
ಹುಬ್ಬಳ್ಳಿ (ಫೆ.07): ಕುಂಭಮೇಳದಲ್ಲಿ ಈಚೆಗೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಆಗಿರುವ ಸಾವಿನ ಬಗ್ಗೆ ಯಾವುದೇ ನಿಖರ ದಾಖಲೆ ಇಲ್ಲ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಡಿಜಿಟಲ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ, ಕೋವಿಡ್, ಕುಂಭಮೇಳದಲ್ಲಿನ ಸಾವು ಸೇರಿದಂತೆ ಕಳೆದ 11 ವರ್ಷಗಳ ಅವಧಿಯ ಘಟನೆಗಳ ಬಗ್ಗೆ ಎಲ್ಲಿಯೂ ನಿಖರ ಮಾಹಿತಿ ಇಲ್ಲ. ಎನ್‌ಡಿಎ ಅಂದರೆ "ನೋ ಡಾಟಾ ಅವೈಲೇಬಲ್" ಎಂದು ವ್ಯಂಗ್ಯವಾಡಿದರು. ವಿಶ್ವ ಗುರುವಿನಿಂದ ಏನೂ ಆಗುತ್ತಿಲ್ಲ, ಅವರ ಬದಲಾವಣೆ ಆಗಬೇಕು, ನಿತಿನ್ ಗಡ್ಕರಿ ಪ್ರಧಾನಿಯಾಗಬೇಕು, ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂಬುದರ ಬಗ್ಗೆ ಬಿಜೆಪಿಯಲ್ಲಿಯೇ ಚರ್ಚೆ ನಡೆಯುತ್ತಿದೆ. ಅಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಲು ಅವರಿಗೆ ಸ್ವಾಂತಂತ್ರ್ಯ ಇಲ್ಲ ಎಂದು ಲೇವಡಿ ಮಾಡಿದರು.
ಪ್ರಶ್ನಿಸಬಾರದೇ?: ಭಾರತವನ್ನು ಚೀನಾಗೆ ಹೋಲಿಕೆ ಮಾಡಲು ಆಗುವುದಿಲ್ಲ, 10 ವರ್ಷದಲ್ಲಿ ಚೀನಾ ಏನೆಲ್ಲಾ ಮಾಡಿದೆ. ಇಂದು ಡಾಲರ್ ಎದುರು ರುಪಾಯಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೇಶದ ಸಾಲ ಎಷ್ಟಾಗಿದೆ ಎಂದು ಪ್ರಶ್ನಿಸಬಾರದೇ? 70 ವರ್ಷದಲ್ಲಿ ಆಗಿರುವ ಸಾಲದ 3 ಪಟ್ಟು ಕೇವಲ 10 ವರ್ಷಗಳಲ್ಲಾಗಿದೆ ಎಂದು ಲಾಡ್ ಆರೋಪಿಸಿದರು. ಹಿಂದೆ ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ ಇಂದು ಹೊರ ಬಿದ್ದಿದೆ. ಇದಕ್ಕೆಲ್ಲ ಏನು ಕಾರಣ ಎಂಬುದರ ಕುರಿತು ಚರ್ಚಿಸಬಾರದೆ? ದೇಶವು ಅಷ್ಟೊಂದು ಶಕ್ತಿಶಾಲಿಯಾಗಿದ್ದರೆ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಏಕೆ ಕುಸಿದಿದೆ ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಲಿ. ಈ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಬಿಜೆಪಿಯವರು ದಿನ ಬೆಳಗಾದರೆ ಸಾಕು ಕೇವಲ ಧರ್ಮ, ಜಾತಿ ಬಗ್ಗೆ ಮಾತನಾಡುತ್ತಾರೆ. ಮೊದಲು ಇದನ್ನು ನಿಲ್ಲಿಸಲಿ ಎಂದರು.
ಜಾತಿ, ಧರ್ಮ, ಭಾಷೆ ಬಗ್ಗೆ ದ್ವೇಷದ ಮಾತಾಡಿದ್ರೆ 3 ವರ್ಷ ಜೈಲು ಶಿಕ್ಷೆ!
ವ್ಯವಸ್ಥೆ ದುರುಪಯೋಗಪಡಿಸಿ ಚುನಾವಣೆ ಗೆಲ್ಲುತ್ತಿದೆ ಬಿಜೆಪಿ: ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಆಡಳಿತದ ಪ್ರದರ್ಶನದಿಂದ ಗೆಲ್ಲುತ್ತಿಲ್ಲ. ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಗೆಲ್ಲುತ್ತಿದೆ. ಇಡಿ ಹಾಗೂ ಸಿಬಿಐ ಅಂತಹ ಸಂಸ್ಥೆಗಳನ್ನು ಬಳಸಿಕೊಂಡು ಕೆಲಸ ಸಾಧಿಸುತ್ತಿದೆ. ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಿ ಗೆಲ್ಲುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಚುನಾವಣೆ ಬಹಳ ದಿನಗಳ ಕಾಲ ನಡೆಯುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿಗಿಂತ ನಾವು ಹೆಚ್ಚು ಸ್ಥಾನ ಪಡೆಯುವುದು ವಾಸ್ತವ. ಕಾಂಗ್ರೆಸ್ಸಿಗೆ 4-5 ಸ್ಥಾನ ಬರುತ್ತವೆ ಎಂದಿದ್ದೇನೆ. ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಹೇಳಿದ್ದು, ರಾಹುಲ್ ಗಾಂಧಿಯವರ ತತ್ವ ಸಿದ್ಧಾಂತವನ್ನು ಜನರಿಗೆ ಮುಟ್ಟಿಸಬೇಕಿದೆ. ರಾಹುಲ್ ಗಾಂಧಿ ಪಾದಯಾತ್ರೆಯಾದ ಬಳಿಕ ಬಿಜೆಪಿಯವರ ಚಾರ್ ಸೌ ಪಾರ್ 240ಕ್ಕೆ ಬಂದು ನಿಂತಿದ್ದಾರೆ. ರಾಹುಲ್ ಅವರ ಪರಿಣಾಮ ಏನಿದೆ ಎನ್ನುವುದಕ್ಕೆ ಇದು ಸಾಕ್ಷಿ. ಖಂಡಿತವಾಗಿ ಬರುವ ದಿನಗಳಲ್ಲಿ ಹೆಚ್ಚು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನದ್ದು ತುಷ್ಟೀಕರಣ, ನಮ್ಮದು ಸಂತುಷ್ಟೀಕರಣ: ಸಂಸತ್ತಲ್ಲಿ ಮೋದಿ ವಾಗ್ದಾಳಿ
ದೆಹಲಿ ಚುನಾವಣೆ ನಂತರ ಎಐಸಿಸಿ ಅಧ್ಯಕ್ಷ ಸ್ಥಾನ ಬದಲಾಗುತ್ತದೆ ಎಂಬ ಪ್ರಶ್ನೆಗೆ, ಅಂತಹ ಯಾವುದೇ ವಿಚಾರ ನನ್ನ ಗಮನಕ್ಕಿಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು ನಿತೀನ್ ಗಡ್ಕರಿ ಅವರನ್ನು ಮುಂಚೂಣಿಗೆ ತರುವಂತೆ ಹೇಳುತ್ತಿದ್ದಾರೆ. ನರೇಂದ್ರ ಮೋದಿಯಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎನ್ನುತ್ತಿದ್ದಾರೆ. ದೇಶಪ್ರೇಮಿ ಬಿಜೆಪಿಗರೇ ಈ ರೀತಿ ಹೇಳುತ್ತಿದ್ದಾರೆ. ಮೋದಿ ವಿಶ್ವಗುರು ಸ್ಥಾನದಿಂದ ಕುಸಿದು ಹೋಗಿದ್ದಾರೆ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಿಗೆ ₹ 50 ಸಾವಿರ ನೀಡುತ್ತಿರುವ ವಿಚಾರವಾಗಿ ಎಚ್.ಡಿ. ರೇವಣ್ಣರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಲಾಡ್, ಸರ್ಕಾರದ ತೆರಿಗೆ ಹಣದಿಂದಲೇ ಅವರಿಗೆ ಕೊಡಲಾಗುತ್ತಿದೆ. ರೇವಣ್ಣರು ಸೇರಿದಂತೆ ಜನಪ್ರತಿನಿಧಿಗಳಿಗೆ ತೆರಿಗೆ ಹಣದಿಂದ ನೀಡುತ್ತಿರುವ ರೀತಿಯಲ್ಲಿಯೇ ಸಮಿತಿ ಅಧ್ಯಕ್ಷರಿಗೂ ಕೊಡುತ್ತಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ