ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬೆಂಗಳೂರು (ಮಾ.26): ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸಚಿವರ ಫೇಸ್‌ಬುಕ್ ಖಾತೆ ನಿರ್ವ ಹಣೆ ಮಾಡುವ ಮಾರುತಿ ಎಂಬುವವರು ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರುದಾರ ಮಾರುತಿ ನೀಡಿದ ದೂರಿನಲ್ಲಿ ತಾವು ಸಚಿವ ಬೈರತಿ ಸುರೇಶ್ ಅವರಫೇಸ್ ಬುಕ್ ಖಾತೆ ನಿರ್ವಹಿಸುತ್ತಿರುವ ಸಚಿನ್ ಶಿಂಧೆ ಎಂಬುವವರ ಸಹಾಯಕನಾಗಿದ್ದೇನೆ.
ಮಾ.23ರಂದು ಕೆ.ಎಂ.ಕಾರ್ತಿಕ್ ಎಂಬುವರ ಫೇಸ್‌ಬುಕ್ ಖಾತೆಯಿಂದ ಬಂದಿರುವ ಸಂದೇಶಕ್ಕೆ ಸಚಿವರ ಖಾತೆಯಿಂದ ಮರು ಸಂದೇಶ ಹೋಗಿದೆ. ಈ ಸಂದೇಶವನ್ನು ನಾನಾಗಲೀ ಅಥವಾ ಸಚಿನ್ ಶಿಂಧೆ ಆಗಲಿ ಮಾಡಿಲ್ಲ. ಪರಿಶೀಲನೆ ವೇಳೆ ದುಷ್ಕರ್ಮಿಗಳು ಸಚಿವರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಕೆ.ಎಂ.ಕಾರ್ತಿಕ್ ಸಂದೇಶಕ್ಕೆ ಕೆಟ್ಟದಾಗಿ ಮರು ಸಂದೇಶ ಕಳುಹಿಸಿರುವುದು ಗೊತ್ತಾಗಿದೆ. ಹೀಗಾಗಿ ಆ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಫೇಸ್‌ಬುಕ್, ಎಕ್ಸ್ ಸೇರಿ ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಆಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಜನಸಾಮಾನ್ಯರು, ಗಣ್ಯ ವ್ಯಕ್ತಿಗಳು ಎಚ್ಚರ ವಹಿಸಬೇಕು ಎಂದು ಇದೇ ವೇಳೆ ಪೊಲೀಸರು ಮನವಿ ಮಾಡಿದ್ದಾರೆ.
ಶೇರಿಂಗ್, ಕೇರಿಂಗ್ ಏನಿಲ್ಲ: ರಾಜ್ಯದಲ್ಲಿ ಯಾವುದೇ ಪವರ್ ಪಾಲಿಟಿಕ್ಸ್ ನಡೆಯುತ್ತಿಲ್ಲ. ಪವರ್ ಶೇರಿಂಗ್-ಕೇರಿಂಗ್ ಯಾವುದೂ ಇಲ್ಲ. ಬರೀ ಅಭಿವೃದ್ದಿಗೆ ಮಾತ್ರವೇ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಅವರು ಸಿಎಂ ಹುದ್ದೆ ಮತ್ತು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತಂತೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಕಟ್ಟಪ್ಪಣೆ ಮಾಡಿದ ಹಿನ್ನೆಲೆಯಲ್ಲಿ ಪವರ್ ಪಾಲಿಟಿಕ್ಸ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಹಾಗೂ ಡಿಸಿಎಂ ಸೇರಿ ರಾಜ್ಯ ಪ್ರಗತಿಯತ್ತ ಕೊಂಡೋಯ್ಯುತ್ತಿದ್ದಾರೆ ಎಂದು ಹೇಳಿದರು.
ದಾಸನಪುರ ಎಪಿಎಂಸಿಯಲ್ಲಿ ಅಘೋಷಿತ ಬಂದ್: ತುಕ್ಕಿಗೆ ತುತ್ತಾದ ಸೌಲಭ್ಯಗಳು!
ಡಿಸಿಎಂ ಒಂಟಿಯಾಗಿದ್ದಾರೆಂಬ ಪ್ರಶ್ನೆಗೆ, ಮುಖ್ಯಮಂತ್ರಿ ಎಷ್ಟು ಮುಖ್ಯಾನೋ ಡಿಸಿಎಂ ಸಹ ಅಷ್ಟೇ ಮುಖ್ಯ. ಅಧಿಕಾರ ಹಂಚಿಕೆ ಕುರಿತು ನನಗೆ ಗೊತ್ತಿಲ್ಲ. ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು. ಊಟಕ್ಕೆ ಸೇರುವುದು ಡಿನ್ನರ್ ಪಾಲಿಟಿಕ್ಸಾ, ಡಿನ್ನರ್‌ಗೆ ನಮ್ಮಲ್ಲಿ ಯಾವುದೇ ನಿರ್ಬಂಧ ಇಲ್ಲ. ಪ್ರತ್ಯೇಕ ಸಭೆ ಮಾಡದಂತೆ ಎಐಸಿಸಿ ಸೂಚನೆ ನೀಡಿದೆ. ಅದರಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.