
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.02): ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಇದರ ಪರಿಣಾಮ ಕೆರೆ ಕಟ್ಟೆಯಲ್ಲಿ ನೀರು ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಕೊರತೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮದಗದ ಕೆರೆಯಲ್ಲಿ ನೀರು ಇಲ್ಲದೇ ಖಾಲಿ ಖಾಲಿ ಆಗಿದೆ. ಮಾಯದಂತ ಮಳೆ ಬಂತಣ್ಣ, ಮದಗಾದ ಕೆರೆಗೆ. ಪೂರ್ವಿಕರು ಕಟ್ಟಿದ ಪದಗಳು ಜನಪದ ಸಾಹಿತ್ಯಕ್ಕೂ ಸಾಕ್ಷಿಯಾಗಿತ್ತು. ಆದ್ರೀಗ, ಮಾಯದಂತ ಮಳೆ ಬಂದು ತುಂಬುತ್ತಿದ್ದ ಕೆರೆಗೂ ನೀರಿಲ್ಲದೆ ಬರದ ಛಾಯೆ ಆವರಿಸಿದೆ. 336 ಹೆಕ್ಟೇರ್‌ನ 2036 ಎಕರೆ ಕೆರೆ ಸಂಪೂರ್ಣ ಒಣಗಿ ನಿಂತಿದೆ. ಮಾಯದಂತಹಾ ಮಳೆಯಿಂದ ಗಾಳಿಗೆ ತುಂಬುತ್ತಿದ್ದ ಕೆರೆ ಈಗ ಖಾಲಿ... ಖಾಲಿ ಆಗಿದೆ.
ದನಕರುಗಳು ಮೇಯುವ ಜಾಗವಾದ ಕೆರೆ: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿರುವ ಮದಗದ ಕೆರೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕೆರೆ. ಜನಪದದ ಬಾಯಲ್ಲಿ ಮೂಡಿದ ಅದ್ಭುತ ಪರಿಕಲ್ಪನೆಗೆ ಸಾಕ್ಷಿಯಾಗಿದ್ದೆ ಈ ಮದಗದ ಕೆರೆ. ಈ ಕೆರೆಗೆ ಬರೋದೆ ಮಾಯದಂತ ಮಳೆ. ಅಂದ್ರೆ, ಇಲ್ಲಿ ಮಳೆ ಬಾರದಿದ್ರು ಮುಳ್ಳಯ್ಯನಗಿರಿ, ದತ್ತಪೀಠದ ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆಯಿಂದ ಈ ಕೆರೆ ಗಾಳಿಗೆ ತುಂಬುತ್ತಿತ್ತು.ಕೆರೆಯಲ್ಲಿ ನೀರು ಇದ್ರೆ ಸಮುದ್ರದಂತೆ ಭಾಸವಾಗುತ್ತದೆ, ಅದರಲ್ಲೂ ಸುತ್ತಲೂ ಮುಗಿಲೆತ್ತರದ ಬೆಟ್ಟಗುಡ್ಡಗಳು, ಮಧ್ಯೆ ವಿಸ್ತಾರವಾಗಿದೆ ಈ ಮದಗದ ಕೆರೆ.
Kolar: ಕಲ್ಲುಕುಟುಗರಿಗೆ ಕೆಲಸ ಮಾಡಲು ಪರವಾನಗಿ ನೀಡಿ: ಸಂಸದ ಮುನಿಸ್ವಾಮಿ ಆಗ್ರಹ
ಇಲ್ಲಿನ ಸೌಂದರ್ಯವನ್ನು ಕಂಡು ಹಲವು ಚಲನಚಿತ್ರಗಳ ಹಾಡಿನ ಚಿತ್ರೀಕರಣವೂ ನಡೆದಿದೆ. ಆದ್ರೆ, ಈ ಬಾರಿ ಮಾಯದಂತ ಮಳೆಯೂ ಇಲ್ಲ. ಮಾಮೂಲಿ ಮಳೆಯೂ ಬಾರದ ಕಾರಣ ಈ ಕೆರೆ ಸಂಪೂರ್ಣ ಖಾಲಿಯಾಗಿ ಒಣಗಿ ನಿಂತಿದೆ. ಈ ಕೆರೆಯನ್ನೇ ನಂಬಿ ಬದುಕ್ತಿರೋ ಕೆರೆಯ ಸುತ್ತಲಿನ 36 ಹಳ್ಳಿಗಳು ನೀರಿಗಾಗಿ ಹಾಹಾಕಾರ ಅನುಭವಿಸುವ ಆತಂಕ ಎದುರಿಸುತ್ತಿದ್ದಾರೆ. ಈ ಕೆರೆ ತುಂಬಿದರೆ ಇಡೀ ಕಡೂರು ತಾಲೂಕಿಗೆ ಕುಡಿಯುವ ನೀರಿನ ಬವಣೆ ತಪ್ಪಿಸುತ್ತಿತ್ತು. ಆದರೆ, ಈ ಬಾರಿ ಕೆರೆ ಖಾಲಿಯಾಗಿರೋದು ಕುಡಿಯೋ ನೀರಿಗೂ ಸಮಸ್ಯೆಯಾಗುವ ಮುನ್ಸೂಚನೆ ಸಿಕ್ಕಿದೆ ಅಂತಾರೆ ಸ್ಥಳಿಯರಾದ ಮೂರ್ತಿ.
ಅಕ್ಕಪಕ್ಕ ಜಿಲ್ಲೆಗಳಿಗೂ ಜೀವನಾಡಿ ಮದಗದ ಕೆರೆ: ಈ ಕೆರೆ ತುಂಬಿದರೆ ಕೇವಲ ಚಿಕ್ಕಮಗಳೂರು, ಕಡೂರಿಗೆ ಮಾತ್ರ ಅನುಕೂಲವಲ್ಲ. ಇಲ್ಲಿ ಕೋಡಿ ಬಿದ್ದು ಹರಿಯೋ ನೀರು ಚಿತ್ರದುರ್ಗದ ಮಾರಿಕಣಿವೆ ಡ್ಯಾಂ ಸೇರಿ ಚಿತ್ರದುರ್ಗದ ಜೀವನಾಡಿಯೂ ಆಗಿದೆ. ಆದ್ರೆ, ಈಗ ಈ ಕೆರೆಗೆ ನೀರು ಇಲ್ಲದಿರೋದು ಈ ನೀರನ್ನೆ ನೆಚ್ಚಿಕೊಂಡಿದ್ದ ಲಕ್ಷಾಂತರ ಜನ, ಜಾನುವಾರುಗಳು ನೀರಿನ ಹಾಹಾಕಾರ ಎದುರಿಸಲಿದ್ದಾರೆ. 336 ಹೆಕ್ಟೇರ್‌ನ 2036 ಎಕರೆ ವಿಸ್ತೀರ್ಣದ ಈ ಕೆರೆ 87 ಅಡಿ ಆಳವಿದೆ. ಇಷ್ಟು ದೊಡ್ಡ ಕೆರೆಯಲ್ಲಿ ಇಂದು ಒಂದೇ ವರ್ಷಕ್ಕೆ ನೀರು ಸಂಪೂರ್ಣ ಖಾಲಿಯಾಗಿದೆ. ಇನ್ನ 15-20 ದಿನದಲ್ಲಿ ಮಳೆ ಬರದಿದ್ರೆ ಸುತ್ತಮುತ್ತಲಿನ ಜನ-ಜಾನುವಾರುಗಳು, ಹೊಲಗದ್ದೆ-ತೋಟಗಳು ನೀರಿಲ್ಲದೆ ಹಾಹಾಕಾರ ಅನುಭವಿಸೋದು ಗ್ಯಾರಂಟಿ.
ಸಮಾಜ ಶೋಷಿತ ವರ್ಗದ ಬಗ್ಗೆ ವೈದ್ಯರಿಗೆ ಅಂತಃಕರಣ ಹೆಚ್ಚಾಗಬೇಕು: ವೈದ್ಯರ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ
ಸ್ಥಳೀಯರಾದ ರಾಮಣ್ಣ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತಾಡಿ ಕಳೆದ 6 ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಇಂತಹ ಪರಿಸ್ಥಿತಿ ಮತ್ತೋಮ್ಮೆ ನಿರ್ಮಾಣವಾಗಿದೆ. ದೇವರು ಕೃಪೆ ಇದ್ರೆ ಮಾತ್ರ ಕೆರೆಗೆ ನೀರು ಬರಲು ಸಾಧ್ಯವೆಂದು ತಿಳಿಸಿದ್ದಾರೆ.ಒಟ್ಟಾರೆ, ಈ ಕೆರೆ ಇತಿಹಾಸದಲ್ಲಿ ಈ ರೀತಿ ಬತ್ತಿಲ್ಲ. 2016-17ರಲ್ಲಿ ಬರ ಬಂದಿದ್ದರೂ ಕೂಡ ಈ ಮಟ್ಟಕ್ಕೆ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ. ಆದ್ರೆ, ಈ ಬಾರಿ ಮುಗಿಲೆತ್ತರದ ಘಟ್ಟ ಪ್ರದೇಶ ಮುಳ್ಳಯ್ಯನಗಿರಿ, ದತ್ತಪೀಠ ಭಾಗದಲ್ಲಿ ಮಳೆ ಇಲ್ಲದಿರೋದ್ರಿಂದ ಕೆರೆಗೆ ಒಂದು ಹನಿಯೂ ನೀರು ಬಂದಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಹಳ್ಳಿಗರಿಗೆ ಈ ನೀರೆ ಮೂಲ. ಕೆರೆಗೆ ಗಿರಿ ಮಳೆಯೇ ಮೂಲ. ಗಿರಿಯಲ್ಲಿ ಮಳೆ ಇಲ್ಲ. ಕೆರೆಯಲ್ಲಿ ನೀರಿಲ್ಲದಿರೋದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ