ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಇಲ್ಲ: ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ

By Kannadaprabha NewsFirst Published Nov 12, 2023, 12:30 AM IST
Highlights

‘ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ಪಶು ಆಹಾರ ಘಟಕಗಳ ಮೂಲಕ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 2,250 ರು. ಬೆಲೆಯಂತೆ 1 ಲಕ್ಷ ಟನ್‌ ಮೆಕ್ಕೆ ಜೋಳ ಖರೀದಿಗೆ ತೀರ್ಮಾನ ಮಾಡಿದೆ.

ಬೆಂಗಳೂರು (ನ.12): ‘ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ಪಶು ಆಹಾರ ಘಟಕಗಳ ಮೂಲಕ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 2,250 ರು. ಬೆಲೆಯಂತೆ 1 ಲಕ್ಷ ಟನ್‌ ಮೆಕ್ಕೆ ಜೋಳ ಖರೀದಿಗೆ ತೀರ್ಮಾನ ಮಾಡಿದೆ. ನ.13ರಂದು ಈ ಬಗ್ಗೆ ನೋಂದಣಿ ಶುರುವಾಗಲಿದ್ದು, ರೈತರು ನೇರವಾಗಿ ಪಶು ಆಹಾರ ಘಟಕಗಳಿಗೆ ಮೆಕ್ಕೆ ಜೋಳ ಪೂರೈಸಿ ನೇರ ನಗದು ಪಾವತಿ (ಡಿಬಿಟಿ) ಮೂಲಕ ಹಣ ಪಡೆಯಬಹುದು’ ಎಂದು ಪಶು ಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್‌ ತಿಳಿಸಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರಿಂದ ಮೆಕ್ಕೆ ಜೋಳ ನೇರವಾಗಿ ಖರೀದಿಸಲು ಕೆಟಿಟಿಪಿ ಕಾಯ್ದೆಯಡಿ 4ಜಿ ವಿನಾಯಿತಿ ಪಡೆಯಲಾಗಿದೆ. ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳಕ್ಕೆ ಪ್ರಸ್ತುತ 2,090 ರು. ಬೆಲೆ ಇದ್ದು, 160 ರು. ಬೆಂಬಲ ಬೆಲೆ ಸೇರಿಸಿ 2,250 ರು. ನಿಗದಿ ಮಾಡಲಾಗಿದೆ. ಇದರಲ್ಲಿ ಮೂಲ ಬೆಲೆ, ಸಾಗಾಣಿಕೆ ವೆಚ್ಚ, ಚೀಲದ ಬೆಲೆ ಮತ್ತು ಉತ್ತೇಜನ ದರ ಎಲ್ಲವೂ ಒಳಗೊಂಡಿದೆ ಎಂದು ಮಾಹಿತಿ ನೀಡಿದರು. 

ಬಿಜೆಪಿಯಲ್ಲಿ ಬಿಎಸ್‌ವೈ, ಶೆಟ್ಟರ್‌, ಈಗ ಡಿವಿಎಸ್‌ ಕಡೆಗಣನೆ: ರೇಣುಕಾಚಾರ್ಯ ಕಿಡಿ

ಆಸಕ್ತ ರೈತರು ನ.13ರಿಂದ ರಾಜ್ಯ ಸರ್ಕಾರದ ಕೃಷಿ ಇಲಾಖೆಯಡಿ ಬರುವ "FRUITS" (Farmer Registration and Unified beneficiary InformaTion System)  ತಂತ್ರಾಂಶಕ್ಕೆ ಭೇಟಿ ನೀಡಿ ಹಾಲಿನ ಸಂಘದ ವಿವರ ನೀಡಿ ನೋಂದಣಿ ಸ್ವೀಕೃತ ಪತ್ರ ಪಡೆಯಬೇಕು. “FRUITS” ನೊಂದಣಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾದರೆ ಹತ್ತಿರದ ರೈತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ನೊಂದಣಿ ನಂತರ ನೋಂದಣಿ ದೃಢೀಕರಣದೊಂದಿಗೆ ರೈತರು ಬೆಳೆದಿರುವ ಮೆಕ್ಕೆಜೋಳದ ಮಾದರಿಯನ್ನು ಹಾಲು ಒಕ್ಕೂಟಗಳ ಮೂಲಕ ಪಶು ಆಹಾರ ಘಟಕಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

20 ದಿನಗಳಲ್ಲಿ ಹಣ ಪಾವತಿ: ರೈತರು ಸರಬರಾಜು ಮಾಡಿ ಸ್ವೀಕೃತವಾದ ಪ್ರಮಾಣಕ್ಕೆ ಅನುಗುಣವಾಗಿ ನಿಗದಿಪಡಿಸಿರುವ ದರದಂತೆ ಹಣವನ್ನು ಡಿ.ಬಿ.ಟಿ. ಮೂಲಕ 20 ದಿನಗಳ ಒಳಗಾಗಿ ನೇರವಾಗಿ ಬ್ಯಾಂಕ್‌ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು. ಹೀಗಾಗಿ  ರೈತರ ವಿವರವನ್ನೊಳಗೊಂಡ  ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್‌ ಉಳಿತಾಯ ಖಾತೆ ಸಂಖ್ಯೆ ಸೀಡಿಂಗ್ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದರು.

ಇವಿ ನೀತಿ ಕ್ಲೀನ್‌ ಮೊಬಿಲಿಟಿ ನೀತಿಯಾಗಿ ಮಾರ್ಪಾಟು: ಸಚಿವ ಎಂ.ಬಿ.ಪಾಟೀಲ್‌

ಸದ್ಯಕ್ಕೆ ಹಾಲಿನ ದರ ಏರಿಕೆ ಇಲ್ಲ: ರಾಜ್ಯದಲ್ಲಿ ಸದ್ಯಕ್ಕೆ ಹಾಲಿನ ದರ ಏರಿಕೆ ಮಾಡುವ ಯಾವುದೇ  ಚಿಂತನೆ ಸರ್ಕಾರದ ಮುಂದೆ ಇಲ್ಲ. ಇಂದಿನ ಸಭೆಯಲ್ಲಿ ಹಾಲು ಒಕ್ಕೂಟದವರು ನಮಗೆ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ನಮಗೆ ರೈತರು, ಗ್ರಾಹಕರಿಬ್ಬರ ಹಿತವೂ ಮುಖ್ಯ. ಹಾಗಾಗಿ ಹಾಲಿನ ದರ ಏರಿಕೆ ತೀರ್ಮಾನ ಮಾಡಿಲ್ಲ ಎಂದು ಹೇಳಿದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಆದರೂ ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಕೆ ಮಾಡುವ  ಚಿಂತನೆ ಇಲ್ಲ ಎಂದರು. ಮುಂದಿನ ಲೋಕಸಭಾ ಚುನಾವಣೆಗೆ ನಾನು ಅಭ್ಯರ್ಥಿ ಅಲ್ಲ. ಸುಖಾಸುಮ್ಮನೆ ಸುದ್ದಿಗಳನ್ನು ಹುಟ್ಟುಹಾಕುವುದು ಬೇಡ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೆಎಂಎಫ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಭೀಮಾ ನಾಯಕ್ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!