
- ಬೆಂಗಳೂರು (ಏ.19): ಗುತ್ತಿಗೆದಾರರ ಹೋರಾಟದ ನಂತರದಿಂದ ಬಾಕಿ ಬಿಲ್ ಪಾವತಿಗೆ ಮುಂದಾಗುತ್ತಿರುವ ರಾಜ್ಯ ಸರ್ಕಾರ, ಮಾರ್ಚ್‌ನಲ್ಲಿ 2 ಸಾವಿರ ಕೋಟಿ ರು. ಪಾವತಿ ನಂತರ ಇದೀಗ ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ 300 ಕೋಟಿ ರು. ಬಿಡುಗಡೆ ಮಾಡಿದೆ.
ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಕಳೆದ ತಿಂಗಳು ರಾಜ್ಯ ಗುತ್ತಿಗೆದಾರರ ಸಂಘದಿಂದ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಅದಾದ ನಂತರ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಂತಹಂತವಾಗಿ ಬಾಕಿ ಬಿಲ್ ಪಾವತಿಸುವುದಾಗಿ ತಿಳಿಸಿದ್ದರು. ಅದರಂತೆ ಮಾರ್ಚ್ ತಿಂಗಳಲ್ಲಿ 2 ಸಾವಿರ ಕೋಟಿ ರು. ಅನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ರಸ್ತೆ ಗುಂಡಿ ದುರಸ್ತಿ, ಕಟ್ಟಡಗಳು, ಸೇತುವೆ ದುರಸ್ತಿ ಸೇರಿ ಮತ್ತಿತರ ಸಣ್ಣ ಮತ್ತು ಮಧ್ಯಮ ಕಾಮಗಾರಿಗಳ ಬಾಕಿ ಬಿಲ್ ಪಾವತಿಗಾಗಿ ಲೋಕೋಪಯೋಗಿ ಇಲಾಖೆಯಿಂದ 300 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಅದರಲ್ಲಿ, ಅಂದಾಜು 4 ಸಾವಿರ ಗುತ್ತಿಗೆದಾರರಿಗೆ 10 ಲಕ್ಷ ರು.ಗಿಂತ ಕಡಿಮೆ ಮೊತ್ತದ ಬಾಕಿ ಬಿಲ್‌ಗಳನ್ನು ಪಾವತಿಸಲಾಗುತ್ತದೆ.
ಲೋಕೋಪಯೋಗಿ ಇಲಾಖೆ ಹಣ ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಈ ಹಿಂದೆ ನಡೆಸಿದ ಪ್ರತಿಭಟನೆಯಿಂದಾಗಿ ಬಾಕಿ ಬಿಲ್ ಪಾವತಿಗೆ ಸರ್ಕಾರ 2 ಸಾವಿರ ಕೋಟಿ ರು. ಬಿಡುಗಡೆ ಮಾಡಿತ್ತು. ಇದೀಗ 300 ಕೋಟಿ ರು. ಬಿಡುಗಡೆ ಮಾಡಿ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಲು ಸೂಚಿಸಲಾಗಿದೆ. ಸರ್ಕಾರ ಕೊಟ್ಟ ಮಾತಿನಂತೆ ಹಂತಹಂತವಾಗಿ ಹಣ ಬಿಡುಗಡೆ ಮಾಡುತ್ತಿದೆ. ಇನ್ನು, ಹಿಂದೆ ಪ್ರತಿಭಟನೆ ನಡೆಸಿದಾಗ ಮುಖ್ಯಮಂತ್ರಿ ಅವರೊಂದಿಗೆ ನಮ್ಮನ್ನೂ ಕರೆಸಿ ಸಭೆ ಮಾಡಿಸುವುದಾಗಿ ಭರವಸೆ ನೀಡಲಾಗಿತ್ತು. ಈವರೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಿಲ್ಲ. ಶೀಘ್ರ ಮುಖ್ಯಮಂತ್ರಿ ಅವರು ನಮ್ಮನ್ನು ಕರೆದು ಸಭೆ ಮಾಡಿ ಸಮಸ್ಯೆ ಆಲಿಸಬೇಕು ಹಾಗೂ ಅದಕ್ಕೆ ಪರಿಹಾರ ನೀಡಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ