
ಕಲಬುರಗಿ(ಜ.30): ಮಹಾರಾಷ್ಟ್ರದ ಭಾಷಾಂಧ ಪುಂಡರು ಮತ್ತೆ ಗಡಿಯಲ್ಲಿ ಕಿತಾಪತಿ ಮುಂದುವರಿಸಿದ್ದು, ಈ ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ‘ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿದಂತೆ ಸಂಯುಕ್ತ ಮಹಾರಾಷ್ಟ್ರ’ ಎಂದು ಮರಾಠಿಯಲ್ಲಿ ಬರೆದಿರುವ ಪೋಸ್ಟರ್ ಹಚ್ಚಿ ಪುಂಡಾಟ ಮೆರಿದಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ಷೇಪ, ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲದೆ ಇದಕ್ಕೆ ಪ್ರತಿಯಾಗಿ ಕಲಬುರಗಿ ಜಿಲ್ಲೆ ಅಳಂದದ ಕನ್ನಡಪರ ಕಾರ್ಯಕರ್ತರು ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಬಿಡುಗಡೆಗೊಳಿಸಿರುವ ಪುಸ್ತಕದ ಚಿತ್ರವಿರುವ ಪೋಸ್ಟರ್‌ಗೆ ಮಸಿ ಬಳಿದು ಅದನ್ನು ಅಲ್ಲಿನ ಸರ್ಕಾರಿ ಬಸ್‌ಗಳಿಗೆ ಅಂಟಿಸಿದ್ದಾರೆ.
ದಾವಣಗೆರೆಯಿಂದ ಹುಬ್ಬಳ್ಳಿ ಮಾರ್ಗವಾಗಿ ಕೊಲ್ಲಾಪುರಕ್ಕೆ ಹೋಗುವ ಬಸ್‌ಗಳ ಮೇಲೆ ಮರಾಠಿ ವಿವಾದಾತ್ಮಕ ಪೋಸ್ಟರ್ ಅನ್ನು ಶಿವಸೇನೆ ಮತ್ತು ಎನ್‌ಸಿಪಿ ಕಾರ್ಯಕರ್ತರು ಅಂಟಿಸಿ ಪುಂಡಾಟಿಕೆ ಮೆರೆದಿದ್ದಾರೆ. ಕೊಲ್ಲಾಪುರದಿಂದ ಕರ್ನಾಟಕಕ್ಕೆ ಮರಳು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಸಂಯುಕ್ತ ಮಹಾರಾಷ್ಟ್ರ ಎಂದು ಬರೆದಿರುವ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಕರ್ನಾಟಕ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿರುವ ಪ್ರತಿ ವಾಹನಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ರಾಜ್ಯ ಪ್ರವೇಶಿಸುವ ಮುನ್ನ ಕುಗನೊಳ್ಳಿ ಟೋಲ್ ಬಳಿ ಎಲ್ಲ ಬಸ್‌ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಸುಮಾರು 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.
ಮಹಾ ಬಸ್‌ಗಳಿಗೂ ಪೋಸ್ಟರ್: ಆಳಂದ ಪ್ರವಾಸಿ ಮಂದಿರದ ಹತ್ತಿರ ಕರ್ನಾಟಕ ನವನಿರ್ಮಾಣ ಸೇನೆ ಪದಾಧಿಕಾರಿಗಳು ಮಹಾರಾಷ್ಟ್ರ ಬಸ್‌ಗೆ ಬಿತ್ತಿ ಪತ್ರ ಹಚ್ಚಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದ ಪುಸ್ತಕದ ಮುಖ ಪುಟಕ್ಕೆ ಮಸಿ ಬಳಿದು ಪ್ರತಿಭಟಿಸಿದರು. ಮಾತ್ರವಲ್ಲದೆ ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶಿವಸೇನೆ ಮತ್ತು ಎಂಇಎಸ್‌ಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕರ್ನಾಟಕ ನವನಿರ್ಮಾಣ ಸೇನೆ ಆಗ್ರಹಿಸಿತು. ಒಂದು ವೇಳೆ ಅನುಮತಿ ನೀಡಿದ್ದೇ ಆದಲ್ಲಿ ಅಭ್ಯರ್ಥಿಗಳ ಮುಖಕ್ಕೆ ಮಸಿ ಬಳಿದು ಪ್ರತಿಭಟಿಸಲು ತೀರ್ಮಾನಿಸಲಾಯ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ