ಐಐಟಿ ರೀತಿ ಆಗ ಹೊರಟ ಯುವಿಸಿಇಗಿಲ್ಲ ಕ್ಯಾಂಪಸ್‌: ಪ್ಲೇಸ್‌ಮೆಂಟ್‌ನಲ್ಲಿ ರಾಜ್ಯಕ್ಕೇ ನಂ.1!

Published : Apr 08, 2025, 11:44 AM ISTUpdated : Apr 08, 2025, 12:26 PM IST
ಐಐಟಿ ರೀತಿ ಆಗ ಹೊರಟ ಯುವಿಸಿಇಗಿಲ್ಲ ಕ್ಯಾಂಪಸ್‌: ಪ್ಲೇಸ್‌ಮೆಂಟ್‌ನಲ್ಲಿ ರಾಜ್ಯಕ್ಕೇ ನಂ.1!

ಸಾರಾಂಶ

ಐಐಟಿ ಮಾದರಿಯಲ್ಲಿ ಬೆಳೆಯಲು ಹೆಜ್ಜೆ ಇಡುತ್ತಿರುವ ರಾಜಧಾನಿಯ ‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯ’ಕ್ಕೆ ಸರ್ಕಾರ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನೀಡಲುದ್ದೇಶಿಸಿದ್ದ 50 ಎಕರೆ ಕ್ಯಾಂಪಸ್‌ ಜಾಗದ ವಿಚಾರದಲ್ಲಿ ಹೊಸ ವಿವಾದ ಹುಟ್ಟುಕೊಂಡಿದೆ. 

ಲಿಂಗರಾಜು ಕೋರಾ

ಬೆಂಗಳೂರು (ಏ.08): ಐಐಟಿ ಮಾದರಿಯಲ್ಲಿ ಬೆಳೆಯಲು ಹೆಜ್ಜೆ ಇಡುತ್ತಿರುವ ರಾಜಧಾನಿಯ ‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯ’ಕ್ಕೆ ಸರ್ಕಾರ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನೀಡಲುದ್ದೇಶಿಸಿದ್ದ 50 ಎಕರೆ ಕ್ಯಾಂಪಸ್‌ ಜಾಗದ ವಿಚಾರದಲ್ಲಿ ಹೊಸ ವಿವಾದ ಹುಟ್ಟುಕೊಂಡಿದೆ. ರಾಜ್ಯದ ಪ್ರಥಮ ಎಂಜಿನಿಯರಿಂಗ್‌ ಕಾಲೇಜಾದ(1917ರಲ್ಲಿ ಆರಂಭ) ಯುವಿಸಿಇಯನ್ನು ಹಿಂದಿನ ಬಿಜೆಪಿ ಸರ್ಕಾರ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿ 2022ರಲ್ಲಿ ವಿಶ್ವವಿದ್ಯಾಲಯವನ್ನಾಗಿ ಅಸ್ತಿತ್ವಕ್ಕೆ ತಂದಿತು. ಬಳಿಕ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಇದರ ಹೊಸ ಕ್ಯಾಂಪಸ್‌ಗೆ 50 ಎಕರೆ ಜಾಗ ಮಂಜೂರು ಮಾಡಲು ನಿರ್ಧರಿಸಿತು. ಈ ವೇಳೆ, ಕೆಲವು ಪರಿಸರ ವಾದಿಗಳು ಮತ್ತು ಜ್ಞಾನಭಾರತಿ ನಡಿಗೆದಾರರ ಸಂಘಟನೆಗಳಿಂದ ಟೀಕೆಗಳು ವ್ಯಕ್ತವಾಗಿದ್ದವು. ಕ್ಯಾಂಪಸ್‌ನ ಜೀವವೈವಿಧ್ಯತೆಯ ನಾಶದ ಆತಂಕ ವ್ಯಕ್ತಪಡಿಸಿ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಸಮಸ್ಯೆಯನ್ನು ಪರಿಶೀಲಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದರು.

ರಾಜ್ಯಪಾಲರು ಈ ದೂರಿನ ಬಗ್ಗೆ ಬೆಂ.ವಿವಿಯ ಅಭಿಪ್ರಾಯ ಕೇಳಿದ್ದರು. ಪರಿಣಾಮವಾಗಿ, ಯುವಿಸಿಇಗೆ ಭೂಮಿ ನೀಡುವ ಬಗ್ಗೆ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಿ ವರದಿ ನೀಡಲು ರಚಿಸಲಾಗಿದ್ದ ಹಿರಿಯ ಪ್ರಾಧ್ಯಾಪಕರೊಬ್ಬರ ನೇತೃತ್ವದ ಸಮಿತಿಯು, ಇದೇ ರೀತಿ ಜ್ಞಾನಭಾರತಿ ಜಾಗವನ್ನು ಬೇರೆ ಬೇರೆ ಸಂಸ್ಥೆಗಳಿಗೆ ಹಂಚಿಕೆ ಮಾಡುತ್ತಾ ಹೋಗುವುದರಿಂದ ಗಂಭೀರ ಪರಿಸರ ಹಾನಿಯಾಗಲಿದೆ. ಪರ್ಯಾಯ ಮಾರ್ಗ ನಿರ್ಮಾಣ, ಅಭಿವೃದ್ಧಿ ಕಾರ್ಯಗಳಿಂದ ಸಮೃದ್ಧ ಜೀವವೈವಿಧ್ಯ ಪ್ರದೇಶಕ್ಕೆ ಹಾನಿಯಾಗಲಿದೆ. ಇದು ಜೀವವೈವಿಧ್ಯ ಕಾಯ್ದೆ 2004 ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1986ಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಹಾಗಾಗಿ ಇದನ್ನು ತಡೆಯಲು ಬಯೋಪಾರ್ಕ್ ಅನ್ನು ಸಂರಕ್ಷಿತ ಭೂಮಿಯಾಗಿ ಘೋಷಿಸಲು ಹಾಗೂ ಆ ಪ್ರದೇಶದಲ್ಲಿ ಎಲ್ಲಾ ರೀತಿಯ ಮಾನವ ಚಟುವಟಿಕೆಗಳು ಮತ್ತು ನಿರ್ಮಾಣ ಕಾರ್ಯಗಳನ್ನು ನಿಷೇಧಿಸಬೇಕೆಂದು 2017 ಮತ್ತು 2022ರ ಸಿಂಡಿಕೇಟ್‌ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಕಾರ್ಯಗತಗೊಳಿಸುವಂತೆ ಸಮಿತಿಯು ಶಿಫಾರಸು ಮಾಡಿದೆ.

ನೃಪತುಂಗ ವಿಶ್ವವಿದ್ಯಾಲಯದಲ್ಲಿ 5 ವರ್ಷವಾದ್ರೂ ಪಿಎಚ್‌ಡಿ 0: ಅಧ್ಯಯನಕ್ಕೆ ಬಡಿದ ಗ್ರಹಣ

ಕಳೆದ ಡಿಸೆಂಬರ್‌ನಲ್ಲಿ ಸಮಿತಿಯು ಈ ವರದಿ ಸಲ್ಲಿಸಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಈ ವರದಿಯನ್ನು ಆಧರಿಸಿ ವಿವಿಯು ರಾಜ್ಯಪಾಲರಿಗೆ ಪ್ರತಿಕ್ರಿಯೆ ನೀಡಿಲ್ಲ. ಯಾಕೆಂದರೆ ಯುವಿಸಿಇ ಕೂಡ ಒಂದು ಸಾರ್ವಜನಿಕ ವಿವಿ. ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಲಕ್ಷಾಂತರ ಬಡ ಮಕ್ಕಳು ಕಡಿಮೆ ಶುಲ್ಕದಲ್ಲಿ ವ್ಯಾಸಂಗ ಮಾಡಿದ್ದಾರೆ. ಅಲ್ಲದೆ, ಜಾಗ ನೀಡಲು ಸಚಿವ ಸಂಪುಟದಲ್ಲಿ ಸರ್ಕಾರ ನಿರ್ಧರಿಸಿ ಆಗಿದೆ. ಸರ್ಕಾರದ ನಿರ್ಧಾರವನ್ನು ವಿವಿಯ ಮಟ್ಟದಲ್ಲಿ ವಿರೋಧಿಸುವುದು ಔಚಿತ್ಯವಲ್ಲ ಎನ್ನುವ ಕಾರಣಕ್ಕೆ ವರದಿಯನ್ನು ಬದಿಗಿಟ್ಟು, ವಿವಿಯ ಎಂಜಿನಿಯರಿಂಗ್‌ ವಿಭಾಗದಿಂದ ವೈಜ್ಞಾನಿಕ ಅಂಶಗಳನ್ನು ಆಧರಿಸಿ ಕೆಲವು ವಿವರಣೆಗಳನ್ನು ನೀಡುವ ಜೊತೆಗೆ ಯುವಿಸಿಇಗೆ ಜಾಗ ನೀಡಲು ಯಾವುದೇ ಆಕ್ಷೇಪ ಇಲ್ಲ ಎಂದು ರಾಜಭವನಕ್ಕೆ ವಿವರಣೆ ನೀಡಿರುವುದಾಗಿ ವಿವಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ಕ್ಯಾಂಪಸ್‌ ನಿರ್ಮಾಣಕ್ಕೆ ಬೆಂ.ವಿವಿ ಒಪ್ಪಿದೆ: ಯುವಿಸಿಇಗೆ 50 ಎಕರೆ ಭೂಮಿಯನ್ನು ನೀಡಲು ಬೆಂ.ವಿವಿ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದಕ್ಕೆ ತಮ್ಮ ಸಂಪೂರ್ಣ ಒಪ್ಪಿಗೆ ಇರುವುದಾಗಿ ರಾಜ್ಯಪಾಲರಿಗೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಜಾಗದಲ್ಲಿ ನೂತನ ಕ್ಯಾಂಪಸ್‌ ನಿರ್ಮಾಣ ಕಾರ್ಯಕ್ಕೆ ಐದು ಸಂಸ್ಥೆಗಳು ಮುಂದೆ ಬಂದಿವೆ. ಪ್ರತಿ ಸಂಸ್ಥೆಗಳ ಯೋಜನಾ ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು ಯಾವುದಾದರೂ ಒಂದಕ್ಕೆ ಒಪ್ಪಿಗೆ ಪಡೆಯಲು ಆಲೋಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಐದು ವರ್ಷಕ್ಕೆ 850 ಕೋಟಿ ರು. ಪ್ರಸ್ತಾವನೆ: ಯುವಿಸಿಇಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ 850 ಕೋಟಿ ರು. ಅನುದಾನ ಒದಗಿಸುವಂತೆ ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಬಿ. ಮುತ್ತುರಾಮನ್ ಹಾಗೂ ನಿರ್ದೇಶಕ ಡಾ. ಎಸ್. ತ್ರಿಪಾಠಿ ನೇತೃತ್ವದ ಆಡಳಿತ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಈ ಪೈಕಿ 225 ಕೋಟಿ ವೇತನಕ್ಕೆ ವ್ಯಯವಾಗಲಿದೆ. 125 ಕೋಟಿ ರು. ವಿವಿ ನಿರ್ವಹಣೆಗೆ, 500 ಕೋಟಿ ರು. ಮೂಲಸೌಕರ್ಯ ಹಾಗೂ ಉಪಕರಣಗಳ ಖರೀದಿಗೆ ಬಳಕೆಯಾಗಲಿದೆ ಎಂದು ಹೇಳಿದೆ. ವಿವಿಯ ಬೇಡಿಕೆಯಲ್ಲಿ ಸರ್ಕಾರ ಈಗಾಗಲೇ ಕಳೆದ ಮೂರು ವರ್ಷಗಳಿಂದ ಹಂತ ಹಂತವಾಗಿ ಸುಮಾರು 200 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದೇ ಹಣದಲ್ಲಿ ಯುವಿಇಸಿ ಪ್ರಸ್ತುತ ಕೆ.ಆರ್‌. ವೃತ್ತದ ಬಳಿ 15 ಎಕರೆ ಕ್ಯಾಂಪಸ್‌ನಲ್ಲಿ ಮೆಕ್ಯಾನಿಕಲ್‌ ಬ್ಲಾಕ್‌ ಅನ್ನು ನವೀಕರಿಸುವುದರ ಜತೆಗೆ ಅದರ ಪಕ್ಕದಲ್ಲೇ 130 ಕೋಟಿ ರು. ಏಳು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದೆ. ಇದು ಬಹುತೇಕ ಅಂತಿಮ ಹಂತ ತಲುಪಿದೆ.

ಪ್ರವೇಶ ಶುಲ್ಕ-ಸರ್ಕಾರದ ಅನುದಾನವೇ ಆಧಾರ: ಯುವಿಸಿಇಯಲ್ಲಿ ಎಂಟು ಪದವಿ, 22 ಸ್ನಾತಕೋತ್ತರ ಪದವಿ ಹಾಗೂ ಆರು ಪಿಎಚ್‌ಡಿ ವಿಭಾಗಗಳಿದ್ದು ಒಟ್ಟಾರೆ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 139 ಬೋಧಕ ಮತ್ತು 203 ಬೋಧಕೇತರ ಹುದ್ದೆ ಮಂಜೂರಾಗಿವೆ. ಆದರೆ, ಕ್ರಮವಾಗಿ 69 ಮತ್ತು 30 ಸಿಬ್ಬಂದಿಯಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಗತ್ಯಾನುಸಾರ ಅತಿಥಿ ಉಪನ್ಯಾಸಕರು, ಗುತ್ತಿಗೆ ಆಧಾರದಲ್ಲಿ ಬೋಧಕೇತರ ಸಿಂಬಂದಿ ನಿಯೋಜಿಸಿಕೊಳ್ಳಲಾಗಿದೆ. ಸಂಯೋಜಿತ ಕಾಲೇಜುಗಳು ಇಲ್ಲ. ವಿದ್ಯಾರ್ಥಿಗಳ ಶುಲ್ಕವೇ ಪ್ರಮುಖ ಆಂತರಿಕ ಸಂಪನ್ಮೂಲವಾಗಿದೆ. ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕದಿಂದಲೇ ವಾರ್ಷಿಕ ಸುಮಾರು 15 ಕೋಟಿ ರು.ಗಳಿಗೂ ಹೆಚ್ಚು ಆದಾಯ ಬರುತ್ತದೆ. ಈ ಹಣದಲ್ಲೇ ವಿವಿಯು ಕ್ಯಾಂಪಸ್‌ ನಿರ್ವಹಣೆ, ಅತಿಥಿ ಉಪನ್ಯಾಸಕರ ವೇತನ, ಶೈಕ್ಷಣಿಕ, ಪರೀಕ್ಷೆ, ಸಂಶೋಧನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇನ್ನು ಯುವಿಸಿಯಲ್ಲಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿ, ನಂತರ ಅಲ್ಲೇ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸುಮಾರು 2 ದಶಕಗಳ ಕಾಲ ಸೇವೆ ಸಲ್ಲಿಸಿರುವ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು, ಬೆಂಗಳೂರು ವಿವಿ ಕುಲಪತಿಯಾಗಿದ್ದಾಗ ವಿರೋಧದ ನಡುವೆಯೂ ಸುಮಾರು 25 ಕೋಟಿ ರು. ಅನುದಾನವನ್ನು ಯುವಿಸಿಇ ಅಭಿವೃದ್ಧಿಗಾಗಿ ನೀಡಿದ್ದರು.

ಪ್ಲೇಸ್‌ಮೆಂಟ್‌ನಲ್ಲಿ ರಾಜ್ಯಕ್ಕೇ ನಂ.1: ಯುವಿಸಿಇ ತನ್ನ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವಲ್ಲಿಯೂ ರಾಜ್ಯದಲ್ಲೇ ನಂಬರ್‌ 1. ಪ್ರತೀ ವರ್ಷ ವಿವಿ ಕ್ಯಾಂಪಸ್‌ಗೇ ಬರುವ ನೂರಾರು ಕಂಪನಿಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿಗೆ ಆರಿಸಿಕೊಳ್ಳುತ್ತಿವೆ. 2024ನೇ ಸಾಲಿನಲ್ಲಿ ಶೇ.84ರಷ್ಟು ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ದೊರಕಿವೆ. 2023ನೇ ಸಾಲಿನಲ್ಲಿ ಶೇ.82ರಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ. ಉತ್ತಮ ವೇತನ ಪ್ಯಾಕೇಜ್‌ ಕೂಡ ಲಭ್ಯವಾಗಿದೆ. ಇದು ಅಧಿಕೃತವಾದರೆ, ಕ್ಯಾಂಪಸ್‌ ಸೆಲೆಕ್ಷನ್‌ ಹೊರತಾಗಿ ಬೇರೆ ಬೇರೆ ಉದ್ಯೋಗಕ್ಕೆ ಹೋದವರನ್ನೂ ಸೇರಿಸಿದರೆ ಶೇ.90ಕ್ಕೂ ಹೆಚ್ಚು ಲೆಕ್ಕ ಬರುತ್ತದೆ. ನಮ್ಮ ಪ್ರಕಾರ ಪ್ಲೇಸ್‌ಮೆಂಟ್‌ನಲ್ಲಿ ನಾವೇ ಮೊದಲ ಸ್ಥಾನದಲ್ಲಿದ್ದೇವೆ ಎಂದು ವಿವಿಯ ಪ್ಲೇಸ್‌ಮೆಂಟ್‌ ವಿಭಾಗದ ಮುಖ್ಯಸ್ಥ ಪ್ರೊ.ದಿಲೀಪ್‌ ತಿಳಿಸಿದರು.

76 ವರ್ಷ ಹಳೆಯ ಕರ್ನಾಟಕ ವಿವಿಗೆ ಆರ್ಥಿಕ ಸಂಕಷ್ಟ: 416 ಬೋಧಕ, 849 ಬೋಧಕೇತರ ಹುದ್ದೆ ಖಾಲಿ

ಯುವಿಸಿಇ ಐಐಟಿ ಮಾದರಿಯಲ್ಲಿ ಬೆಳೆಯಲು ಇನ್ನೂ ಕೆಲವು ವರ್ಷಗಳು ಅಗತ್ಯವಿದೆ. ಇದಕ್ಕೆ ಸರ್ಕಾರ ಅಗತ್ಯ ಬೋಧಕರ ನೇಮಕ, ಅನುದಾನ ಒದಗಿಸುವುದು ಸೇರಿ ಎಲ್ಲ ರೀತಿಯ ಅಗತ್ಯ ಸಹಕಾರ ಬೇಕು. ಜೊತೆಗೆ ವಿವಿ ಕೂಡ ಸ್ಪೇಸ್‌ ಟೆಕ್ನಾಲಜಿ, ಏರೋನಾಟಿಕ್ಸ್‌, ಎಐ, ರೋಬೋಟಿಕ್ಸ್‌, ನ್ಯಾನೋ ಟೆಕ್ನಾಲಜಿ ಸೇರಿದಂತೆ ಹೊಸ ಹೊಸ ಆಧುನಿಕ ಕೋರ್ಸುಗಳ ಆರಂಭ, ಆನ್‌ಲೈನ್‌ ಶಿಕ್ಷಣ ಒದಗಿಸುವುದು, ರಾಜ್ಯಮಟ್ಟದ ಪ್ರಯೋಗಾಲಯ ನಿರ್ಮಾಣದಂತಹ ಕಾರ್ಯಗಳನ್ನು ಕೈಗೊಳ್ಳಬೇಕು. ಆಗ ಮಾತ್ರ ನಿರ್ದಿಷ್ಟ ಗುರಿ ಸಾಧಿಸಲು ಸಾಧ್ಯ.
-ಕೆ.ಆರ್‌.ವೇಣುಗೋಪಾಲ್‌, ವಿಶ್ರಾಂತ ಕುಲಪತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!