ಗಂಗಾಮತ, ಅಂಬಿಗ, ಕೋಲಿ, ಕಬ್ಬಲಿಗ ಸೇರಿದಂತೆ ೩೯ ಉಪ ಜಾತಿಗಳು ಪರಿಶಿಷ್ಟ ವರ್ಗಕ್ಕೆ ಸೇರಲು ಸಂಪೂರ್ಣ ಅರ್ಹತೆ ಹೊಂದಿದ್ದು, ಈ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಸ್ವತಃ ನಾನೇ ಎರಡು ಸಲ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇನೆ.
ಹಾವೇರಿ (ಜ.17): ಗಂಗಾಮತ, ಅಂಬಿಗ, ಕೋಲಿ, ಕಬ್ಬಲಿಗ ಸೇರಿದಂತೆ ೩೯ ಉಪ ಜಾತಿಗಳು ಪರಿಶಿಷ್ಟ ವರ್ಗಕ್ಕೆ ಸೇರಲು ಸಂಪೂರ್ಣ ಅರ್ಹತೆ ಹೊಂದಿದ್ದು, ಈ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಸ್ವತಃ ನಾನೇ ಎರಡು ಸಲ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇನೆ. ಕೇಂದ್ರ ಸರ್ಕಾರ ಈ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕೆಲ ಸ್ಪಷ್ಟೀಕರಣ ಕೋರಿ ರಾಜ್ಯಕ್ಕೆ ಹಿಂದಿರುಗಿಸಿದ್ದು, ಶೀಘ್ರವೇ ಕೇಂದ್ರಕ್ಕೆ ಸ್ಪಷ್ಟೀಕರಣ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ೮೫೧ನೇ ಜಯಂತಿ, ಹಾಗೂ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗಾಮತಸ್ಥ, ಅಂಬಿಗ ಸೇರಿದಂತೆ ಉಪ ಜಾತಿಗಳು ಹಿಂದುಳಿದ ವರ್ಗಕ್ಕೆ ಸೇರಿದ್ದು, ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂಬ ಹೋರಾಟ ೧೯೯೬ರಿಂದಲೇ ಆರಂಭವಾಗಿದೆ. ಬೀದರಿನ ಶಾಸಕರಾಗಿದ್ದ ದಿ.ಜಿ.ನಾರಾಯಣರಾವ್ ನನಗೆ ಮನವಿ ಸಲ್ಲಿಸಿದ್ದರು. ಅಂದೇ ಈ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರದಿಂದ ಕೆಲ ಸ್ಪಷ್ಟೀಕರಣ ಕೋರಿ ರಾಜ್ಯ ಸರ್ಕಾರಕ್ಕೆ ಬಂದಿರುವುದಾಗಿ ತಿಳಿದಿದೆ. ಶೀಘ್ರವೇ ಪರಿಶಿಷ್ಟ ವರ್ಗದ ಇಲಾಖಾ ಅಧಿಕಾರಿಗಳ ಸಭೆ ನಡೆಸಿ, ಸ್ಪಷ್ಟೀಕರಣ ಕಳುಹಿಸಲಾಗುವುದು. ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಈ ವರ್ಗವನ್ನು ಎಸ್ಟಿಗೆ ಸೇರಿಸಲು ಪ್ರಯತ್ನಪಡಲಿ ಎಂದು ಹೇಳಿದರು.
7ನೇ ವೇತನ ಆಯೋಗ ವರದಿ ಬಳಿಕ ನೌಕರರ ವೇತನ ಪರಿಷ್ಕರಣೆ ತೀರ್ಮಾನ: ಸಿದ್ದರಾಮಯ್ಯ
ಹಿಂದುಳಿದ ಸಮುದಾಯಕ್ಕೆ ಸೇರಿರುವ ಅಂಬಿಗರ ಸಮಾಜದ ಹಲವು ಸಮಸ್ಯೆಗಳನ್ನು ಆಲಿಸಿದ್ದೇನೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದೇನೆ. ಈ ಸಮುದಾಯದ ಅಭಿವೃದ್ಧಿಗೆ ಅಂಬಿಗರ ಚೌಡಯ್ಯ ನಿಗಮವನ್ನು ಸ್ಥಾಪಿಸಿದ್ದು ನಾನೇ. ಈ ಸಮಾಜಕ್ಕೆ ಆರ್ಥಿಕ ಶಕ್ತಿ ಬರಬೇಕು. ಯಾವ ಸಮಾಜಕ್ಕೆ ಆರ್ಥಿಕ, ಸಾಮಾಜಿಕ ಶಕ್ತಿ ಬರುವುದಿಲ್ಲವೋ ಆ ಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲ. ಸಮ ಸಮಾಜ ಕನಸು ನನಸಾಗಲು ಆರ್ಥಿಕ ಸಮಾನತೆ ಬರಬೇಕು. ಈ ಸಮಾರಂಭದಲ್ಲಿ ಹಲವು ಬೇಡಿಕೆಗಳನ್ನು ಸಮಾಜ ನನ್ನ ಮುಂದಿರಿಸಿದೆ. ಎಲ್ಲವೂ ಸಾಧ್ಯವಾಗದಿದ್ದರೂ ಹಲವನ್ನು ನಾನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ಹಂಚಿಕೆ ಎಂದು ಅರ್ಥ. ದುಡಿದು ಹಂಚಿ ತಿನ್ನುವುದರಲ್ಲಿ ಇರುವ ಸಂತೋಷ ಬೇರೆಯದರಲ್ಲಿ ಇರುವುದಿಲ್ಲ. ಇದು ಚಲನಶೀಲ ಸಮಾಜದ ಲಕ್ಷಣವಾಗಿದೆ. ಅಕ್ಷರ ಸಂಸ್ಕೃತಿಯಿಂದ ವಂಚಿತ ಸಮುದಾಯ ತಲತಲಾಂತರಗಳಿಂದ ಶೋಷಣೆಗೆ ಒಳಗಾಗಿದೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ ಎಂದರು.
ಬಿ.ಎಲ್.ಸಂತೋಷ್ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಪ್ರೇರಣೆ: ಆರ್.ಅಶೋಕ್
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು. ಅಂಬಿಗಡರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ, ಸಚಿವ ಮಂಕಾಳು ವೈದ್ಯ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ, ಎನ್. ರವಿಕುಮಾರ, ಬಿ.ಪಿ. ಹರೀಶ್, ವಿವಿಧ ಮಠಾಧೀಶರು ಉಪಸ್ಥಿತರಿದ್ದರು.