ಅನ್ನಕ್ಕಾಗಿ ಕ್ಷೌರಿಕ ವೃತ್ತಿ ಹಾಗೂ ಬ್ರೈನ್ ಟ್ಯೂಮರ್ ಕಾಯಿಲೆ ಇವೆರಡರ ನಡುವೆ ಸಾಹಸ ಜೀವನವನ್ನು ನಡೆಸುತ್ತಿರುವ ನಾಟಕ ರಚನೆಕಾರ ಎಸ್. ಎನ್. ರಂಗಸ್ವಾಮಿಯವರಿಗೆ ರಾಜ್ಯೋತ್ಸವ ಪುರಸ್ಕಾರ ಒಲಿದು ಬಂದಿದೆ.
ದಾವಣಗೆರೆ[ನ.29]: ಒಂದೆಡೆ ತುತ್ತು ಅನ್ನಕ್ಕಾಗಿ ಕ್ಷೌರಿಕ ವೃತ್ತಿ, ಮತ್ತೊಂದೆಡೆ ಬಾಧಿಸುತ್ತಿರುವ ಬ್ರೈನ್ ಟ್ಯೂಮರ್ ಕಾಯಿಲೆ. ಇವೆರಡರ ನಡುವೆ ಸಾಹಸ ಜೀವನವನ್ನು ನಡೆಸುತ್ತಿರುವ ಅದ್ಭುತ ನಾಟಕ ರಚನೆಕಾರನೊಬ್ಬನಿಗೆ ರಾಜ್ಯೋತ್ಸವ ಪುರಸ್ಕಾರ ಒಲಿದು ಬಂದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿಯ ಎಸ್. ಎನ್. ರಂಗಸ್ವಾಮಿ ಈ ಅಪರೂಪದ ಸಾಧಕ.
ನಾಲ್ಕು ದಶಕಗಳ ಹಿಂದೆ ಮುಳುಗುತ್ತಿದ್ದ ನಾಟಕ ಕಂಪನಿಯೊಂದಕ್ಕೆ ಭರ್ಜರಿ ಆದಾಯ ತಂದುಕೊಡುವಂತಹ ಅದ್ಭುತ ನಾಟಕ ರಚಿಸಿಕೊಟ್ಟಿದ್ದರು. ಅಲ್ಲದೆ ತಾನೇ ಬರೆದ ನಾಟಕವನ್ನು ಕಾಸು ಕೊಟ್ಟು ನೋಡಿದ್ದಂತಹ ಕಲಾ ಪ್ರೋತ್ಸಾಹಕ. ಆದರೆ ಇಂದು 70ರ ಇಳಿ ವಯಸ್ಸಿನಲ್ಲಿ ಕುಟುಂಬದ ನೊಗ ಹೊರಬೇಕಾದ ಅನಿವಾರ್ಯತೆ. ಚಿರಡೋಣಿ ಗ್ರಾಮದ ಪುಟ್ಟಶೆಡ್ಡಿನಂತಹ ಕ್ಷಾೌರದಂಗಡಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಇವರದ್ದು ನಿತ್ಯ ಕಣ್ಣೀರಿನ ಬದುಕು.
ಬ್ರೈನ್ ಟ್ಯೂಮರ್‌ಗೆ ಅವರಿಗೆ ಈಗಾಗಲೇ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಆಗಿದೆ. ಪ್ರತಿ 3 ತಿಂಗಳಿಗೊಮ್ಮೆ ಮಣಿಪಾಲ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಇವೆಲ್ಲದರ ನಡುವೆ ಮಾಸಾಶನ ಪಡೆಯುವ ಎಲ್ಲಾ ಅರ್ಹತೆ ಇದ್ದರೂ ಜಿಲ್ಲಾಡಳಿತ ಮಾತ್ರ ಇಂತಹದ್ದೊಂದು ಅವಕಾಶ ಮಾಡಿಕೊಟ್ಟಿಲ್ಲ. ಕ್ಷೌರಿಕ ವೃತ್ತಿ ಮಾಡಬೇಕು. ತನ್ನ ಚಿಕಿತ್ಸೆಗೆ, ಕುಟುಂಬ ನಿರ್ವಹಣೆಗೆ ಹಣ ಹೊಂದಿಸಬೇಕಾದ ಸ್ಥಿತಿ ರಂಗಸ್ವಾಮಿಯದ್ದು.
ನಾಟಕ ರಚನೆಯಲ್ಲಿ ಎತ್ತಿದ ಕೈ
ನಾಲ್ಕು ದಶಕಗಳ ಹಿಂದೆ ಪ್ರಸಿದ್ಧ ನಾಟಕ ಕಂಪನಿಯೊಂದು ಸಂಕಷ್ಟಕ್ಕೆ ಸಿಲುಕಿತ್ತು. ಅಂದು ರಂಗಸ್ವಾಮಿ ‘ದುಡುಕಿ ಹೋದ ಮಗ-ಹುಡುಕಿ ಬಂದ ಸೊಸೆ’ ಎಂಬ ನಾಟಕ ಬರೆದು ನಾಟಕ ಕಂಪನಿಗೆ ನೀಡಿದ್ದರು. ಆ ನಾಟಕ ವೃತ್ತಿ ರಂಗಭೂಮಿ ಚರಿತ್ರೆಯಲ್ಲೇ ದಾಖಲೆ ಮಾಡುತ್ತದೆ. ಬೆಳಗಾವಿ ಗಡಿನಾಡಿನಲ್ಲಿ 400 ಭರ್ಜರಿ ಪ್ರಯೋಗ ಕಾಣುತ್ತದೆ. ಇಂದಿಗೂ ಆ ನಾಟಕಕ್ಕೆ ಅದೇ ಮಹತ್ವವಿದೆ. ಅದರಿಂದ ನಾಟಕ ಕಂಪನಿಗೆ ಭರಪೂರ ಆದಾಯ ಬರುತ್ತದೆ. ಆದರೆ ರಂಗಸ್ವಾಮಿ ಮಾತ್ರ ಆ ಕಂಪನಿ ಮಾಲೀಕರಿಗೆ ಕೊಟ್ಟಮಾತಿನಂತೆ ಆ ನಾಟಕವನ್ನು ಬೇರೆ ಯಾರಿಗೂ ನೀಡಲಿಲ್ಲ. ಮಾತ್ರವಲ್ಲ ಮುದ್ರಿಸಲೂ ಇಲ್ಲ. ಒಂದುವೇಳೆ ಈ ಎರಡರಲ್ಲಿ ಒಂದು ಕೆಲಸ ಮಾಡಿದ್ದರೂ ಅವರು ಭರಪೂರ ಹಣ ಗಳಿಸಬಹುದಿತ್ತು.