ಶಿವಕುಮಾರಗೌಡ ಪಾಪು ಆದ ಕಥೆ!

By Kannadaprabha News  |  First Published Mar 17, 2020, 8:07 AM IST

ಪಾಪು ಆದ ಶಿವಕುಮಾರಗೌಡ!| ಇಡೀ ನಾಡಿಗೆ ಪಾಪು ಎಂದೇ ಚಿರಪರಿತರಾದ ಪಾಟೀಲ ಪುಟ್ಟಪ್ಪ ಅವರ ಮೂಲ ಹೆಸರು ಶಿವಕುಮಾರಗೌಡ ಎಂಬುದೇ ಬಹುತೇಕರಿಗೊತ್ತಿಲ್ಲ.


ಬೆಂಗಳೂರು[ಮಾ.17]: ಇಡೀ ನಾಡಿಗೆ ಪಾಪು ಎಂದೇ ಚಿರಪರಿತರಾದ ಪಾಟೀಲ ಪುಟ್ಟಪ್ಪ ಅವರ ಮೂಲ ಹೆಸರು ಶಿವಕುಮಾರಗೌಡ ಎಂಬುದೇ ಬಹುತೇಕರಿಗೊತ್ತಿಲ್ಲ.

"

Latest Videos

undefined

ಇಂದಿನ ರಾಣಿಬೆನ್ನೂರು ತಾಲೂಕಿನ ಹಲಗೇರಿಯ ಪಾಟೀಲ್‌ ಮನೆತನದ ಸಿದ್ಧಲಿಂಗಪ್ಪಗೌಡ ಮತ್ತು ಮಲ್ಲಮ್ಮ ದಂಪತಿ ಹಿರಿಯ ಪುತ್ರರಾಗಿ ಜನಿಸಿದ ಶಿವಕುಮಾರಗೌಡರು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಆದ ಬಗೆ ನಿಜಕ್ಕೂ ಅಚ್ಚರಿ.

ಹಾವೇರಿ ಜಿಲ್ಲೆ ಕುರುಬಗೊಂಡನ ಹಳ್ಳಿ ತಾಯಿ ಮಲ್ಲಮ್ಮ ಅವರ ತವರೂರು. ಶಿವಕುಮಾರಗೌಡನ ಜನನ, ಆರಂಭಿಕ ಶಿಕ್ಷಣ ಆದದ್ದು ಇಲ್ಲಿಯೇ. ಬಳಿಕ ಅಪ್ಪನ ಊರು ಹಲಗೇರಿಗೆ ಹೋದಾಗ ಈ ಶಿವಕುಮಾರಗೌಡ ಪುಟ್ಟಪ್ಪ ಆಗುತ್ತಾರೆ. ಕಾರಣ ಸಿದ್ಧಲಿಂಗಪ್ಪಗೌಡರ ಹಿರಿಯಣ್ಣನ ಹೆಸರು ಕೂಡ ಶಿವಕುಮಾರಗೌಡ. ಹಾಗಾಗಿ ಮಗ ಶಿವಕುಮಾರಗೌಡನನ್ನು ಹೆಸರುಗೊಂಡು ಕರೆದರೆ ಅಣ್ಣನನ್ನು ಏಕವಚನದಲ್ಲಿ ಸಂಭೋದಿಸಿದಂತೆ ಆಗುತ್ತದೆ ಎಂದು ಈ ಪುಟ್ಟಕಂದನನ್ನು ಪುಟ್ಟಪ್ಪ ಎಂದು ಕರೆಯಲಾರಂಭಿಸಿದರು. ಮನೆಮಂದಿ, ಸಂಬಂಧಿಕರೂ ಪುಟ್ಟಪ್ಪ ಎನ್ನತೊಡಗಿದರು. ಕೊನೆಗೆ ಶಾಲಾ ದಾಖಲಾತಿಯೂ ಪುಟ್ಟಪ್ಪ ಎಂದು ಬದಲಾಯಿತು. ಹೀಗೆ ಪಾಟೀಲ ಶಿವಕುಮಾರಗೌಡ ಹೋಗಿ ಪಾಟೀಲ ಪುಟ್ಟಪ್ಪ ಆದರು.

ವಿದೇಶದಲ್ಲಿ ಓದಿ ಬಂದವರು, ಕರ್ನಾಟಕ ಏಕೀಕರಣ, ಗೋಕಾಕ ಚಳವಳಿಯ ಮುಂಚೂಣಿ ಹೋರಾಟಗಾರರು ಮತ್ತು ನಾಡಿನ ಬಗ್ಗೆ ಅಧಿಕೃತ ಮಾತನಾಡಬಲ್ಲ ವಿಧ್ವತ್ತು ಇದ್ದವರು ಎನ್ನುವ ಕಾರಣಕ್ಕೆ ಪಾಟೀಲ ಪುಟ್ಟಪ್ಪನವರ ಬಗ್ಗೆ ಹಿಂದಿನ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರಿಗೆ ಎಲ್ಲಿಲ್ಲದ ಗೌರವ. ಹಲವು ಬಾರಿ ಅವರೊಂದಿಗೆ ಕೂಡುತ್ತಿದ್ದರು, ಸಭೆ ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಇವರ ಹೆಸರನ್ನು ಕಿರಿದುಗೊಳಿಸಿ ‘ಪಾಪು’ ಎಂದು ಪ್ರೀತಿಯಿಂದ ಸಂಭೋದಿಸಲು ಶುರುಮಾಡಿದರು. ನಾಡಿನ ದೊರೆಯೇ ಹೀಗೆ ಕರೆದ ಬಳಿಕ ಇವರಿಗೆ ಪಾಪು ಕಾಯಂ ಆಯಿತು.

ಇವರು ಶತಮಾನದ ಹೊಸ್ತಿಲು ದಾಟಿದಾಗಲೂ ನಾಡಿನ ಜನತೆ ಇವರು ‘ಪಾಪು’ ಎಂದೇ ಅಭಿಮಾನದಿಂದ ಕರೆದರು.

click me!