ವಿದ್ಯುತ್ ಚಾಲಿತ ವಾಹನ ಸೇರಿ ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸಲು ಕರ್ನಾಟಕ ಎಲೆಕ್ಟ್ರಿಕ್ ವಾಹನ ಮತ್ತು ಇಂಧನ ಸಂಗ್ರಹ ನೀತಿ 2017ಕ್ಕೆ ‘ಕ್ಲೀನ್-ಮೊಬಿಲಿಟಿ ನೀತಿ’ ಎಂದು ಬದಲಾವಣೆ ತರಲಾಗುತ್ತಿದೆ. ಈ ಸಂಬಂಧ ಕರಡು ನೀತಿ ಬಹುತೇಕ ಸಿದ್ಧವಾಗಿದ್ದು, ಶೀಘ್ರ ಅಂತಿಮಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು (ನ.11): ವಿದ್ಯುತ್ ಚಾಲಿತ ವಾಹನ ಸೇರಿ ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸಲು ಕರ್ನಾಟಕ ಎಲೆಕ್ಟ್ರಿಕ್ ವಾಹನ ಮತ್ತು ಇಂಧನ ಸಂಗ್ರಹ ನೀತಿ 2017ಕ್ಕೆ ‘ಕ್ಲೀನ್-ಮೊಬಿಲಿಟಿ ನೀತಿ’ ಎಂದು ಬದಲಾವಣೆ ತರಲಾಗುತ್ತಿದೆ. ಈ ಸಂಬಂಧ ಕರಡು ನೀತಿ ಬಹುತೇಕ ಸಿದ್ಧವಾಗಿದ್ದು, ಶೀಘ್ರ ಅಂತಿಮಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಇ-ಮೊಬಿಲಿಟಿ ಕ್ಷೇತ್ರದಲ್ಲಿ ನಂ.1 ಆಗಿಸುವ ಗುರಿಯೊಂದಿಗೆ ರೂಪಿಸಿರುವ ನೀತಿಯ ಕರಡಿನ ಬಗ್ಗೆ ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಉದ್ಯಮ ಪ್ರತಿನಿಧಿಗಳೊಂದಿಗಿನ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ವಿದ್ಯುತ್ ಚಾಲಿತ ವಾಹನಗಳು ಮತ್ತು ಬಿಡಿಭಾಗಗಳ ತಯಾರಿಕೆಗೆ ಸೂಕ್ತ ಸ್ಥಳಗಳಲ್ಲಿ ಔದ್ಯಮಿಕ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಇದರಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಗೌರಿಬಿದನೂರು ಮತ್ತು ಚಿಕ್ಕಮಲ್ಲಿಗೆವಾಡ ಎರಡನ್ನೂ ತಕ್ಕ ತಾಣಗಳೆಂದು ಗುರುತಿಸಲಾಗಿದೆ. ಕರಡು ನೀತಿಯು ಕೇವಲ ವಿದ್ಯುತ್ ಚಾಲಿತ ವಾಹನಗಳಲ್ಲದೆ ಇದರಲ್ಲಿನ ಕೋಶಗಳಲ್ಲಿರುವ ಬ್ಯಾಟರಿ ಪುನರ್ ನವೀಕರಣ, ಆನೋಡ್, ಕ್ಯಾಥೋಡ್, ಸಪರೇಟರ್ಸ್, ಕಾರ್ಬೊನೇಟ್, ಸಾಲ್ವೆಂಟ್, ಶಕ್ತಿಶಾಲಿ ಹೈಬ್ರಿಡ್ ವಾಹನಗಳು, ಪರೀಕ್ಷಾರ್ಥ ಮೂಲಸೌಕರ್ಯಗಳನ್ನೂ ಒಳಗೊಂಡಿದೆ ಎಂದು ಅವರು ವಿವರಿಸಿದರು. ಜಾಗತಿಕ ಬೆಳವಣಿಗೆಗೆ ಅನುಗುಣವಾಗಿ ಇವಿ ನೀತಿಯನ್ನು ಇ-ಮೊಬಿಲಿಟಿ ನೀತಿಯಾಗಿ ಬದಲಾವಣೆಗೆ ತೀರ್ಮಾನಿಸಲಾಗಿತ್ತು.
ಶ್ರೀ ದೇವೀರಮ್ಮ ಜಾತ್ರಾ ಮಹೋತ್ಸವ: ಇಂದು ಮಧ್ಯರಾತ್ರಿಯಿಂದ ಬೆಟ್ಟವನ್ನೇರಿ ಹರಕೆ ತೀರಿಸುವ ಭಕ್ತರು
ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಇನ್ನಷ್ಟು ಮುಂದಾಲೋಚನೆಯೊಂದಿಗೆ ಇದನ್ನು ಕ್ಲೀನ್ ಮೊಬಿಲಿಟಿ ನೀತಿ ಎಂದು ಹೆಸರಿಡಲು ಸಲಹೆ ನೀಡಿದ್ದಾರೆ. ಇದನ್ನು ಸರ್ಕಾರ ಪರಿಗಣಿಸಿ ಶೀಘ್ರ ಕ್ಲೀನ್ ಮೊಬಿಲಿಟಿ ಪಾಲಿಸಿಯ ಕರಡನ್ನು ಅಂತಿಮಗೊಳಿಸಲಾಗುವುದು ಎಂದರು. ಸಭೆಯಲ್ಲಿ ಸನ್ ಮೊಬಿಲಿಟಿ ಅಧ್ಯಕ್ಷ ಸಂದೀಪ ಮೈನಿ, ಟೊಯೋಟಾ ಉಪ ವ್ಯವಸ್ಥಾಪಕ ನಿರ್ದೇಶಕ ಪರಶುರಾಮನ್, ಕಾಂಟಿನೆಂಟಲ್ ಅಧ್ಯಕ್ಷ ಪ್ರಶಾಂತ್ ದೊರೆಸ್ವಾಮಿ, ಎಕ್ಸೆಲ್ ಪಾರ್ಟ್ನರ್ಸ್ ಎಂಡಿ ಪ್ರಶಾಂತ್ ಪ್ರಕಾಶ್ ಸೇರಿದಂತೆ 30ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಗಳಲ್ಲಿ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಉಮಾಶಂಕರ್ ಉಪಸ್ಥಿತರಿದ್ದರು.