
ಬೆಂಗಳೂರು[ಜ.12]: ಬೆಂಗಳೂರಿನ ಮೆಟ್ರೋ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೊಬ್ಬ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.
ಮೆಟ್ರೋ ರೈಲು ಸಂಚರಿಸಲು ಹಳಿಯಲ್ಲಿ 750 ಕೆ.ವಿ. ವಿದ್ಯುತ್ ಪ್ರವಹಿಸುತ್ತದೆ. ಹಳಿಗೆ ದೇಹ ಸ್ವಲ್ಪ ತಾಗಿದರೂ ಕ್ಷಣಾರ್ಧದಲ್ಲಿ ಸುಟ್ಟ ಕರಕಲಾಗುತ್ತದೆ. ಆದರೆ ಆತ್ಮಹತ್ಯೆಗೆ ಯತ್ನಿಸಿದ ಯುವಕ ಹಳಿಗಳ ನಡುವೆ ಬಿದ್ದಿದ್ದಾನೆ. ಈ ವೇಳೆ ವಿದ್ಯುತ್ ಹರಿಯುವ ಹಳಿಗಳ ಸಂಪರ್ಕ ಆತನ ದೇಹದೊಂದಿಗೆ ಆಗಿಲ್ಲ. ಹೀಗಾಗಿ ಆತ ಬಚಾವ್ ಆಗಿದ್ದಾನೆ
ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರಿನ ಬಸವನಗುಡಿ ನಿವಾಸಿ ವೇಣುಗೋಪಾಲ್ (18) ಅದೃಷ್ಟವಶಾತ್ ಪ್ರಾಣಾ ಪಾಯದಿಂದ ಪಾರಾಗಿದ್ದಾನೆ. ಜಿಗಿದ ರಭಸಕ್ಕೆ ಯುವಕನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶುಕ್ರವಾರ ಬೆಳಗ್ಗೆ 11.20ರ ಸುಮಾರಿಗೆ ಯಲಚೇನಹಳ್ಳಿ ಮಾರ್ಗವಾಗಿ ರೈಲು ಬಸವನಗುಡಿಯ ನ್ಯಾಷನಲ್ ಕಾಲೇಜು ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿತ್ತು. ಯುವಕ ಆತ್ಮಹತ್ಯೆಗೆ ರೈಲಿನತ್ತ ಧಾವಿಸುವ ಮುನ್ನವೇ, ರೈಲನ್ನು ಪ್ಲಾಟ್‌ಫಾರಂನಲ್ಲಿ ನಿಲ್ಲಿಸಲು ಚಾಲಕ ಬ್ರೇಕ್ ಹಾಕಿದ್ದ. ಹೀಗಾಗಿ ರೈಲು ನಿಧಾನವಾಗಿ ಚಲಿ
ಸುತ್ತಿತ್ತು. ಈ ವೇಳೆ ನಿಲ್ದಾಣದ ಬೋರ್ಡಿಂಗ್ ಪ್ರದೇಶದಿಂದ 20 ಮೀ. ಅಂತರದಲ್ಲಿ ನಿಂತಿದ್ದ ವೇಣು ಗೋಪಾಲ್ ರೈಲು ಸಮೀಪ ಬರುತ್ತಿದ್ದಂತೆ ಹಳಿಗೆ ಜಿಗಿದಿದ್ದ.
ಪಾರಾಗಿದ್ದು ಹೇಗೆ?:
ಮೆಟ್ರೋ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ್ದ ವೇಣುಗೋಪಾಲ್ ಬದುಕುಳಿದದ್ದು ಒಂದು ಪವಾಡವೇ ಸರಿ! ಒಂದು ವೇಳೆ 750 ಕೆ.ವ್ಯಾಟ್ ವಿದ್ಯುತ್ ಪ್ರವಹಿಸುತ್ತಿದ್ದ ಮೆಟ್ರೋ ರೈಲು ಸಂಚರಿಸುವ ಬಲಬದಿಯ ಹಳಿಯ ಮೇಲೆ ಆತ ಬಿದ್ದಿದ್ದರೆ ವಿದ್ಯುತ್ ಪ್ರವಾಹಕ್ಕೆ ಆತನ ದೇಹ ಸುಟ್ಟುಹೋಗುವ ಸಾಧ್ಯತೆ ಇತ್ತು (ಬಲ ಬದಿಯ ಹಳಿಯಲ್ಲಿ ಮಾತ್ರ ವಿದ್ಯುತ್ ಪ್ರವಾಹ ಇರುತ್ತದೆ). ಫ್ಲಾಟ್‌ಫಾರಂ ಬದಿಯ ಹಳಿಯಲ್ಲಿ ವಿದ್ಯುತ್ ಹರಿಯುವುದಿಲ್ಲ.
ಮೆಟ್ರೊ ರೈಲಿನ ಎರಡು ಹಳಿಗಳ ನಡುವೆ 2 ಅಡಿ ಅಗಲ ಮತ್ತು ರೈಲು ಇಂಜಿನ್ ಹಾಗೂ ಕಾಂಕ್ರೀಟ್ ಫ್ಲೋರಿಂಗ್- ರೈಲು ಹಳಿಗಳ ನಡುವಿನ ಅಂತರ ಸುಮಾರು 1ರಿಂದ ಒಂದೂವರೆ ಅಡಿ ಎತ್ತರ ಇದೆ. ರೈಲು ಡಿಕ್ಕಿ ಹೊಡೆದ ಕೂಡಲೇ ವೇಣುಗೋಪಾಲ್ ಬೋರಲಾಗಿ ಎರಡು ಹಳಿಗಳ ನಡುವೆ ಬಿದ್ದಿದ್ದಾನೆ. ಆದ್ದರಿಂದ ರೈಲು ಇಂಜಿನ್ ಮತ್ತು ಬೋಗಿಗಳು ಮೇಲೆ ಸಾಗಿ ಹೋದರೂ ಆತನಿಗೆ ಯಾವುದೇ ತೊಂದರೆ ಆಗಿಲ್ಲ. ಒಂದು ವೇಳೆ ಮಗ್ಗುಲಿನ ಭಂಗಿಯಲ್ಲಿ ಬಿದ್ದಿದ್ದರೆ ರೈಲು ಬೋಗಿಗಳು ಆತನ ದೇಹವನ್ನು ಉಜ್ಜಿಕೊಂಡು ಹೋಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಬೋರಲು ಬಿದ್ದ ಕಾರಣ ಆತನ ದೇಹಕ್ಕೆ ರೈಲ್ವೆ ಬೋಗಿಗಳು ತಾಗಿಲ್ಲ.
ಅದಲ್ಲದೇ ರೈಲಿನ ವೇಗವು ಕೂಡ ನಿಧಾನಗತಿಯಲ್ಲಿ ಇದ್ದಿದ್ದರಿಂದ ಹೆಚ್ಚಿನ ಅವಘಡ ಸಂಭವಿಸಿಲ್ಲ. ಆತ್ಮಹತ್ಯೆ ಪ್ರಯತ್ನದಲ್ಲಿ ತಲೆಗೆ ಏಟು ಬಿದ್ದು, ಸ್ವಲ್ಪ ಉಜ್ಜಿಕೊಂಡು ಕೈಕಾಲುಗಳಲ್ಲಿ ತರಚಿದ ಗಾಯಗಳು ಆಗಿವೆ. ಮೆಟ್ರೋ ರೈಲು ಚಾಲಕ ತಕ್ಷಣವೇ ತುರ್ತು ಬ್ರೇಕ್ ಹಾಕಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ. ರೈಲು ಮುಂದೆ ಹೋದ ಬಳಿಕ ಗಾಯಾಳುವನ್ನು ಮೆಟ್ರೋ ಸಿಬ್ಬಂದಿ ಎತ್ತಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ವೇಳೆ ಹಳಿಯಲ್ಲಿ ಹರಿಯುತ್ತಿದ್ದ ವಿದ್ಯುತ್ ಸ್ಥಗಿತಗೊಳಿಸಲಾಯಿತು ಎಂದು ಮೆಟ್ರೋ ಅಧಿಕಾ ರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆ ಉದ್ದೇಶ ಇಟ್ಟು ಕೊಂಡೇ ಆತನು ಮೆಟ್ರೋ ನಿಲ್ದಾಣಕ್ಕೆ ಬಂದಿರಬಹುದು ಎಂದು ಸಂಶಯಿಸಲಾಗಿದ್ದು, ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪೊಲೀಸರಿಗೆ ಕೊಡಲಾಗಿದೆ. ಸಾರ್ವಜನಿಕ ಉದ್ದೇಶಕ್ಕಿರುವ ಮೆಟ್ರೋದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಗಂಟೆ ಸಂಚಾರ ಸ್ಥಗಿತ: ಘಟನೆಯಿಂದಾಗಿ ನಾಗಸಂದ್ರ-ಯಲಚೇನಹಳ್ಳಿ (ಹಸಿರು ಮಾರ್ಗ) ಮಾರ್ಗದ ಮೆಟ್ರೋ ರೈಲು ಸಂಚಾರ ಒಂದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ಮೆಟ್ರೋ ಪ್ರಯಾಣಿಕರು ಪರದಾಡಿದರು.
ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ರೈಲು ಮಾರ್ಗದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆ ಹಸಿರು ಮಾರ್ಗದ ಎಲ್ಲ ಮೆಟ್ರೋ ರೈಲುಗಳ ಸಂಚಾರಗಳನ್ನು ಸ್ಥಗಿತಗೊಳಿಸಲಾಗಿತು
ಯಲಚೇನಹಳ್ಳಿ-ನಾಗಸಂದ್ರದ ಎರಡು ಕಡೆಸಂಚರಿಸುತ್ತಿದ್ದ ಸುಮಾರು 30 ರೈಲುಗಳ ಸಂಚಾರವನ್ನು ಒಂದು ಗಂಟೆಗಳ ಕಾಲ ರದ್ದುಪಡಿಸಲಾಯಿತು. ನಂತರ ಏಳು ನಿಮಿಷಗಳ ಅಂತರದ ಬದಲು ನಾಲ್ಕು ನಿಮಿಷಗಳ ಅಂತರದಲ್ಲಿ ಪುನಃ ಮೆಟ್ರೋ ರೈಲು ಸಂಚಾರ ಆರಂಭಿಸಲಾಯಿತು. ಈ ಅವಧಿಯಲ್ಲಿ ಕೆಲವು ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮೂಲಕ ತೆರಳಿದರೆ, ಹಲವರು ಒಂದು ಗಂಟೆ ನಂತರ ಮೆಟ್ರೋ ರೈಲಿನಲ್ಲೇ ಪ್ರಯಾಣಿಸಿದರು ಎಂದು ಬಿಎಂಆರ್ ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ