ಮಂಗ್ಳೂರು ಗೋಲಿಬಾರ್ ಪ್ರತೀಕಾರಕ್ಕೆ ಕಾರ್ಖಾನೆ ಗ್ಯಾಂಗ್!| ಮಾಯಾ ಗ್ಯಾಂಗ್ ಬೆನ್ನಲ್ಲೇ ಮತ್ತೊಂದು ಗ್ಯಾಂಗ್ ಪತ್ತೆ| ಮೂವರ ಬಂಧನ, ಪೊಲೀಸ್ ಮೇಲೆ ದಾಳಿ ಇವರ ಗುರಿ
ಮಂಗಳೂರು(ಜ.30): ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಿ ಪೊಲೀಸ್ ಕಾನ್ಸ್ಟೇಬಲ್ವೊಬ್ಬರ ಮೇಲಿನ ಇರಿತ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದರ ಹಿಂದೆ ಬಹುದೊಡ್ಡ ವ್ಯವಸ್ಥಿತ ಜಾಲವೇ ಇರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ‘ಮಾಯಾ ಗ್ಯಾಂಗ್’ ಹೆಸರಿನ ತಂಡವೊಂದರ ಹೆಡೆಮುರಿ ಕಟ್ಟಿರುವ ಪೊಲೀಸರಿಗೆ ಈ ಕೃತ್ಯದಲ್ಲಿ ‘ಕಾರ್ಖಾನಾ ಗ್ಯಾಂಗ್’ ಹೆಸರಿನ ಮತ್ತೊಂದು ತಂಡದ ಪಾತ್ರವೂ ಸ್ಪಷ್ಟವಾಗಿದೆ. ಈ ಸಂಬಂಧ ಕಾರ್ಖಾನೆ ಗ್ಯಾಂಗ್‌ನ ಮೂವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಅಕ್ಬರ್ (30), ಮಹಮ್ಮದ್ ಶಾಕೀರ್(19) ಮತ್ತು ಮಹಮ್ಮದ್ ಹನೀಫ್ ಆಲಿಯಾಸ್ ಕಾಚಿರ್ ಹನೀಫ್ ಎಂಬುವರನ್ನು ಗುರುವಾರ ರಾತ್ರಿ ಬಂಧಿಸಲಾಗಿದ್ದು, ಇವರೆಲ್ಲರೂ ಸ್ಥಳೀಯ ನಿವಾಸಿಗಳು. ಇವರಲ್ಲಿ ಆರೋಪಿ ಅಕ್ಬರ್(30) ರಾಜಕೀಯ ಪಕ್ಷವೊಂದರ ಸ್ಥಳೀಯ ಮುಖಂಡ ಎನ್ನಲಾಗಿದೆ. ಮಂಗಳೂರಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಈ ಪಕ್ಷ ಅನೇಕ ಹಿಂದೂ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಆರೋಪ ಹಿಂದೂಪರ ಸಂಘಟನೆಗಳಿಂದ ಆಗಾಗ್ಗೆ ಕೇಳಿಬರುತ್ತಲೇ ಇದೆ.
ಪ್ರತೀಕಾರದ ಸಂಚು: ಕಳೆದ ವರ್ಷ ಡಿ.16ರಂದು ಮಂಗಳೂರಲ್ಲಿ ಪೊಲೀಸ್ ಕಾನ್ಸ್ಟೇಬಲ್ವೊಬ್ಬರಿಗೆ ಚಾಕುವಿನಿಂದ ಇರಿಯಲಾಗಿತ್ತು. ಪ್ರಕರಣದಲ್ಲಿ ಬಂಧಿತರ ವಿಚಾರಣೆ ವೇಳೆ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ನಡೆದಿದ್ದ ಮಂಗಳೂರು ಗೋಲಿಬಾರ್‌ಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದ ವಿಚಾರ ಬೆಳಕಿಗೆ ಬಂದಿತ್ತು. ಹೆಚ್ಚಿನ ವಿಚಾರಣೆ ನಡೆಸಿದಾಗ ಈ ದಾಳಿ ಹಿಂದೆ ಸ್ಥಳೀಯವಾಗಿ ಹುಟ್ಟಿಕೊಂಡಿದ್ದ ‘ಮಾಯಾ’ ಗ್ಯಾಂಗ್‌ನ ಪಾತ್ರ ಬಯಲಾಗಿತ್ತು. ಈ ಗ್ಯಾಂಗ್ ಅಪ್ರಾಪ್ತನೊಬ್ಬನಿಗೆ ಅಮಲಿನ ಮಾತ್ರೆ ನೀಡಿ ಈ ಕೃತ್ಯಕ್ಕೆ ಬಳಸಿಕೊಂಡಿರುವ ಆಘಾತಕಾರಿ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಕಾರ್ಖಾನಾ ಗ್ಯಾಂಗ್ ಕೂಡ ಮಾಯಾ ಗ್ಯಾಂಗ್ ಮಾದರಿಯಲ್ಲೇ ರಕ್ತಪಾತ ನಡೆಸಲು ಮುಂದಾಗಿತ್ತು ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಏನಿದು ಕಾರ್ಖಾನಾ ಗ್ಯಾಂಗ್?: ಮಂಗಳೂರಿನ ಕುದ್ರೋಳಿ ಸಮೀಪ ಪ್ರದೇಶವೊಂದಕ್ಕೆ ‘ಕಾರ್ಖಾನಾ’ ಎಂದು ಹೆಸರು ನೀಡಿ ಅಲ್ಲಿ ಹುಟ್ಟಿಕೊಂಡಿರುವುದೇ ಕಾರ್ಖಾನಾ ಗ್ಯಾಂಗ್. ಈ ಗ್ಯಾಂಗ್ನಲ್ಲಿರುವವರು 25-40 ವರ್ಷ ವಯಸ್ಸಿನವರು. ಇವರು ಬೇರೆ ಬೇರೆ ಚಟುವಟಿಕೆ, ಹೋರಾಟದಲ್ಲಿ ಪಾಲ್ಗೊಂಡವರು. ಇವರನ್ನು ಫಾಲೋ ಮಾಡುವವರು, ಸಲಹೆ ನೀಡುವವರು ಕೂಡ ಅನೇಕ ಮಂದಿ ಇದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದಿದ್ದಾರೆ ಕಮಿಷನರ್.
ಮಾಯಾ ಗ್ಯಾಂಗ್‌ನ ಸದಸ್ಯನೊಬ್ಬನಿಗೆ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಯುವಕ ಹಾಗೂ ಆತನ ಕುಟುಂಬದವರ ಸಂಪರ್ಕ ಇತ್ತು. ಕಾರ್ಖಾನಾ ಗ್ಯಾಂಗ್‌ಗೆ ಮಾಯಾ ಗ್ಯಾಂಗ್ ಜತೆ ಉತ್ತಮ ಒಡನಾಟ ಇತ್ತು. ಆದರೆ ಗೋಲಿಬಾರ್‌ನಲ್ಲಿ ಮೃತನ ಕುಟುಂಬ ಸದಸ್ಯರಾರಯರೂ ಈ ಗ್ಯಾಂಗ್‌ಗಳಲ್ಲಿ ಇಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
ಎಲ್ಲವೂ ಪೂರ್ವಯೋಜಿತ: ಕಾರ್ಖಾನೆ ಗ್ಯಾಂಗ್ ಸದಸ್ಯರು ದಾಳಿಗಾಗಿ ತಮ್ಮದೇ ಯೋಜನೆ ರೂಪಿಸಿಕೊಂಡಿದ್ದರು. ದಾಳಿಗೆ ಮೊದಲು ಹಾಗೂ ನಂತರ ಹೇಗಿರಬೇಕು? ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಹೇಗೆ ದಾರಿ ತಪ್ಪಿಸಬೇಕು? ಬಂಧನಕ್ಕೊಳಗಾದರೆ ಯಾರಾರಯರ ಹೆಸರು ಬಾಯ್ಬಿಡಬಾರದು? ಜೈಲಲ್ಲಿ ಹೇಗಿರಬೇಕು ಎಂಬ ಬಗ್ಗೆ ವ್ಯವಸ್ಥಿತ ತರಬೇತಿ ಗ್ಯಾಂಗ್‌ನ ಸದಸ್ಯರಿಗೆ ನೀಡಲಾಗಿತ್ತು. ಇದಲ್ಲದೆ ಬಂಧನ ಬಳಿಕ ಆರೋಪಿಯ ಜಾಮೀನು, ಮನೆಗೆ ಆರ್ಥಿಕ ನೆರವು ನೀಡುವ ಕುರಿತೂ ಈ ತಂಡದ ಬಳಿ ಯೋಜನೆ ಇತ್ತು ಎನ್ನಲಾಗಿದೆ.
ಪೊಲೀಸರು ಯಾರು ಸಿಕ್ಕಿದರೂ ಅವರ ಮೇಲೆ ದಾಳಿಗೆ ಈ ಗ್ಯಾಂಗ್ನವರು ಸಂಚು ರೂಪಿಸಿದ್ದರು. ನಗರದಲ್ಲಿ ಸಾಮಾನ್ಯವಾಗಿ ಪೊಲೀಸರು ಒಂಟಿಯಾಗಿ ಕರ್ತವ್ಯದಲ್ಲಿರುವ 3-4 ಸ್ಥಳಗಳ ಬಗ್ಗೆಯೂ ಆರೋಪಿಗಳ ಬಳಿ ಮಾಹಿತಿ ಇತ್ತು ಎನ್ನುತ್ತಾರೆ ಕಮಿಷನರ್ ಶಶಿಕುಮಾರ್.
ಈ ಗ್ಯಾಂಗ್ಗಳ ಹಿಂದೆ ಯಾವ ಸಂಘಟನೆ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈಗ ತನಿಖೆ ನಡೆಯುತ್ತಿರುವುದರಿಂದ ಅವರು ಕೇವಲ ಆರೋಪಿಗಳಷ್ಟೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಮಾತುಗಳು ಹರಿದಾಡುವುದು ಬಿಟ್ಟರೆ ಬೇರೇನೂ ಇಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಸೇರಿ ಈಗಾಗಲೇ 11 ಮಂದಿಯನ್ನು ಬಂಧಿಸಲಾಗಿದೆ.
ಏನಿದು ಕಾರ್ಖಾನೆ ಗ್ಯಾಂಗ್?
ಮಂಗಳೂರಿನ ಕುದ್ರೋಳಿ ಸುತ್ತಮುತ್ತ ವಾಸವಾಗಿದ್ದ ಜನರ ತಂಡಕ್ಕೆ ಕಾರ್ಖಾನಾ ಗ್ಯಾಂಗ್ ಎಂದು ಹೆಸರಿಟ್ಟಿದ್ದರು.
25-30 ವರ್ಷ ವಯಸ್ಸಿನವರು ಈ ಗ್ಯಾಂಗ್‌ನಲ್ಲಿದ್ದರು
ಪೊಲೀಸರ ಮೇಲೆ ದಾಳಿ ಮಾಡುವ ಬಗ್ಗೆ ಇವರಿಗೆ ತರಬೇತಿ
ಬಂಧನವಾದರೆ, ಜೈಲಿಗೆ ಹೋದರೆ ಏನು ಮಾಡಬೇಕೆಂಬ ಪಾಠ