
ಹಾವೇರಿ (ಜ.17): ಹಾನಗಲ್ಲನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೂ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ನರಸೀಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರದಲ್ಲಿ ಯಾರಿಗೂ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ. ಕಾನೂನಿನ ಪ್ರಕಾರ ಕ್ರಮ ಜರುಗಿಸುವ ಕೆಲಸ ಮಾಡುತ್ತೇವೆ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ.
ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಘಟನೆ ನಡೆದು ವಾರವಾದರೂ ಸರ್ಕಾರದ ಪರವಾಗಿ ಯಾರೂ ಸಾಂತ್ವನ ಹೇಳಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂತ್ರಸ್ತೆಯ ಕುಟುಂಬದವರು ಈಗ ತಾನೇ ಅರ್ಜಿ ಕೊಟ್ಟಿದ್ದಾರೆ. ಅದನ್ನು ಪರಿಗಣಿಸಲಾಗುವುದು. ಈಗಾಗಲೇ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರು ಸಂತ್ರಸ್ತೆಯನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಸಾಂತ್ವನ ಹೇಳುವುದು ಒಂದು ಭಾಗವಾದರೆ, ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳುವುದು ಮತ್ತೊಂದು ಭಾಗ ಎಂದು ಹೇಳಿದರು.
ಗ್ಯಾರಂಟಿ ಟೀಕಿಸಿದ್ದ ಪ್ರಧಾನಿ ಮೋದಿಯಿಂದ್ಲೇ ಈಗ ಗ್ಯಾರಂಟಿ ಪ್ರಚಾರ: ಡಿಕೆಶಿ ವ್ಯಂಗ್ಯ
ನೈತಿಕ ಪೊಲೀಸ್‌ಗಿರಿ ಬಗ್ಗೆ ಈಗ ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾತನಾಡಿದರೆ ಮಾತ್ರ ಕ್ರಮ, ಇಲ್ಲದಿದ್ದರೆ ಇಲ್ಲವೇ?. ಮಾತನಾಡದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಪ್ರಕರಣವನ್ನು ಎಸ್ಐಟಿಗೆ ವಹಿಸಲು ಬಿಜೆಪಿ ಆಗ್ರಹ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಸ್ಐಟಿಯಲ್ಲಿ ಇರುವವರು ಕೂಡ ಪೊಲೀಸರೇ, ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿ ಬಂದ ನಂತರ ತೀರ್ಮಾನಿಸಲಾಗುವುದು ಎಂದರು.
ಮತ್ತಿಬ್ಬರ ಬಂಧನ: ಹಾನಗಲ್ಲನಲ್ಲಿ ಜ.8ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ಈ ಪ್ರಕರಣದಲ್ಲಿ ಈವರೆಗೆ ಒಟ್ಟು 7 ಆರೋಪಿಗಳ ಬಂಧನವಾಗಿದೆ. ಅಕ್ಕಿಆಲೂರಿನ ಸಂತೆ ವ್ಯಾಪಾರಿ ಸಾದಿಕ್ ಬಾಬುಸಾಬ್ ಅಗಸಿಮನಿ (29) ಮತ್ತು ಹೋಟೆಲ್ ಕಾರ್ಮಿಕ ಶೋಯೆಬ್ ತಂದೆ ನಿಯಾಜ್ ಅಹ್ಮದ್ ಮುಲ್ಲಾ (19) ಬಂಧಿತ ಆರೋಪಿಗಳು.
ಕಾಂಗ್ರೆಸ್ ಗ್ಯಾರಂಟಿಗಳ ಲಾಭ ಪಡೆಯೋರಲ್ಲಿ ಬಿಜೆಪಿಗರೇ ಮೊದಲು: ಸಚಿವ ಮಧು ಬಂಗಾರಪ್ಪ
ಇದಕ್ಕೂ ಮೊದಲು ಅಕ್ಕಿಆಲೂರಿನ ಇಮ್ರಾನ್ ಬಶೀರ ಅಹಮದ್ ಜೇಕಿನಕಟ್ಟಿ (23), ರೇಹಾನ್ ಮಹಮ್ಮದ್ ಹುಸೇನ್ ವಾಲೀಕಾರ ಅಕ್ಕಿಆಲೂರ (19), ಅಫ್ತಾಬ್ ಚಂದನಕಟ್ಟಿ, ಮದರಸಾಬ್ ಮಂಡಕ್ಕಿ ಹಾಗೂ ಅಬ್ದುಲ್ ಖಾದರ್ ಜಾಫರಸಾಬ್ ಹಂಚಿನಮನಿ ಎಂಬುವರನ್ನು ಬಂಧಿಸಲಾಗಿತ್ತು. ಇನ್ನೊಬ್ಬ ಆರೋಪಿ ಮಹಮದ್ ಸೈಫ್ ಸಾವಿಕೇರಿ ಎಂಬಾತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಬಂಧಿಸಲಾಗುವುದು ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ