ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಧ್ರಪ್ರದೇಶದ ಹೈಸ್ಕೂಲ್‌ಗಳಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಮಾದರಿಯಲ್ಲಿ ಪರೀಕ್ಷೆ ನಡೆಸುವಂತೆ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದ್ದು, ಇದು ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಕುತ್ತಾಗಿ ಪರಿಣಮಿಸಿದೆ.
ಕೆ.ಎಂ.ಮಂಜುನಾಥ್
ಬಳ್ಳಾರಿ (ನ.27): ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಧ್ರಪ್ರದೇಶದ ಹೈಸ್ಕೂಲ್‌ಗಳಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಮಾದರಿಯಲ್ಲಿ ಪರೀಕ್ಷೆ ನಡೆಸುವಂತೆ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದ್ದು, ಇದು ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಕುತ್ತಾಗಿ ಪರಿಣಮಿಸಿದೆ. ಕನ್ನಡ ರಾಜ್ಯೋತ್ಸವ ಆಚರಣೆ ತಿಂಗಳಾದ ನವೆಂಬರ್‌ನಲ್ಲಿಯೇ ಈ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗುತ್ತಿದ್ದು, ಸರ್ಕಾರದ ಈ ದಿಢೀರ್ ಆದೇಶದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಈ ಆದೇಶದಿಂದಾಗಿ 9ನೇ ತರಗತಿಯ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬೇಕಿದೆ. ಪ್ರಥಮ ಭಾಷೆಯಾಗಿ ತೆಲುಗು, ತೃತೀಯ ಭಾಷೆಯಾಗಿ ಹಿಂದಿ ಕಲಿಕೆಗಷ್ಟೇ ಅವಕಾಶವಿದ್ದು, ಕನ್ನಡ ಕಲಿಕೆಗೆ ಅವಕಾಶವೇ ಇಲ್ಲದಂತಾಗಿದೆ.
undefined
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ 11, ಅನಂತಪುರ ಜಿಲ್ಲೆಯಲ್ಲಿ 3 ಕನ್ನಡ ಮಾಧ್ಯಮದ ಪ್ರೌಢಶಾಲೆಗಳಿವೆ. ಎರಡೂ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಆದೇಶದಿಂದಾಗಿ ಈಗ 9ನೇ ತರಗತಿಯಲ್ಲಿ ಓದುತ್ತಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಕನ್ನಡ ಮಾಧ್ಯಮ ಬಿಟ್ಟು ಇದ್ದಕ್ಕಿದ್ದಂತೆ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾಗಬೇಕು. ಪ್ರಥಮ ಭಾಷೆಯಾಗಿ ತೆಲುಗು, ತೃತೀಯ ಭಾಷೆಯಾಗಿ ಹಿಂದಿ ಕಲಿಯಬೇಕು. ಇದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆ: ಸಚಿವ ಸಂತೋಷ್ ಲಾಡ್
ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಈ ಆದೇಶ ಹೊರಬಿದ್ದಿದ್ದು, ಕನ್ನಡಪರ ಸಂಘಟನೆಗಳು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಬಳಿಕ, ಆಂಧ್ರದ ಸಿಎಂ ಜಗನ್‌ಮೋಹನ್ ರೆಡ್ಡಿಯವರನ್ನು ಭೇಟಿ ಮಾಡಿ, ಆದೇಶ ಹಿಂಪಡೆಯಲು ಮನವಿ ಮಾಡಿದ್ದವು. ಇದೇ ವೇಳೆ, ತೆಲುಗು ಸಂಘಟನೆಗಳಿಂದಲೂ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಈ ಆದೇಶ ಜಾರಿಯಾಗುವಲ್ಲಿ ವಿಳಂಬವಾಗುತ್ತಾ ಬಂತು. ಈಗ ಆದೇಶ ಜಾರಿಗೆ ಕಟ್ಟುನಿಟ್ಟಿನ ಸೂಚನೆ ಹೊರಬಿದ್ದಿದೆ.
ಈ ಮಧ್ಯೆ, ಸರ್ಕಾರದ ಆದೇಶ ವಿರೋಧಿಸಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಲಗುಂದಿ ಕನ್ನಡ ಮಾಧ್ಯಮ ಪ್ರೌಢಶಾಲೆ ಎದುರು ಕಳೆದ ವಾರ ಪ್ರತಿಭಟನೆ ನಡೆಸಿದರು. ಸರ್ಕಾರದ ಆದೇಶ ಅವೈಜ್ಞಾನಿಕವಾಗಿದೆ. ಇಂಗ್ಲಿಷ್ ಕಲಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಮಾತ್ರಭಾಷೆಯನ್ನು ಕನಿಷ್ಟ ಒಂದು ವಿಷಯವನ್ನಾಗಿಯಾದರೂ ಕಲಿಕೆಗೆ ಆಸ್ಪದ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಜೊತೆಗೆ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಪರೀಕ್ಷೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.
ಎಲ್ಲರೂ ಇಂಗ್ಲಿಷ್ ಕಲಿಯಬೇಕು ಎಂಬ ಉದ್ದೇಶದಿಂದ ಆಂಧ್ರ ಸರ್ಕಾರ ಪ್ರೌಢಶಾಲೆ ಹಂತದಲ್ಲಿ ಸಿಬಿಎಸ್‌ಇ ಮಾದರಿಯನ್ನು ಜಾರಿಗೊಳಿಸಿದೆ. ಆದರೆ, ಒಂದು ವಿಷಯವಾಗಿ ಕನ್ನಡ ಕಲಿಕೆಗೆ ಆಸ್ಪದ ನೀಡದಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
- ಎಂ.ಗಿರಿಜಾಪತಿ, ಮಾಜಿ ಅಧ್ಯಕ್ಷ, ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘ
ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್
ಕನ್ನಡವನ್ನು ಒಂದು ಭಾಷೆಯಾಗಿ ಕಲಿಕೆಗೆ ಅವಕಾಶ ನೀಡುವಂತೆ ಕೋರಿ ಕಾರ್ಮಿಕ ಸಚಿವ ಗುಮ್ಮನೂರು ಜಯರಾಮ್ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕನ್ನಡಿಗರು ಆತಂಕಗೊಂಡಿದ್ದಾರೆ.
- ಎಚ್. ಶಿವಶಂಕರ್, ಮುಖಂಡ, ಕನ್ನಡ ಯುವಕ ಸಂಘ, ಹೊಳಲಗುಂದಿ