Karnataka Lokayukta 40th anniversary: ಕರ್ನಾಟಕ ಲೋಕಾಯುಕ್ತ ದೇಶಕ್ಕೆ ಮಾದರಿ; ಸಿಜೆಐ ಮೆಚ್ಚುಗೆ

Kannadaprabha News   | Kannada Prabha
Published : Apr 19, 2026, 08:40 AM IST
Karnataka Lokayukta is a Model for the Country says CJI rav

ಸಾರಾಂಶ

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಂಸ್ಥೆಯನ್ನು ದೇಶಕ್ಕೆ ಮಾದರಿ ಎಂದು ಶ್ಲಾಘಿಸಿದರು. ಭ್ರಷ್ಟಾಚಾರ ಮುಕ್ತ ಆಡಳಿತದಲ್ಲಿ ಸಂಸ್ಥೆಯ ಪಾತ್ರವನ್ನು ಕೊಂಡಾಡಿದರು.

ಬೆಂಗಳೂರು (ಏ.19) ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಜನಸಾಮಾನ್ಯರ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಬಣ್ಣಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಲೋಕಾಯುಕ್ತ ಸಂಸ್ಥೆಗೆ 40ರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲೋಕಾಯುಕ್ತ ಸಂಸ್ಥೆ ಕಳೆದ 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಾಗರಿಕರ ಆಶಾಕಿರಣವಾಗಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಲೋಕಾಯುಕ್ತದಂಥ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಈ ಸಂಸ್ಥೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ತಳಮಟ್ಟದ ಜನರಿಗೂ ನ್ಯಾಯ ಸಿಗುತ್ತಿದೆ ಎಂದು ಶ್ಲಾಘಿಸಿದರು.

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಲೋಕಾಯುಕ್ತ ಸಂಸ್ಥೆ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಮತ್ತಷ್ಟು ಬಲಗೊಳ್ಳಬೇಕಿದೆ. ತನಿಖಾ ಪ್ರಕ್ರಿಯೆಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವುದು ನ್ಯಾಯದಾನದ ದೃಷ್ಟಿಯಿಂದ ಅತ್ಯಗತ್ಯ ಎಂದು ಸಲಹೆ ನೀಡಿದರು.

ಸಮಾಜದ ಹೊಣೆಗಾರಿಕೆ:

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಲೋಕಾಯುಕ್ತ ಸಂಸ್ಥೆ ಅತ್ಯಂತ ಪ್ರಬಲವಾದ ಮತ್ತು ಸ್ವಾಯತ್ತವಾದ ಇತಿಹಾಸ ಹೊಂದಿದೆ. ಇದನ್ನು ಕಾಪಾಡಿಕೊಂಡು ಹೋಗುವುದು ಸರ್ಕಾರದ ಜವಾಬ್ದಾರಿ ಜೊತೆಗೆ ಸಮಾಜದ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದರು.

ಭ್ರಷ್ಟಾಚಾರ ಎಂಬ ಪಿಡುಗನ್ನು ಬೇರುಸಹಿತ ಕಿತ್ತೆಸೆಯಲು ಕೇವಲ ಶಿಕ್ಷೆಯೊಂದೇ ಸಾಲದು, ನೈತಿಕ ಮೌಲ್ಯಗಳ ಜಾಗೃತಿಯೂ ಆಗಬೇಕು. ಲೋಕಾಯುಕ್ತ ಸಂಸ್ಥೆ ಕೇವಲ ದಂಡಿಸುವ ಸಂಸ್ಥೆಯಾಗದೆ, ಜನರಲ್ಲಿ ಜಾಗೃತಿ ಮೂಡಿಸುವ ವೇದಿಕೆಯೂ ಆಗಲಿ ಸಂಸ್ಥೆಯ ಕಾರ್ಯಗಳಿಗೆ ಶುಭ ಹಾರೈಸಿದರು.

ಲೋಕಾಯಕ್ತ ಸಂಸ್ಥೆಯಿಂದ ಹೊರತರುವ ಮ್ಯಾಗಝಿನ್‌ ಬಿಡುಗಡೆಗೊಳಿಸಲಾಯಿತು. ಆನ್‌ಲೈನ್‌ ಮುಖಾಂತರ ಜನಪ್ರತಿನಿಧಿಗಳು ಆಸ್ತಿ ಘೋಷಣೆಗೆ ರೂಪಿಸಿರುವ ಹೊಸ ವ್ಯವಸ್ಥೆಗೆ ಇದೇ ವೇಳೆ ಚಾಲನೆ ನೀಡಲಾಯಿತು. ಕೆಲ ಮಾಜಿ ಲೋಕಾಯುಕ್ತರು, ಮಾಜಿ ಉಪ ಲೋಕಾಯುಕ್ತರನ್ನು ಸನ್ಮಾನಿಸಲಾಯಿತು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅರವಿಂದ ಕುಮಾರ್, ಉಪ ಲೋಕಾಯುಕ್ತರಾದ ಬಿ.ವೀರಪ್ಪ, ಕೆ.ಎನ್‌.ಫಣೀಂದ್ರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.

ಭ್ರಷ್ಟಾಚಾರ ಕೇವಲ ಹಣದ ವ್ಯವಹಾರವಲ್ಲ, ಸಾರ್ವಜನಿಕ ಕೆಲಸಗಳನ್ನು ವಿಳಂಬ ಮಾಡುವುದು ಕೂಡ ಒಂದು ರೀತಿಯ ಭ್ರಷ್ಟಾಚಾರವೇ ಆಗಿದೆ

- ಬಿ.ಎಸ್‌.ಪಾಟೀಲ್‌, ಲೋಕಾಯುಕ್ತ ನ್ಯಾಯಮೂರ್ತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: Karnataka Lokayukta 40th anniversary - ಕರ್ನಾಟಕ ಲೋಕಾಯುಕ್ತ ದೇಶಕ್ಕೆ ಮಾದರಿ; ಸಿಜೆಐ ಮೆಚ್ಚುಗೆ
ಗುತ್ತಿಗೆದಾರರ ಹೋರಾಟಕ್ಕೆ ಮಣಿದ ಸರ್ಕಾರ! ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ₹300 ಕೋಟಿ ಬಿಡುಗಡೆ