ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ರಾಜ್ಯದಲ್ಲೆ ದೀರ್ಘಾಯುಷಿ ಎಂದು ಕರೆಸಿಕೊಂಡಿದ್ದ ಹನುಮ ಹುಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಸಿಂಹಧಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಶಿವಮೊಗ್ಗ (ಸೆ.23): ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ರಾಜ್ಯದಲ್ಲೆ ದೀರ್ಘಾಯುಷಿ ಎಂದು ಕರೆಸಿಕೊಂಡಿದ್ದ ಹನುಮ ಹುಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಸಿಂಹಧಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಸಿಂಹಧಾಮದಲ್ಲಿ 18 ವರ್ಷಗಳ ಕಾಲ ಬದುಕಿದ್ದ ವಾಲಿ ಹಾಗೂ ರಾಮ ಹುಲಿಗಳು ಇತ್ತೀಚೆಗಷ್ಟೇ ಸಾವನ್ನಪ್ಪಿದ್ದವು. ಸಿಂಹಧಾಮದಲ್ಲಿ ಹುಲಿಗಳಿಗೆ ಹಿರಿಯನಾಗಿದ್ದ ಹನುಮನೂ ಈಗ ಇಲ್ಲವಾಗಿದ್ದಾನೆ. 20 ವರ್ಷ ಬದುಕಿದ್ದ ಹನುಮ ಹುಲಿ ವಿಶೇಷ ಆಕರ್ಷಣೆ ಮೂಲಕ ಪ್ರವಾಸಿಗಳನ್ನು ಬಹುಬೇಗ ಸೆಳೆಯುತ್ತಿದ್ದ. ಆತ ಇನ್ನು ಮುಂದೆ ಸಿಂಹಧಾನದಲ್ಲಿ ಕಾಣಸಿಗುವುದಿಲ್ಲ ಎಂಬುದು ಬೇಸರದ ಸಂಗತಿ.
ಬಹುಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಹನುಮ: 20 ವರ್ಷ ಕಳೆದ ಹನುಮ ಹುಲಿ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ, ದಿನ ಕಳೆದಂತೆ ಆತನ ಚಟುವಟಿಕೆಯೂ ಇಲ್ಲದಂತಾಗಿತ್ತು. ಆದರೆ, ಇಲ್ಲಿನ ಅರಣ್ಯಾಧಿಕಾರಿಗಳ ಮುತುವರ್ಜಿಯಿಂದ ಆತನು ಈವರೆಗೆ ಬದುಕಿದ್ದ ಎಂಬುದು ವಿಶೇಷ. ಹಿರಿಯ ಹುಲಿಯನ್ನು ಉಳಿಸಿಕೊಳ್ಳಲು ಸಿಂಹಧಾಮದ ಸಿಬ್ಬಂದಿಯೂ ಸಾಕಷ್ಟು ಶ್ರಮ ಹಾಕಿದ್ದರು. ಹನುಮ ಮಲಗುವುದಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಹೊರತುಪಡಿಸಿ ಆತನ ಓಟಾಟ ಹಾಗೂ ಊಟೋಪಚಾರದ ಬಗ್ಗೆ ವಿಶೇಷ ಗಮನ ವಹಿಸಲಾಗಿತ್ತು.
ಚೀತಾ ಭಾರತಕ್ಕೆ ಬಂದ ಖುಷಿ ಮಧ್ಯೆ ಬನ್ನೇರುಘಟ್ಟ ಪಾರ್ಕ್ ನಲ್ಲಿ ಹುಲಿಗಳ ಸರಣಿ ಸಾವು!
ವಿಶೇಷ ದಾಖಲೆ ಬರೆದ ಹನುಮ: ತಾವರೆಕೊಪ್ಪದ ಹುಲಿ ಮತ್ತಿ ಸಿಂಹಧಾಮದಲ್ಲಿ ಅತಿಹೆಚ್ಚು ದಿನ ಬದುಕಿದ ಗಂಡು ಹುಲಿ ಎಂಬ ದಾಖಲೆಯನ್ನು ಹನುಮ ಬರೆದಿದ್ದಾನೆ. ವಾಲಿ ಹಾಗೂ ರಾಮ ಹನುಮನ ಸೋದರರು. ಈ ಎರಡು ಹುಲಿಗಳು 18 ವರ್ಷಗಳ ಕಾಲ ಬದುಕಿದ್ದವು. ಮಲೇಶಂಕರ, ಚಾಮುಂಡಿಯ ಮಗ ಹನುಮ ಮಲೇಶಂಕರ ಹಾಗೂ ಚಾಮುಂಡಿ ನಡುವಿನ ಮೇಟಿಂಗ್‌ನಿಂದಾಗಿ ರಾಮ, ವಾಲಿ, ಹನುಮ ಜನಿಸಿದ್ದವು. ಲಯನ್ ಸಫಾರಿಯಲ್ಲಿಯೇ ಹುಟ್ಟಿದ್ದ ಇವುಗಳನ್ನ ನೋಡಲೇಂದೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಿದ್ದರು. ಹನುಮ ತನ್ನ ಹಾವಭಾವಗಳಿಂದಲೇ ಜನರಿಗೆ ಇಷ್ಟವಾಗುತ್ತಿದ್ದ.
ಮಧ್ಯಪ್ರದೇಶ: ಹುಲಿಯೊಂದಿಗೆ ಸೆಣಸಾಡಿ 15 ತಿಂಗಳ ಮಗುವನ್ನು ರಕ್ಷಿಸಿದ ತಾಯಿ
ನಾಲ್ಕಕ್ಕೆ ಇಳಿದ ಹುಲಿಗಳ ಸಂಖ್ಯೆ: ಹಿರಿಯ ಹನುಮ ಹುಲಿ ನಿಧನದ ನಂತರ ಸದ್ಯ ಸಿಂಹಧಾಮದಲ್ಲಿ ಹುಲಿಗಳ ಸಂಖ್ಯೆ 4ಕ್ಕೆ ಇಳಿದಿದೆ. ಎರಡು ವರ್ಷದ ಹಿಂದೆ ಸಿಂಹಧಾಮದಲ್ಲಿ ಗಂಡುಹುಲಿಗಳೇ ಹೆಚ್ಚಿದ್ದವು. ಎರಡು ವರ್ಷದಿಂದ ಈಚೇಗೆ ರಾಮ, ವಾಲಿ, ಭರತ ಹಾಗೂ ಈಗ ಹನುಮ ಸಾವನ್ನಪ್ಪಿರುವ ನಂತರ ಗಂಡು ಹುಲಿ ಎಂದು ಉಳಿದುಕೊಂಡಿರುವುದು ವಿಜಯ(15 ವರ್ಷ) ಹುಲಿ ಮಾತ್ರ. ಉಳಿದ ಮೂರು ಹುಲಿಗಳು ಹೆಣ್ಣು ಹುಲಿಗಳು. ಇದರಲ್ಲಿ 16 ವರ್ಷ ಕಳೆದಿರುವ ಸೀತಾ ಸದ್ಯ ಸಿಂಹಧಾಮಕ್ಕೆ ಹಿರಿಯಕ್ಕ. ಇನ್ನು ದಶಮಿ 15 ವರ್ಷ, ಪೂರ್ಣಿಮಾಗೆ 12 ವರ್ಷದ ವಯಸ್ಸಿನ ಹುಲಿಗಳು.