆ.

ದರ್ಶನ್‌ ಲಮಾಣಿ ಸ್ನೇಹ:

2020ರ ನವೆಂಬರ್‌ನಲ್ಲಿ ಬೆಂಗಳೂರಿನ ಚಾಮರಾಜಪೇಟೆ ಅಂಚೆ ಕಚೇರಿ ಸಮೀಪ ವಿದೇಶದಿಂದ ಅಂಚೆ ಮೂಲಕ ಬಂದ ಡ್ರಗ್ಸ್‌ ಸ್ವೀಕರಿಸಲು ಬಂದಾಗ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ಹಾಗೂ ಆತನ ಸ್ನೇಹಿತರು ಬಂಧಿತರಾಗಿದ್ದರು. ಈ ಕೃತ್ಯದಲ್ಲಿ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ದರ್ಶನ್‌ನನ್ನು ಸಿಸಿಬಿ ಬಂಧಿಸಿ ಕರೆತಂದಿತ್ತು. ಈ ಪ್ರಕರಣದಲ್ಲಿ ದರ್ಶನ್‌ ಜತೆ ಸದಾಶಿವನಗರದ ಎಂ.ಸುಜಯ್‌, ಸಂಜಯನಗರದ ವೈದ್ಯರ ಮಕ್ಕಳಾದ ಪುತ್ರ ಹೇಮಂತ್‌ ಮುದ್ದಪ್ಪ, ಸುನೇಶ್‌ ಹೆಗ್ಡೆ, ಸದಾಶಿವನಗದ ಆರ್‌ಎಂವಿ ಬಡಾವಣೆಯ ಪ್ರಸಿದ್ದ ಶೆಟ್ಟಿಅಲಿಯಾಸ್‌ ಚಿಕ್ಕಣ್ಣ, ಪಂಕಜ್‌ ಕೊಠಾರಿ ಅಲಿಯಾಸ್‌ ಪುಕ್ಕಿ, ಮದನ್‌ ಮೋಹನ್‌ ಬಾರಕಿ, ಆಶಿಶ್‌ ಭೀಮಸೇನ್‌ ಹಾಗೂ ಜಯನಗರದ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಬಂಧಿತರಾಗಿದ್ದರು.

ಈ ಡ್ರಗ್ಸ್‌ ಪ್ರಕರಣದ ವಿಚಾರಣೆ ವೇಳೆ ಬಿಟ್‌ ಕಾಯಿನ್‌ ದಂಧೆ ಬಗ್ಗೆ ಶ್ರೀಕಿ ಬಾಯ್ಬಿಟಿದ್ದ. ಆನಂತರ ಕಾಟನ್‌ಪೇಟೆ ಠಾಣೆಯಲ್ಲಿ ಆತನ ಹೇಳಿಕೆ ಆಧರಿಸಿ ಬಿಟ್‌ ಕಾಯಿನ್‌ ಸಂಬಂಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ಸಿಸಿಬಿ ತನಿಖೆ ಕೈಗೊಂಡಿತ್ತು. ಅಲ್ಲದೆ, ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ನ ರಾಬಿನ್‌ ಖಂಡೇವಾಲ ಮೇಲೆ ಹಲ್ಲೆ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ಶ್ರೀಕಿ ಹಾಗೂ ಆತನ ಸ್ನೇಹಿತರ ಮೇಲೆ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!