
ಬೆಂಗಳೂರು (ಏ.19): ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ತ್ವರಿತ ಕಾನೂನು ಸಂಶೋಧನೆ, ಸುಧಾರಿತ ನಿರ್ವಹಣೆ ಮೂಲಕ ಬಾಕಿಯಿರುವ ಪ್ರಕರಣಗಳ ಇತ್ಯರ್ಥದ ಸಾಧ್ಯತೆಯೂ ಇದೆ. ಜೊತೆಗೆ ಆಳವಾದ ಕಳವಳವೂ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಶನಿವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ‘ಕೃತಕ ಬುದ್ಧಿಮತ್ತೆ ಯುಗದಲ್ಲಿ ನ್ಯಾಯಾಂಗವನ್ನು ಮರು ರೂಪಿಸುವುದು’ ಎಂಬ ವಿಷಯದ ಕುರಿತು ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಆತಂಕ ಇದೆ. ಅಲ್ಗಾರಿದಮಿಕ್ ಪಕ್ಷಪಾತವು ಕಾನೂನಿನ ಮುಂದೆ ಸಮಾನತೆಯ ಖಾತರಿ ಹಾಳು ಮಾಡಬಹುದು. ಅಪಾರದರ್ಶಕ ವ್ಯವಸ್ಥೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯ ತಾರ್ಕಿಕ ನಿರ್ಧಾರಗಳ ಸಿದ್ಧಾಂತ ದುರ್ಬಲಗೊಳಿಸುವ ಆತಂಕ ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.
ನ್ಯಾಯಾಧೀಶರೂ ಸಜ್ಜಾಗಬೇಕು:
ನ್ಯಾಯಾಧೀಶರ ಅಧಿಕಾರವನ್ನು ಎಂದಿಗೂ ಅಲ್ಗಾರಿದಂ ಅಧಿಕಾರವು ಮರೆಮಾಡಬಾರದು. ಸಾಂವಿಧಾನಿಕ ನೈತಿಕತೆ ನೈಸರ್ಗಿಕ ಭಾವನೆಯಲ್ಲ, ಅದನ್ನು ಬೆಳೆಸಿಕೊಳ್ಳಬೇಕು. ಸಾಂವಿಧಾನಿಕ ಮೌಲ್ಯಗಳು ತಾಂತ್ರಿಕ ಅಳವಡಿಕೆಗೆ ಮಾರ್ಗದರ್ಶನ ನೀಡುತ್ತವೆಯೇ ಹೊರತು ಅದೇ ಪರ್ಯಾಯವಲ್ಲ ಎಂಬುದನ್ನು ಮನಗಾಣಬೇಕು. ಭವಿಷ್ಯದ ನ್ಯಾಯಾಧೀಶರು ಕಾನೂನು ಕುಶಾಗ್ರಮತಿಗಳು ಮಾತ್ರವಲ್ಲದೆ, ತಾಂತ್ರಿಕ ವ್ಯವಸ್ಥೆಗಳ ಸ್ಪಷ್ಟ ತಿಳಿವಳಿಕೆಯೊಂದಿಗೆ ಸಜ್ಜಾಗಬೇಕಿರುವ ತೀವ್ರ ಅವಶ್ಯಕತೆ ಇದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯ ಸಾಕ್ಷಿ, ಪುರಾವೆಗಳು ನಮ್ಮ ಕಾನೂನು ವ್ಯವಸ್ಥೆಗೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಡೀಪ್‌ಫೇಕ್‌ಗಳು, ಸಂಶ್ಲೇಷಿತ ಡೇಟಾ, ಪುರಾವೆಗಳ ದೃಢೀಕರಣ ಸವಾಲಾಗಿ ಪರಿಣಮಿಸಿದೆ. ಡಿಜಿಟಲ್ ಯುಗದಲ್ಲಿ ವಿಶ್ವಾಸಾರ್ಹ ಪುರಾವೆಗಳು ಯಾವುವು ಎಂಬುದನ್ನು ನಿರ್ಧರಿಸಲು ನ್ಯಾಯಾಲಯಗಳ ಅಗತ್ಯ ಹೆಚ್ಚುತ್ತಿದೆ ಎಂದು ತಿಳಿಸಿದರು.
ನ್ಯಾಯ ನಿರ್ಣಯ ಪ್ರಕ್ರಿಯೆ ಹೊರಗಿಡಬೇಕು:
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಕೃತಕ ಬುದ್ಧಿಮತ್ತೆ ಸೇರಿ ಯಾವುದೇ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ನ್ಯಾಯಾಂಗ ವ್ಯವಸ್ಥೆಯೂ ಹೊರತಾಗಿರಲು ಸಾಧ್ಯವಿಲ್ಲ. ಆದರೆ, ಈ ತಾಂತ್ರಿಕತೆಗಳು ನ್ಯಾಯ ನಿರ್ಣಯ ಪ್ರಕ್ರಿಯೆಯನ್ನು ಯಾಂತ್ರಿಕವಾಗಿಸಲು ಆಸ್ಪದ ನೀಡಬಾರದು ಎಂದು ಸಲಹೆ ನೀಡಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ಅನುಕೂಲಗಳೊಂದಿಗೆ ಗಂಭೀರ ಸವಾಲುಗಳನ್ನು ಕೂಡ ಒಡ್ಡಿದೆ. ಎಐ ತಾಂತ್ರಿಕತೆಯಿಂದಾಗಿ ನಕಲಿ ಸೈಟೇಷನ್ ಗಳು (ಉಲ್ಲೇಖಿತ ಪ್ರಕರಣಗಳು) ಕೂಡ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ, ಎಐ ಮೂಲಕ ಲಭ್ಯವಾಗುವ ಮಾಹಿತಿ ದೃಢೀಕರಿಸಿಕೊಳ್ಳಬೇಕಾದ ಜವಾಬ್ದಾರಿ ಹೆಚ್ಚಿದೆ ಎಂದರು.
- ಫೋಟೋ-
ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮ್ಮೇಳನವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಉದ್ಘಾಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಅರವಿಂದ ಕುಮಾರ್, ವಿಭುಬಖ್ರು, ಸಂಘದ ಅಧ್ಯಕ್ಷೆ ನಾಗಶ್ರೀ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ