ರಾಜ್ಯದ ಏಕೈಕ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಗೆ ಸ್ವಂತ ಕಟ್ಟಡವಿಲ್ಲ!

Published : Mar 26, 2025, 10:52 AM ISTUpdated : Mar 26, 2025, 10:54 AM IST
ರಾಜ್ಯದ ಏಕೈಕ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಗೆ ಸ್ವಂತ ಕಟ್ಟಡವಿಲ್ಲ!

ಸಾರಾಂಶ

ರಾಜ್ಯದ ಏಕೈಕ ಸಂಗೀತ ವಿಶ್ವವಿದ್ಯಾಲಯ 'ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ' ಆರಂಭ ವಾಗಿ 15 ವರ್ಷ ಕಳೆದರೂ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ.

ಅಂಶಿ ಪ್ರಸನ್ನಕುಮಾರ್ 

ಮೈಸೂರು (ಮಾ.26): ರಾಜ್ಯದ ಏಕೈಕ ಸಂಗೀತ ವಿಶ್ವವಿದ್ಯಾಲಯ 'ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ' ಆರಂಭ ವಾಗಿ 15 ವರ್ಷ ಕಳೆದರೂ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ. ಅರಮನೆ ನಗರಿಯ ಲಕ್ಷ್ಮೀಪುರಂನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಾರಂಪರಿಕ ಕಟ್ಟಡದಲ್ಲಿ ಆರಂಭವಾದ ವಿವಿ ಈವರೆಗೂ ಅಲ್ಲೇ ವಿದ್ಯಾರ್ಥಿಗಳಿಗೆ ಬೇಕಾದ ಕೆಲ ಸೌಕರ್ಯಗಳನ್ನು ಕಲಿಸಿಕೊಂಡು ತರಗತಿಗಳನ್ನು ನಡೆಸುತ್ತಿದೆ. ಮೊದಲ ಕುಲಪತಿ ಡಾ. ಹನುಮಣ್ಣ ನಾಯಕ ದೊರೆ ಮೈಸೂರು ತಾಲೂಕು ವರಕೋಡು ಬಳಿ ಎರಡನೇ ಕುಲಪತಿ ಸರ್ವಮಂಗಳಾ ಶಂಕರ್ ಅವರು ಹುಣಸೂರು ತಾಲೂಕು ಧರ್ಮಾಪುರ ಬಳಿ ನೂತನ ಕ್ಯಾಂಪಸ್ ಮಾಡುವ ಪ್ರಯತ್ನ ಕೈಗೂಡಲಿಲ್ಲ. 

ಮೂರನೇ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಗರದ ಸರ್ದಾರ್ ವಲ್ಲಬಾಯ್ ಪಟೇಲ್ ನಗರದಲ್ಲಿ ಕ್ಯಾಂಪಸ್‌ ನೀಡಿರುವ ಐದೂವರೆ ಎಕರೆ ಜಾಗದಲ್ಲಿ 4.5 ಕೋಟಿ ರು. ವೆಚ್ಚದಲ್ಲಿ ಆಡಳಿತ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಿದ್ದಾರೆ. ಸಭಾಂಗಣ, ಮಹಿಳೆಯರು ಹಾಗೂ ಪುರು ಷರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳು ನಿರ್ಮಾ ಣವಾದಲ್ಲಿ ಅನುಕೂಲವಾಗುತ್ತದೆ. ಕಾಯಂ ಬೋಧಕರು, ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಟ್ಟರೆ ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆ ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು. 

ದಾವಣಗೆರೆ ವಿವಿಯಲ್ಲಿ ದುಡ್ಡಿದೆ, ವಿದ್ಯಾರ್ಥಿಗಳಿಲ್ಲ! ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿ

ಒಡಂಬಡಿಕೆ ಹಣದಲ್ಲೇ ವಿವಿ ನಿರ್ವಹಣೆ: ವಿವಿಯ ವ್ಯಾಪ್ತಿಯಲ್ಲಿ ಯಾವುದೇ ಸಂಯೋಜಿತ ಕಾಲೇಜುಗಳಿಲ್ಲ. ಆದರೆ ಹುಬ್ಬಳ್ಳಿಯ ಗಂಗೂಬಾಯಿ ಗುರುಕುಲ ಟ್ರಸ್ಟ್ ಅನ್ನು ಇತ್ತೀಚೆಗೆ ಸಂಗೀತ ವಿವಿಗೆ ವಹಿಸಿಕೊಡಲಾಗಿದೆ. ವಿವಿ ವಿವಿಧ ಸರ್ಟಿಫಿಕೇಟ್, ಡಿಪ್ಲೋಮಾ ಹಾಗೂ ಪದವಿ ಕೋರ್ಸುಗಳನ್ನು ನಡೆಸಲು 71ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿ ಕೊಂಡಿದೆ. ಸರ್ಟಿಫಿಕೇಟ್ ಕೋರ್ಸಿಗೆ 17,500, ಡಿಪ್ಲೋಮಾ ಕೋರ್ಸಿಗೆ- 35,000, ಪದವಿ ಕೋರ್ಸಿಗೆ- 65,000 ರು. ಶುಲ್ಕ ನಿಗದಿಪಡಿಸಿದ್ದು, ಶೇ.25ರಷ್ಟನ್ನು ವಿವಿಗೆ ಭರಿಸಬೇಕು ಎಂದು ಒಡಂ ಬಡಿಕೆಯಾಗಿದೆ. 35-40 ಸಂಸ್ಥೆಗಳು ಕಾರ್ಯಾರಂಭ ಮಾಡಿದ್ದು, 700-800 ವಿದ್ಯಾರ್ಥಿಗಳಿದ್ದಾರೆ. ಸಂಗೀತ ವಿವಿಯಲ್ಲಿ 106 ಮಂದಿ ಡಿ.ಲಿಟ್ ಕೋರ್ಸಿಗೆ ಪ್ರವೇಶ ಪಡೆದಿದ್ದು, ಈಗಾಗಲೇ 23 ಮಂದಿ ಪೂರ್ಣಗೊಳಿಸಿದ್ದಾರೆ. 

ಉಳಿದ 83 ಮಂದಿ ಮುಗಿಸಬೇಕಿದೆ. ಸ್ನಾತಕೋತ್ತರ ಪದವಿಯಲ್ಲಿ 63 ಹಾಗೂ ಪದವಿಯಲ್ಲಿ 36 ವಿದ್ಯಾರ್ಥಿಗಳು ಇದ್ದಾರೆ. ಸರ್ಕಾರದಿಂದ ಬರುತ್ತಿದ್ದ ಅನುದಾನಕುಸಿದಿದೆ. ಸರ್ಕಾರ ಪ್ರತಿ ವಿವಿಗೆ 2.50 ಕೋಟಿ ರು. ನೀಡಬೇಕು. ಸಂಗೀತ ವಿವಿಗೆ 1.50 ಕೋಟಿ ರು.ನೀಡಲಾಗುತ್ತಿತ್ತು. ಆದರೆ ಕಾಯಂ ಕುಲಪತಿಗೆ ಇಲ್ಲದ ಸಂದರ್ಭದಲ್ಲಿ ಹಣ ವೆಚ್ಚ ಮಾಡದ ಕಾರಣ ಅದನ್ನು 1 ಕೋಟಿ ರು. ಇಳಿಸಲಾಗಿದೆ. ಹಾಗಾಗಿ ಖಾಸಗಿ ಸಂಸ್ಥೆಗಳೊಂದಿಗಿನ ಒಡಂಬಡಿಕೆ ಮತ್ತು ಪ್ರವೇಶ ಶುಲ್ಕದಿಂದಲೇ ವಿವಿಯನ್ನು ನಡೆಸಲಾಗುತ್ತಿದೆ. ಆದರೆ ಒಡಂಬಡಿಕೆ ಮಾಡಿಕೊಂಡಿರುವ ಸಂಸ್ಥೆ ಗಳಿಂದ ಬರುತ್ತಿರುವ ಆಂತರಿಕ ಸಂಪನ್ಮೂಲದಿಂದಲೇ ಅತಿಥಿ ಉಪನ್ಯಾಸಕರಿಗೆ ಸಾಂಪ್ರದಾಯಿಕ ವಿವಿಗಳಿ ಗಿಂತ ಹೆಚ್ಚಿನ ವೇತನ ನೀಡಲಾಗುತ್ತಿದೆ. ಖ್ಯಾತ ತನಾಮ ವೃತ್ತಿಪರರು ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ. ಅಂತಾರಾಷ್ಟ್ರೀಯ ನೃತ್ಯಗಾರ್ತಿ ಡಾ.ವಸುಂಧರ ದೊರೆಸ್ವಾಮಿ ಮೊದಲಾದವರನ್ನು ಕೂಡಆಹ್ವಾನಿಸಲಾ ಗುತ್ತಿದೆ. ಹಾಲಿ ಕೇಂದ್ರ ಕಚೇರಿ ಇರುವ ಆವರಣದ ಲ್ಲಿಯೇ ಕುಟೀರಗಳು ಹಾಗೂ ಸಭಾಂಗಣವನ್ನು ಕೂಡ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. 

ಪ್ರೌಢಶಿಕ್ಷಣ ಮಂಡಳಿಯ ಪರೀಕ್ಷೆ: ಹಿಂದೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸುತ್ತಿದ್ದ ಸಂಗೀತ ಪರೀಕ್ಷೆಗಳನ್ನು ಈಗ ಸಂಗೀತ ವಿವಿಯೇ ನಡೆಸುತ್ತಿದೆ. ರಾಜ್ಯದ 24 ಕೇಂದ್ರಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿ ದ್ದಾರೆ. ಏಪ್ರಿಲ್- ಮೇ ತಿಂಗಳಲ್ಲಿ ಈ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕುಲಪತಿ, ಕುಲಸಚಿವರಿಬ್ಬರೂ ಪ್ರಭಾರ, ಕಾಯಂ ಬೋಧಕರೂ ಇಲ್ಲ: ಇನ್ನು, ವಿವಿಯಲ್ಲಿ ಕಾಯಂ ಸಿಬ್ಬಂದಿಯೇ ಇಲ್ಲ. ಬೋಧಕರು ''ಅತಿಥಿ''ಗಳು. ಬೋಧಕೇತರರು ''ಹೊರಗುತ್ತಿಗೆ ''! ಕುಲಪತಿ, ಕುಲಸಚಿವ ಹುದ್ದೆಗಳೂ ಪ್ರಭಾರ, ಮೂಲತಃ ಬೆಂಗಳೂರು ವಿವಿಗೆ ಸೇರಿದ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ಅವರು ಕುಲಪತಿಯಾಗಿ ನಾಲ್ಕು ವರ್ಷಗಳನ್ನು ಪೂರೈಸಿದ್ದು, ರಾಜ್ಯ ಸರ್ಕಾರ ಹೊಸ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ರಚಿಸಿಲ್ಲ. ಹೀಗಾಗಿ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಪ್ರೊ.ನಾಗೇಶ್ ಬೆಟ್ಟಕೋಟೆ ಅವರನ್ನು ಮುಂದಿನ ಕುಲಪತಿ ನೇಮಕದವರೆಗೆ ಅಥವಾ ಆರು ತಿಂಗಳು ಯಾವುದು ಮೊದಲೋ ಅಲ್ಲಿಯವರೆಗೆ ಪ್ರಭಾರ ಕುಲಪತಿಯಾಗಿ ಮುಂದುವರಿಸಿದ್ದಾರೆ. ಮೈಸೂರು ವಿವಿ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಅವರು ಕುಲಸಚಿವರಾಗಿ ಪ್ರಭಾರದಲ್ಲಿದ್ದಾರೆ.ಮೈಸೂರುವಿವಿಗೆಸೇರಿದ ಕನ್ನಡಪ್ರಾಧ್ಯಾಪಕಡಾ.ಎಂ.ಜಿ.ಮಂಜನಾಥ ಅವರು ಪರೀಕ್ಷಾಂಗ ಕುಲಸಚಿವರಾಗಿದ್ದಾರೆ. ಉಳಿದಂತೆ 18 ಮಂದಿ ಅತಿಥಿ ಉಪನ್ಯಾಸಕರಾಗಿ ಹಾಗೂ 11 ಮಂದಿ ಬೋಧಕೇತರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಕ್ರಮವಾಗಿ ಅವರ ಮೂಲಕ ವಿವಿಯ ಪಾಠ ಪ್ರವಚನ ಹಾಗೂ ದೈನಂದಿನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರಲಾಗುತ್ತಿದೆ.

ಕನಿಷ್ಠ ಸೌಲಭ್ಯಗಳೂ ಇಲ್ಲದೆ ಸೊರಗುತ್ತಿದೆ ಕೊಪ್ಪಳ ವಿವಿ: ಕುಲಪತಿ ಸಂಚಾರಕ್ಕೆ ಕಾರೂ ಇಲ್ಲ!

ಕೆಲ ಕೊರತೆಗಳ ನಡುವೆಯೂ ಸಂಗೀತ ವಿವಿ ಕಳೆದ ಮೂರು ವರ್ಷಗಳಿಂದ ಹೆಚ್ಚು ಕ್ರಿಯಾಶೀಲವಾಗಿದೆ. ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ, ಖ್ಯಾತ ರಂಗಕರ್ಮಿ ಬಾಬು ಹಿರಣ್ಣಯ್ಯ ಅವರಂಥವರು ಡಿ.ಲಿಟ್ ಕೋರ್ಸಿಗೆ ಸೇರ್ಪಡೆಯಾಗಿ ಯಶಸ್ವಿಯಾಗಿ ಪೂರೈಸಿದ ನಂತರ ನಾಡಿನ, ಹೊರ ರಾಜ್ಯಗಳ ಹಾಗೂ ವಿದೇಶಗಳ ಪ್ರಸಿದ್ಧ ಕಲಾವಿದರು ಪ್ರವೇಶ ಪಡೆದಿದ್ದಾರೆ. ಇದರಿಂದ ಡಿ.ಲಿಟ್ ಕೋರ್ಸಿಗೆ ಭಾರಿ ಬೇಡಿಕೆ ಕಂಡು ಬಂದಿದೆ. ಇದಲ್ಲದೆ ಇಂದಿನ ದಿನಮಾನಗಳ ಅಗತ್ಯಕ್ಕೆ ಅನುಗುಣವಾಗಿ ಚಲನಚಿತ್ರ ನಟನೆ, ನಿರ್ದೇಶನ, ಸಂಗೀತ, ವಸ್ತ್ರಾಲಂಕಾರ ಮೊದಲಾದ ಕೋರ್ಸುಗಳನ್ನು ಆರಂಭಿಸಲಾಗುತ್ತಿದೆ. ಇದಕ್ಕಾಗಿ ಹಂಸಲೇಖ, ಬಿ.ಸುರೇಶ್, ಬಾಲಸುಬ್ರಹ್ಮಣ್ಯ, ಎಲ್. ಸುಬ್ರಹ್ಮಣ್ಯ ಮೊದಲಾದವರ ಮಾರ್ಗದರ್ಶನ ಪಡೆಯಲಾಗುತ್ತಿದೆ.
-ಪ್ರೊ.ನಾಗೇಶ್ ವಿ. ಬೆಟ್ಟಕೋಟೆ, ಕುಲಪತಿ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ, ಮೈಸೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌