ಚಾಮರಾಜನಗರ ಕೊರೋನಾ ಮುಕ್ತ ಹೇಗಾಯ್ತು?

Published : Jun 05, 2020, 09:17 AM ISTUpdated : Jul 04, 2020, 06:05 PM IST
ಚಾಮರಾಜನಗರ ಕೊರೋನಾ ಮುಕ್ತ ಹೇಗಾಯ್ತು?

ಸಾರಾಂಶ

ಈವರೆಗೂ ಚಾಮರಾಜನಗರ ಕೊರೋನಾ ಮುಕ್ತ | ರಾಜ್ಯದಲ್ಲಿ ಮೊದಲ ಸೋಂಕು ಪತ್ತೆಯಾಗಿ 85 ದಿನ | ಸದ್ಯ ಗಡಿ ಜಿಲ್ಲೆ ಸೇಫ್‌ | ಜಿಲ್ಲಾಡಳಿತ, ಪೊಲೀಸರ ಕ್ರಮ, ಜನರ ಸಹಕಾರ ಕಾರಣ

ಬೆಂಗಳೂರು (ಜೂ. 05): ರಾಜ್ಯದಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾದ 85 ದಿನದ ಬಳಿಕವೂ ಚಾಮರಾಜನಗರ ಜಿಲ್ಲೆ ಮಾತ್ರ ಕೊರೋನಾ ಮುಕ್ತವಾಗಿಯೇ ಉಳಿದಿದೆ.

 ಜಿಲ್ಲೆಯ ಈ ಸಾಧನೆಗೆ ಜಿಲ್ಲಾಡಳಿತ ಹಾಗೂ ಪೊಲೀಸರ ಕಟ್ಟುನಿಟ್ಟಿನ ನಿಯಂತ್ರಣಾ ಕ್ರಮ ಹಾಗೂ ಸಾರ್ವಜನಿಕರ ಸಹಕಾರದ ಜೊತೆಗೆ ಹೈರಿಸ್ಕ್‌ ರಾಜ್ಯಗಳಿಂದ ಹೆಚ್ಚು ಮಂದಿ ವಾಪಸಾಗದಿರುವುದು ಸಹ ವರದಾನ ಎಂದು ತಿಳಿದು ಬಂದಿದೆ.

ಜೊತೆಗೆ ದೇಶದಲ್ಲಿಯೇ ಮೊದಲ ಕೊರೋನಾ ಸೋಂಕು ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು. ಹೀಗಾಗಿ ಕೇರಳ ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ ಫೆಬ್ರುವರಿ ಮೊದಲ ದಿನದಿಂದಲೇ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮ ಅನುಸರಿಸಲಾಗಿತ್ತು. ಕೇರಳ ಗಡಿಯಿಂದ ಆಗಮಿಸುವ ಪ್ರತಿ ಸರಕು ಸಾಗಣೆ ವಾಹನವನ್ನೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಿಯೇ ಜಿಲ್ಲೆಗೆ ಬಿಟ್ಟುಕೊಳ್ಳಲಾಗುತ್ತಿತ್ತು. ಎಲ್ಲಾ ಜಿಲ್ಲೆಗಳಿಗಿಂತಲೂ ಮೊದಲೇ ನಿಯಂತ್ರಣ ಕ್ರಮ ಅನುಸರಿಸಿದ ಫಲವಿದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕೆಪಿಸಿಸಿ ಮಾಜಿ ಅಧ್ಯಕ್ಷನಿಗೆ ಕೊರೋನಾ ಭೀತಿ

ಚಾಮರಾಜನಗರ ಜಿಲ್ಲೆಯಲ್ಲಿ ಸೋಂಕು ಶಂಕಿತರು, ಅನ್ಯ ರಾಜ್ಯದಿಂದ ಆಗಮಿಸಿದವರು, ತಬ್ಲೀಘಿ ಜಮಾತ್‌ಗೆ ತೆರಳಿದ್ದವರು, ಸಂಪರ್ಕಿತರು, ನಂಜನಗೂಡಿನ ಔಷಧ ಕಾರ್ಖಾನೆ ಉದ್ಯೋಗಿಗಳು ಸೇರಿ ಒಟ್ಟು 2673 ಮಂದಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 2574 ಮಂದಿಗೆ ವರದಿ ನೆಗೆಟಿವ್‌ ಆಗಿದ್ದು, ಈವರೆಗೂ ಒಂದೂ ಸೋಂಕು ದೃಢಪಟ್ಟಿಲ್ಲ. ಕ್ವಾರಂಟೈನ್‌ನಲ್ಲಿದ್ದ 55 ಮಂದಿಯೂ ಬಿಡುಗಡೆಯಾಗಿದ್ದಾರೆ. ಇನ್ನೂ 99 ಮಂದಿಯ ಫಲಿತಾಂಶ ಬರಬೇಕಿದ್ದು, ಈ ವರದಿಯೂ ನೆಗೆಟಿವ್‌ ಆಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ವಾಪಸಾಗಿದ್ದು ವಲಸಿಗರು 97 ಮಾತ್ರ:

ರಾಜ್ಯದಲ್ಲಿ ಬುಧವಾರದವರೆಗೆ ವರದಿಯಾಗಿರುವ 4,063 ಪ್ರಕರಣಗಳಲ್ಲಿ 2,412 ಪ್ರಕರಣ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲೇ ವರದಿಯಾಗಿದೆ. ಆದರೆ ಚಾಮರಾಜನಗರಕ್ಕೆ ಮಹಾರಾಷ್ಟ್ರ, ದೆಹಲಿ, ಗುಜರಾತ್‌, ರಾಜಸ್ತಾನ, ತಮಿಳುನಾಡಿನಿಂದ ವಾಪಸಾಗಲು 900 ಮಂದಿ ಅನುಮತಿ ಕೇಳಿದ್ದರು. ತುರ್ತು ಅಗತ್ಯವಿರುವ 400 ಮಂದಿಗೆ ಅನುಮತಿ ನೀಡಿದ್ದರೂ 97 ಮಂದಿ ಮಾತ್ರ ವಾಪಸಾಗಿದ್ದಾರೆ. ಇನ್ನು ಅನಧಿಕೃತವಾಗಿ ಸುಮಾರು 200 ಮಂದಿ ಅಂತರ್‌ರಾಜ್ಯ ಪ್ರಯಾಣಿಕರು ಜಿಲ್ಲೆಗೆ ಆಗಮಿಸಿದ್ದು ಸ್ಥಳೀಯರ ಸಹಕಾರದಿಂದ ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದ್ದಾರೆ.

ಹೈರಿಸ್ಕ್‌ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡಿನಂತಹ ರಾಜ್ಯಗಳಿಂದ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಮೇ 15 ರಂದು ಜಿಲ್ಲಾಡಳಿತ ಘೋಷಿಸಿತ್ತು. ಇನ್ನು ಹೈರಿಸ್ಕ್‌ ರಾಜ್ಯಗಳಿಗೆ ರಾಜ್ಯದಿಂದಲೂ ಕೆಲಸಕ್ಕಾಗಿ ವಲಸೆ ಹೋಗಿದ್ದವರ ಸಂಖ್ಯೆ ತೀರಾ ವಿರಳ ಎಂದು ತಿಳಿದುಬಂದಿದೆ.

ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಸತ್ಯು

ಎಚ್ಚರ ತಪ್ಪದ ಜಿಲ್ಲಾಡಳಿತ:

ಕೇರಳ ಜತೆಗೆ ದೇಶದಲ್ಲೇ ಪ್ರಮುಖ ಸೋಂಕಿತ ರಾಜ್ಯದಲ್ಲಿ ಒಂದಾದ ತಮಿಳುನಾಡು ಸಹ ಗಡಿಗೆ ಹೊಂದಿಕೊಂಡಿದೆ. ಹೀಗಾಗಿ 6 ಅಂತರ್‌ಜಿಲ್ಲೆ ಹಾಗೂ 10 ಅಂತಾರಾಜ್ಯ ಗಡಿಗಳಲ್ಲಿ ತೀವ್ರ ಭದ್ರತಾ ಕ್ರಮ ಅನುಸರಿಸಲಾಗಿತ್ತು.

ಜಿಲ್ಲಾಡಳಿತ ಸೋಂಕು ಪತ್ತೆಗೆ ಹೆಜ್ಜೆ ಹೆಜ್ಜೆಗೂ ಕ್ರಮ ಕೈಗೊಂಡಿತ್ತು. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಪ್ರತಿ ಮನೆ-ಮನೆಗೂ ಸರ್ವೆ ನಡೆಸಿ ಐಎಲ್‌ಐ ಹಾಗೂ ಸಾರಿ (ತೀವ್ರ ಉಸಿರಾಟ ತೊಂದರೆ) ಲಕ್ಷಣಗಳಿರುವ 443 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಷ್ಟೂಮಂದಿಗೆ ಕೊರೋನಾ ನೆಗೆಟಿವ್‌ ಬಂದಿದೆ.

ಇನ್ನು ರಾಜ್ಯವನ್ನು ತೀವ್ರ ಆತಂಕಕ್ಕೆ ದೂಡಿದ್ದ ಮೈಸೂರಿನ ನಂಜನಗೂಡು ಔಷಧ ಕಾರ್ಖಾನೆಯಲ್ಲೂ 53 ಮಂದಿ ಚಾಮರಾಜನಗರ ಜಿಲ್ಲೆಯವರು ಕೆಲಸ ಮಾಡುತ್ತಿದ್ದರು. ಅವರಿಗೂ ಕೊರೋನಾ ಸೋಂಕು ನೆಗೆಟಿವ್‌ ಬಂದಿದೆ. ದಿಲ್ಲಿಯ ತಬ್ಲೀಘಿ ಜಮಾತ್‌ ಧರ್ಮಸಭೆಯಿಂದಲೂ ಇಬ್ಬರು ಆಗಮಿಸಿದ್ದರು. ಅವರ ಸಂಪರ್ಕದಲ್ಲಿದ್ದ 105 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಕಟ್ಟುನಿಟ್ಟಿನ ಕ್ರಮ ಮುಂದುವರಿಕೆ

ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಗೊಂಡಿದ್ದರೂ ಚಾಮರಾಜನಗರ ಜಿಲ್ಲೆಯಲ್ಲಿ ಅಗತ್ಯ ಕಟ್ಟುನಿಟ್ಟಿನ ತಪಾಸಣಾ ಕ್ರಮ ಮುಂದುವರೆಸಲಾಗಿದೆ.

ಕಡ್ಡಾಯವಾಗಿ ಪ್ರತಿ ವಾಹನವನ್ನೂ ತಪಾಸಣೆ ನಡೆಸಿಯೇ ಬಿಡಲಾಗುತ್ತಿದೆ. ಜತೆಗೆ ಅಂತರ್‌ರಾಜ್ಯ ಗಡಿಗಳಲ್ಲಿ ಪ್ರತಿ ವಾಹನವನ್ನೂ ಸ್ಯಾನಿಟೈಸ್‌ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರ ಕೊರೋನಾ ಸಿದ್ಧತೆ

ಕೊರೋನಾ ಹಾಸಿಗೆ ವ್ಯವಸ್ಥೆ - 389

ಐಸಿಯು ಬೆಡ್‌ - 24

ವೆಂಟಿಲೇಟರ್‌ -11

ಒಟ್ಟು ಸೋಂಕು ಪರೀಕ್ಷೆ - 2673

ಸವಾಲು ಮುಂದಿದೆ

ರಾಜ್ಯದ ಏಕೈಕ ಕೊರೋನಾ ಮುಕ್ತ ಜಿಲ್ಲೆ ಎಂದು ನಾವು ಮೈ ಮರೆತಿಲ್ಲ. ನಮಗೆ ಜವಾಬ್ದಾರಿ ಹೆಚ್ಚುತ್ತಿದೆ. ಜಿಲ್ಲೆಯನ್ನು ಕೊರೋನಾ ಹಸಿರುವ ವಲಯವನ್ನಾಗಿಡಲು ಜನರು ಸ್ಪಂದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸವಾಲು ಹೆಚ್ಚಾಗಲಿದೆ.

-ಡಾ.ಎಂ.ಆರ್‌.ರವಿ, ಜಿಲ್ಲಾಧಿ​ಕಾರಿ, ಚಾಮರಾಜನಗರ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ