ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ಚಂದ್ರಗುತ್ತಿ ಗ್ರಾಮ ಅಭಿವೃದ್ಧಿಪಡಿಸುವೆ: ಮಧು ಬಂಗಾರಪ್ಪ

By Kannadaprabha NewsFirst Published Aug 11, 2024, 7:20 AM IST
Highlights

ಶ್ರೀ ರೇಣುಕಾಂಬೆಯ ನೆಲೆಯಿಂದಾಗಿ ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಪ್ರಸಿದ್ಧಿ ಪಡೆದಿರುವ ತಾಲೂಕಿನ ಚಂದ್ರಗುತ್ತಿ ಗ್ರಾಮದ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವೆ ಎಂದು  ಸಚಿವ ಮಧು ಬಂಗಾರಪ್ಪ ಹೇಳಿದರು.

ಸೊರಬ (ಆ.11): ಶ್ರೀ ರೇಣುಕಾಂಬೆಯ ನೆಲೆಯಿಂದಾಗಿ ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಪ್ರಸಿದ್ಧಿ ಪಡೆದಿರುವ ತಾಲೂಕಿನ ಚಂದ್ರಗುತ್ತಿ ಗ್ರಾಮದ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶ್ರೀ ರೇಣುಕಾಂಬಾ ದೇವಸ್ಥಾನ ಆಡಳಿತ ಮಂಡಳಿ ಕಛೇರಿಯಲ್ಲಿ ರೇಣುಕಾಂಬೆ ದೇವಸ್ಥಾನ ಸರ್ವಾಂಗೀಣ ಅಭಿವೃದ್ಧಿ ಮತ್ತು ಗ್ರಾಮದ ಮೂಲಭೂತ ಸೌಕರ್ಯಗಳ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Latest Videos

ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಆಗಮಿಸುವ ಭಕ್ತರಿಗೆ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳ ಕೊರತೆ ಅಧಿಕವಾಗಿದೆ. ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಅನುದಾನದ ಕೊರತೆ ಇಲ್ಲ ಎಂದ ಅವರು, ದೇವಸ್ಥಾನ ಕೇಂದ್ರದ ಪ್ರಾಚ್ಯು ವಸ್ತು ಇಲಾಖೆಗೆ ಸಂಬಂಧಪಟ್ಟಿರುವುದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ದೇವಸ್ಥಾನದ ಸಾಂಸ್ಕೃತಿಕ ವೈಭವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಲಾಗುವುದು ಮತ್ತು ಇಲಾಖೆಯ ನಿಯಮಗಳನ್ನು ಅನುಸರಿಸಲಾಗುವುದು ಎಂದು ತಿಳಿಸಿದರು.

ಈ ಶಾಲೆಯಲ್ಲಿ ರಾತ್ರಿ ವಿಶ್ರಾಂತಿಗೆ ಮೊದಲು ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಠನ ಮಾಡಲಾಗುತ್ತೆ!

ಮಳೆಗಾಲದಲ್ಲಿ ದೇವಸ್ಥಾನದ ಮೆಟ್ಟಿಲುಗಳು ಹಾಗೂ ಗೋಪುರ ಸೋರುತ್ತಿದೆ. ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಮುಖ್ಯವಾಗಿ ಶೌಚಾಲಯ, ಕುಡಿಯುವ ನೀರು, ಸ್ನಾನದ ಗೃಹ ನಿರ್ಮಾಣ ಮಾಡುವುದು. ಅಲ್ಲದೇ ವಾಹನ ನಿಲುಗಡೆ, ಕೊಠಡಿ ವ್ಯವಸ್ಥೆ, ಯಾತ್ರಿ ನಿವಾಸ, ಯಾಗ ಶಾಲೆ, ತ್ರಿಶೂಲ ಭೈರಪ್ಪ ಮತ್ತು ಕಾಲಭೈರವ ದೇವಸ್ಥಾನಗಳ ದುರಸ್ತಿ, ಶ್ರೀ ರೇಣುಕಾಂಬೆ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ನೆರಳಿನ ವ್ಯವಸ್ಥೆ, ದೇವಿಯ ಗುಡ್ಡದ ಕೆಳಗಿನ ಆಜುಬಾಜು ಜಾಗಗಳಲ್ಲಿ ವ್ಯಾಪಾರಿಗಳಿಗೆ ಮಳಿಗೆ ನಿರ್ಮಾಣ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಪಟ್ಟಿ ತಯಾರಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಪುರಾತತ್ವ ಇಲಾಖೆ, ಪ್ರಾಚ್ಯು ವಸ್ತು ಇಲಾಖಾ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇವಸ್ಥಾನ ಮತ್ತು ಚಂದ್ರಗುತ್ತಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇವೆಲ್ಲವನ್ನು ದೇವಸ್ಥಾನ ಮೂಲ ಸಾಂಸ್ಕೃತಿಕ ವೈಭವಕ್ಕೆ ಧಕ್ಕೆಯಾಗದಂತೆ ನಿರ್ವಹಿಸಲಾಗುವುದು ಎಂದು ಹೇಳಿದರು.

ಕಳೆದ ವರ್ಷ ಮಳೆಯ ಕೊರತೆ ಎದುರಿಸಿದ್ದ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆಯಾಗಿದ್ದು, ಕೆರೆಗಳಿಗೆ ಧಕೆಯಾಗಿದೆ. ಸೇತುವೆ, ರಸ್ತೆಗಳು ಹಾಳಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಹಾನಿಯಾದ ಬಗ್ಗೆ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆ ಯನ್ನು ನೀಗಿಸುವ ವ್ಯವಸ್ಥೆ ಮಾಡಲಾಗಿದೆ. ೫೦ ಹಾಸಿಗೆಯ ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ೧೦೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆ ಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಂದ್ರಗುತ್ತಿ ಗ್ರಾಮದ ಬನಶಂಕರಿ ದೇವಸ್ಥಾನದಿಂದ ನವಗ್ರಾಮದವರೆಗೆ ರಸ್ತೆ ಅಗಲೀಕರಣ ಗೊಳಿಸಿ ಜೋಡಿ ರಸ್ತೆ ನಿರ್ಮಿಸುವುದರ ಜತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಡಿವೈಡರ್‌ಗಳನ್ನು ಅಳವಡಿಸುವಂತೆ ಗ್ರಾಮಸ್ಥರು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ: 37 ಸೆಕೆಂಡ್ಸ್‌ನಲ್ಲಿ ನೀರೊಳಗೆ 26 ಪಲ್ಟಿ!ಹೊಸ ವಿಶ್ವ ದಾಖಲೆ ನಿರ್ಮಿಸಿದ 13ರ ಪೋರ

ಸಭೆಯಲ್ಲಿ ಸಾಗರ ಉಪ ವಿಭಾಗಾಧಿಕಾರಿ ಯತೀಶ್, ತಹಶೀಲ್ದಾರ್ ಮಂಜುಳಾ ಹೆಗಡಾಳ್, ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾಕುಮಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರದೀಪ್‌ಕುಮಾರ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಧರ್ಮಪ್ಪ, ಗ್ರಾ.ಪಂ. ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್, ಸದಸ್ಯ ಎಂ.ಪಿ.ರತ್ನಾಕರ, ಮುಖಂಡರಾದ ಹೆಚ್.ಗಣಪತಿ, ಆರ್.ಶ್ರೀಧರ ಹುಲ್ತಿಕೊಪ್ಪ, ತಬಲಿ ಬಂಗಾರಪ್ಪ, ಅಣ್ಣಪ್ಪ ಹಾಲಘಟ್ಟ, ಸುನೀಲ್‌ಗೌಡ, ಎನ್.ಜಿ. ನಾಗರಾಜ, ಜಯಶೀಲಗೌಡ ಅಂಕರವಳ್ಳಿ, ದರ್ಶನ್ ಚಿಕ್ಕಮಾಕೊಪ್ಪ, ಮೋಹನ ಕಾನಡೆ ಹೊಳೆಮರೂರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

click me!