ರಂಗ ಕಲಾವಿದ, ಚಹಾ ಅಂಗಡಿ ರೊಟ್ಟಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ

By Kannadaprabha News  |  First Published Aug 11, 2024, 7:41 AM IST

ರಂಗ್ರ ಗ್ರಾಮ ಶೇಷಗಿರಿಯ ಹಳ್ಳಿಯ ಚಹಾ ಅಂಗಡಿಯ ರಂಗ ಕಲಾವಿದ ಸಿದ್ದಪ್ಪ ರೊಟ್ಟಿ ಅವರಿಗೆ 25 ವರ್ಷಗಳ ರಂಗ ಸೇವೆಗೆ 2024-25ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ.


ಹಾನಗಲ್ಲ (ಆ.11): ರಂಗ್ರ ಗ್ರಾಮ ಶೇಷಗಿರಿಯ ಹಳ್ಳಿಯ ಚಹಾ ಅಂಗಡಿಯ ರಂಗ ಕಲಾವಿದ ಸಿದ್ದಪ್ಪ ರೊಟ್ಟಿ ಅವರಿಗೆ 25 ವರ್ಷಗಳ ರಂಗ ಸೇವೆಗೆ 2024-25ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ. ಇದು ಶೇಷಗಿರಿಗೆ ಎರಡನೇ ಪ್ರಶಸ್ತಿ.ರಂಗ ಗ್ರಾಮ ಖ್ಯಾತಿಯ ಹಾನಗಲ್ಲ ತಾಲೂಕಿನ ಶೇಷಗಿರಿಯಲ್ಲಿ ಹಲವು ದಶಕಗಳ ರಂಗ ಪ್ರೀತಿಯಿಂದಾಗಿ ನೂರಾರು ನಾಟಕಗಳು ಇಡೀ ರಾಜ್ಯ, ಹೊರ ರಾಜ್ಯದ ರಂಗ ಕಲಾವಿದರಿಂದ ಪ್ರದರ್ಶನಗೊಂಡಿದ್ದು, ಇಡೀ ಗ್ರಾಮ ರಂಗಾಸಕ್ತಿಯ ತವರಾಗಿದೆ. ಇದಕ್ಕೆಲ್ಲ ಟೊಂಕ ಕಟ್ಟಿ ನಿಂತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಭು ಗುರಪ್ಪನವರ ಕಾರ್ಯಕ್ಕೆ ಹೆಗಲಿಗೆ ಹೆಗಲಾಗಿ, ಬಡತನದಲ್ಲಿಯೂ ರಂಗ ಭೂಮಿಯ ಶ್ರೀಮಂತಿಕೆಗೆ ಸೈ ಎನ್ನುವಂತೆ ಸವೆದು, ರಂಗದಲ್ಲಿ ಕಥೆಯಾದ ಕಾಳ, ಕೊರಳೊಂದು ತಾಳಿ ಎರಡು, ಅಕ್ಷರ ಬಾಳಿಗೊಂದು ಉತ್ತರ, ಮಾತು ಕೊಟ್ಟ ಮುತ್ತೈದೆ, ಕಂಪನಿ ಸವಾಲ್, ಬಣ್ಣಕ್ಕೆ ಬೆರಗಾದವರು, ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ, ನ್ಯಾಯದ ಬಾಗಿಲು, ನಮಗೂ ಒಂದು ಕಾಲ, ಜಾತಿ ಮಾಡಬ್ಯಾಡ್ರಿ ಅಧಿಕಾರದೊಳಗ, ಚಂಬು ಪುರಾಣ ಸೇರಿದಂತೆ ನೂರಾರು ನಾಟಕಗಳಲ್ಲಿ ಮನೋಜ್ಞ ಪಾತ್ರಗಳಲ್ಲಿ, ಅದರಲ್ಲೂ ಹಾಸ್ಯ ಪಾತ್ರಗಳಲ್ಲಿ ರಂಗ ಪ್ರಿಯರನ್ನು ಆಹ್ಲಾದಗೊಳಿಸಿದ ಸಿದ್ದಪ್ಪ ರೊಟ್ಟಿ ಅವರಿಗೆ ನಿರೀಕ್ಷಿಸದ ಪ್ರಶಸ್ತಿ ಇದಾಗಿದೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕಾರ್ಯವೈಖರಿಗೆ ಪ್ರಧಾನಿ ಮೋದಿ ಮೆಚ್ಚುಗೆ

Tap to resize

Latest Videos

ಧಾರವಾಡ ಆಕಾಶವಾಣಿಯ ರೇಡಿಯೋ ನಾಟಕಗಳಾದ ಉಷಾಹರಣ, ಕತ್ತಲೆಯಿಂದ ಬೆಳಕಿನೆಡೆಗೆ, ಇವ ನಮ್ಮವ, ಚಂದನವಾಹಿನಿಯ ಸಿರಿ ಗಂಧ ಸಿರಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ.ಅತ್ಯಂತ ಹೆಸರುವಾಸಿಯಾದ ಉಷಾಹರಣ, ವಾಲಿವಧೆ, ಚಾವುಂಡರಾಯ, ಭಾರತಾಂಬೆ, ಶೋಕಚಕ್ರ ಈ ನಾಟಕಗಳು ಇಡೀ ರಾಜ್ಯವಲ್ಲದೆ, ಮುಂಬೈ ಹಾಗೂ ದೆಹಲಿಗಳಲ್ಲಿ ಪ್ರದರ್ಶಗೊಂಡಿವೆ. ರಂಗ ಸಮ್ಮಾನ: ಸಿಜಿಕೆ ಪ್ರಶಸ್ತಿ, ಹಾವೇರಿಯ ಗೆಳೆಯರ ಬಳಗ, ಬ್ಯಾಡಗಿಯಲ್ಲಿ ನಡೆದ ಜಿಲ್ಲಾ ಉತ್ಸವ, ಅಕ್ಕಿಆಲೂರಿನ ನುಡಿ ಸಂಭ್ರಮ, ಹಾನಗಲ್ಲಿನ ರಂಗ ಸಮ್ಮಾನ ಸೇರಿದಂತೆ ಹತ್ತು ಹಲವು ಗೌರ ಸಮ್ಮಾನಗಳು ಲಭಿಸಿವೆ.

ರಂಗಪ್ರಿಯ ಹೊಟೆಲ್: ಕೃಷಿ ಕೂಲಿ ಕಾರ್ಮಿಕರಾಗಿ ಜೀವನೋಪಾಯದಲ್ಲಿದ್ದ ಸಿದ್ದಪ್ಪ ರೊಟ್ಟಿ, ಹಳ್ಳಿಯಲ್ಲಿ ಚಹಾ ಅಂಗಡಿಯೊಂದನ್ನು ಆರಂಭಿಸಿದಾಗ ರಂಗ ಪ್ರೀತಿಗಾಗಿ ರಂಗ ಪ್ರಿಯ ಹೊಟೆಲ್ ಎಂದು ನಾಮಕರಣ ಮಾಡಿದರು. ಪ್ರತಿ ವರ್ಷ ಶೇಷಗಿರಿಯ ರಂಗ ಮಂದಿರಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ಸಾವಿರಾರು ಕಲಾವಿದರಿಗೆ ಇದೇ ಹೊಟೆಲ್‌ನ ಊಟ ಖಚಿತ. ಅದು ರಂಗ ಪ್ರೀತಿಯ ಶುಚಿ ರುಚಿಯನ್ನೂ ಹೊಂದಿರುತ್ತದೆ.

ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ಚಂದ್ರಗುತ್ತಿ ಗ್ರಾಮ ಅಭಿವೃದ್ಧಿಪಡಿಸುವೆ: ಮಧು ಬಂಗಾರಪ್ಪ

ಇಲ್ಲಿನ ರಂಗ ಮಂದಿರದಲ್ಲಿ ರಾತ್ರಿಯಿಡಿ ರಿಹರ್ಸಲ್ ಮಾಡುವ ಕಲಾವಿದರು ರಾತ್ರಿ ಹೊತ್ತಿನಲ್ಲಿ ಚಹಾ ಉಪಾಹಾರ ಬೇಕಾದಲ್ಲಿ ಸಿದ್ದಪ್ಪ ರೊಟ್ಟಿ ಅವರ ರಂಗ ಪ್ರಿಯ ಹೊಟೆಲ್‌ನಲ್ಲಿ ತಾವೇ ಉಪಾಹಾರ, ಚಹಾ ಸ್ವೀಕರಿಸಿ ತಾವೇ ಅಷ್ಟು ಹಣ ಅಲ್ಲಿಟ್ಟು ಹೋಗುತ್ತಾರೆ. ಮಾಲಿಕರಿಲ್ಲದೆ ರಂಗ ಕಲಾವಿದರಿಗಾಗಿ ರಾತ್ರಿಯಿಡಿ ಹೋಟೆಲ್ ತೆರೆದಿರುತ್ತದೆ. ಇದು ಒಬ್ಬ ರಂಗ ಕಲಾವಿದನ ಸೇವೆ. ಸದಾ ಹಸನ್ಮುಖದ ಸಿದ್ದಪ್ಪ ರೊಟ್ಟಿ ಅವರಿಗೆ ರಂಗ ಪ್ರೀತಿಯೊಂದಿಗೆ ರಂಗ ಕಲೆಯನ್ನು ಗೌರವಿಸುವ, ಅದಕ್ಕಾಗಿ ಹಂಬಲಿಸುವ, ಇಡೀ ರಂಗ ಮಂದಿರದ ಶ್ರೇಯೋಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮಹದಾಸೆ ಇದೆ. ಹಳ್ಳಿಯ ಹುಡುಗನ ರಂಗಾಟಕ್ಕೆ ಸಂದ ಗೌರವ ಇದಾಗಿದೆ.

click me!