Pensions at the Doorsteps: ಅಂಚೆ ಮೂಲಕ ಮನೆಗೇ ಸಾಮಾಜಿಕ ಪಿಂಚಣಿ: ಆರ್‌.ಅಶೋಕ್‌

By Kannadaprabha NewsFirst Published Dec 14, 2021, 7:49 AM IST
Highlights

*ಫಲಾನುಭವಿಗಳು ಬಯಸಿದರೆ ಮನೆಗೆ ಪಿಂಚಣಿ ರವಾನೆ
*ಅಗತ್ಯವಿರುವವರಿಗೆ ಮನೆಗೆ ತಲುಪಿಸುವ ವ್ಯವಸ್ಥೆ!
*ಕಂದಾಯ ಇಲಾಖೆ ಸಮಸ್ಯೆ ಚರ್ಚೆಗೆ ಪ್ರತ್ಯೇಕ ಅವಕಾಶ ನಿಗದಿ
 

ಸುವರ್ಣಸೌಧ (ಡಿ. 14): ವೃದ್ಧಾಪ್ಯ ವೇತನ (Old Age Pensions) ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಬಯಸಿದರೆ ಬ್ಯಾಂಕ್‌ ಖಾತೆ ಬದಲಾಗಿ ಅಂಚೆ ಸಿಬ್ಬಂದಿ ಮೂಲಕ ಮನೆಗೆ ಪಿಂಚಣಿ ತಲುಪಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ಅಲ್ಲದೆ, ಇನ್ನು ಮುಂದೆ 60 ವರ್ಷ ಮೀರಿದ ಬಿಪಿಎಲ್‌ (BPL) ಆರ್‌.ಅಶೋಕ್‌ ಕುಟುಂಬದ ಸದಸ್ಯರಿಗೆ ಅರ್ಜಿ ಸಲ್ಲಿಕೆ ಮಾಡದೆಯೇ ಗ್ರಾಮಲೆಕ್ಕಿಗರೇ ಊರಿಗೆ ಬಂದು ದಾಖಲಾತಿ ಪಡೆದು ಪಿಂಚಣಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ (JDS) ಸದಸ್ಯ ಬಂಡೆಪ್ಪ ಕಾಶೆಂಪುರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 60ರಿಂದ 64 ವರ್ಷದೊಳಗಿನ 5.29 ಲಕ್ಷ ಮಂದಿಗೆ ತಲಾ 600 ರು. ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. 65 ವರ್ಷ ಮೇಲ್ಪಟ್ಟ8.90 ಲಕ್ಷ ಮಂದಿಗೆ ತಲಾ 1,200 ರು. ಹಾಗೂ 28.15 ಲಕ್ಷ ಮಂದಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ 1,200 ರು. ಪಿಂಚಣಿ ನೀಡಲಾಗುತ್ತಿದೆ. ಉಳಿದ ವಿವಿಧ ಯೋಜನೆಗಳ ಅಡಿಯೂ ಸಾಮಾಜಿಕ ಪಿಂಚಣಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಗತ್ಯವಿರುವವರಿಗೆ ಮನೆಗೆ ತಲುಪಿಸುವ ವ್ಯವಸ್ಥೆ!

ಆದರೆ, ಈ ಪಿಂಚಣಿಯನ್ನು ನೇರವಾಗಿ ಫಲಾನುಭವಿ ಖಾತೆಗೆ ವರ್ಗಾಯಿಸುತ್ತಿರುವುದರಿಂದ ಬ್ಯಾಂಕಿಗೆ ಹೋಗಿ ಹಣ ಪಡೆಯಲು ದಿನಪೂರ್ತಿ ವ್ಯಯಿಸಬೇಕಾಗುತ್ತದೆ. ಇದಕ್ಕಾಗಿ ಕೆಲಸ ಬಿಟ್ಟು ಹೋಗಬೇಕು. ಪಟ್ಟಣಕ್ಕೆ ಹೋಗಲು ಪ್ರಯಾಣ ವೆಚ್ಚ ಭರಿಸಬೇಕು. ಇದರ ಬದಲಿಗೆ ಅಗತ್ಯವಿರುವವರಿಗೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಬಂಡೆಪ್ಪ ಕಾಶೆಂಪುರ್‌ ಅವರು ಮನವಿ ಮಾಡಿದ್ದಾರೆ. ಹೀಗಾಗಿ ಅಗತ್ಯವಿರುವವರಿಗೆ ಅಂಚೆ ಸಿಬ್ಬಂದಿ ಮೂಲಕ ಮನೆಗೆ ಪಿಂಚಣಿ ತಲುಪಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಂದಾಯ ಇಲಾಖೆ ಸಮಸ್ಯೆ ಚರ್ಚೆಗೆ ಪ್ರತ್ಯೇಕ ಅವಕಾಶ ನಿಗದಿ

ರಾಜ್ಯದಲ್ಲಿ ಉಂಟಾಗಿರುವ ಸರ್ವೇ, ಪೋಡಿ ಸಮಸ್ಯೆ ಬಗೆಹರಿಸಲು ಎರಡು ಸಾವಿರ ಸರ್ವೇಯರ್‌ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 600 ಮಂದಿ ಸರ್ವೆಯರ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ನಮ್ಮ ಕ್ಷೇತ್ರದಲ್ಲಿ ಸರ್ವೆ, ಪೋಡಿ, ನಕಾಶೆಗಳು ದೊರೆಯದೆ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ತಿಂಗಳುಗಟ್ಟಲೇ ಅಲೆದರೂ ಸರ್ವೆ ಸ್ಕೆಚ್‌ಗಳು ದೊರೆಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದರು. ಈ ವೇಳೆ ಹಲವು ಸದಸ್ಯರು ದನಿಗೂಡಿಸಿ ಸಮಸ್ಯೆಯ ಗಂಭೀರತೆ ಬಗ್ಗೆ ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್‌.ಅಶೋಕ್‌, 11-ಇ ಸರ್ವೇ ಸ್ಕೆಚ್‌ ಅಗತ್ಯವಿಲ್ಲ ಎಂದು ಕೋರ್ಟ್‌ ಆದೇಶಿಸಿದೆ. ಹೀಗಾಗಿ ಹೊಸ ತಿದ್ದುಪಡಿ ವಿಧೇಯಕ ಮಂಡಿಸಲು ಸಹ ಕ್ರಮ ಕೈಗೊಳ್ಳಲಾಗುವುದು. ಇನ್ನು ಸರ್ವೇ ಸಮಸ್ಯೆ ಬಗೆಹರಿಸಲು 2 ಸಾವಿರ ಮಂದಿ ಅಧಿಕೃತ ಸರ್ವೇಯರ್‌ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 600 ಮಂದಿ ನೇಮಕ ಮಾಡಲಾಗಿದೆ. ಹೀಗಾಗಿ ಇನ್ನು 3-4 ತಿಂಗಳಲ್ಲಿ ಸರ್ವೇ ಸಮಸ್ಯೆ ಬಗೆಹರಿಯಲಿದೆ ಎಂದರು.

ಇನ್ನು ಕಂದಾಯ ಇಲಾಖೆ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳೊಂದಿಗೆ ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಲು ಸಹ ಆದೇಶಿಸಲಾಗುವುದು. ಅಕ್ರಮ-ಸಕ್ರಮ ಕುರಿತ ಕಂದಾಯ ಜಮೀನುಗಳ ಬಗ್ಗೆ ಅನಗತ್ಯವಾಗಿ ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಕಡತ ಕಳುಹಿಸದಿರಲು ಸಹ ಆದೇಶಿಸಲಾಗುವುದು ಎಂದು ಹೇಳಿದರು.ಕಂದಾಯ ಇಲಾಖೆ ಸಮಸ್ಯೆಗಳ ಬಗ್ಗೆ ಹೆಚ್ಚು ಮಂದಿ ಸದಸ್ಯರು ಮಾತನಾಡಲು ಆಸಕ್ತಿ ತೋರಿದ್ದರಿಂದ ಈ ಬಗ್ಗೆ ಅರ್ಧ ಗಂಟೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

ಇದನ್ನೂ ಓದಿ: 

1)Minimum Farmland: ಆಯ್ದ ಜಿಲ್ಲೆಗಳಿಗೆ ಕನಿಷ್ಠ ಕೃಷಿ ಭೂಮಿ ಮಿತಿ ನಿಗದಿ: ಜೆ.ಸಿ.ಮಾಧುಸ್ವಾಮಿ

2)Karnataka Flood Relief: ಕೇಂದ್ರದಿಂದ ನಯಾಪೈಸೆ ನೆರೆ ಪರಿಹಾರ ಇಲ್ಲ: ಸಿದ್ದರಾಮಯ್ಯ

click me!