Minimum Farmland: ಆಯ್ದ ಜಿಲ್ಲೆಗಳಿಗೆ ಕನಿಷ್ಠ ಕೃಷಿ ಭೂಮಿ ಮಿತಿ ನಿಗದಿ: ಜೆ.ಸಿ.ಮಾಧುಸ್ವಾಮಿ

By Kannadaprabha News  |  First Published Dec 14, 2021, 7:34 AM IST

*ಕೃಷಿ ಭೂಮಿ ನಾಶ ತಡೆಯಲು ಈ ಕ್ರಮ
*ಸದನಕ್ಕೆ ಸಚಿವ ಮಾಧುಸ್ವಾಮಿ ಮಾಹಿತಿ
*ಆನುವಂಶಿಕ ಜಮೀನನ್ನು ವಿಭಜಿಸಲು ನಿರ್ಬಂಧನೆ ಇಲ್ಲ
*ಹಾಡಿ, ತಾಂಡಾ, ಗೊಲ್ಲರ ಹಟ್ಟಿಗೂ ರೇಶನ್‌ ಅಂಗಡಿ
*ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲು 2 ದಿನ ನಿಗದಿ


ಸುವರ್ಣಸೌಧ (ಡಿ. 14): ಕೃಷಿ ಭೂಮಿಯನ್ನು (Agriculture Land) ತುಂಡುಗಳನ್ನಾಗಿ ಮಾಡಿ ಕೃಷಿ ಉದ್ದೇಶಕ್ಕೆ ಬಳಸದೆ ನಿವೇಶನಗಳನ್ನಾಗಿ ಮಾಡುವುದನ್ನು ತಡೆಯಲು ಆಯ್ದ ಜಿಲ್ಲೆಗಳಲ್ಲಿ ಕನಿಷ್ಠ ಕೃಷಿ ಭೂಮಿಯ ವಿಸ್ತೀರ್ಣವನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J C MadhuSwamy) ಸ್ಪಷ್ಟಪಡಿಸಿದರು.ಜೆಡಿಎಸ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಕಂದಾಯ ಸಚಿವ ಆರ್‌.ಅಶೋಕ್‌ ಪರವಾಗಿ ಸಚಿವರು ಉತ್ತರಿಸಿದರು.ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ ಹಾಗೂ ಉಳಿದ ಜಿಲ್ಲೆಗಳಲ್ಲಿ 5 ಗುಂಟೆಗೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ಭೂಮಿಯನ್ನು ತುಂಡು ತುಂಡು ಮಾಡಿ ನಿವೇಶನ ಮಾಡುವುದರಿಂದ ಅಲ್ಲಿಗೆ ನಾಗರಿಕ ಸೌಲಭ್ಯ ಕೊಡಲು ಆಗುವುದಿಲ್ಲ. ಹೀಗಾಗಿ ಈ ಆದೇಶ ಹೊರಡಿಸಲಾಗಿದೆ. 

ಆನುವಂಶಿಕತೆಯಿಂದ ಬರುವ ಜಮೀನನ್ನು ವಿಭಜಿಸಲು ನಿರ್ಬಂಧನೆ ಇಲ್ಲ

Tap to resize

Latest Videos

undefined

ಈಗಾಗಲೇ ಅಸ್ತಿತ್ವದಲ್ಲಿ ಇರುವ ಸರ್ವೆ ನಂಬರ್‌ ಹಾಗೂ ಪಹಣಿಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದಲ್ಲಿ ಅವುಗಳನ್ನು ಹಾಗೆಯೇ ಮುಂದುವರಿಸಲು ಹಾಗೂ ಈ ನಿರ್ಬಂಧಗಳನ್ನು ಭವಿಷ್ಯದಲ್ಲಿ ಜಾರಿಗೆ ತರುವಂತೆ ಆದೇಶಿಸಲಾಗಿದೆ. ಅಲ್ಲದೇ ಈ ಆದೇಶ ಈಗಾಗಲೇ ಅಸ್ತಿತ್ವದಲ್ಲಿ ಇರುವ ಸರ್ವೆ ನಂಬರ್‌ಗಳು ಹೊಸ ಆದೇಶದಲ್ಲಿ ಸೂಚಿಸಲಾದ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಸಹ ಅನ್ವಯವಾಗುವುದಿಲ್ಲ ಎಂದು ವಿವರಿಸಿದರು.

ಈ ಆದೇಶ ಆನುವಂಶಿಕತೆಯಿಂದ ಬರುವ ಜಮೀನನ್ನು ವಿಭಜಿಸಲು ನಿರ್ಬಂಧನೆ ಮಾಡುವುದಿಲ್ಲ, ಪ್ರಸ್ತುತ ಜಂಟಿ ಹಕ್ಕಿನ ಅಥವಾ ಬಹುಮಾಲಿಕತ್ವ ಹೊಂದಿರುವ ಜಮೀನಿನ ಪಹಣಿಗಳನ್ನು ಅಸಿತ್ವದಲ್ಲಿ ಇರುವ ಹಕ್ಕಿನ ಅನುಸಾರ ವಿಭಜಿಸಬಹುದಾಗಿದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಹಾಡಿ, ತಾಂಡಾ, ಗೊಲ್ಲರ ಹಟ್ಟಿಗೂ ರೇಶನ್‌ ಅಂಗಡಿ: ಸಚಿವ ಕತ್ತಿ

ರಾಜ್ಯದಲ್ಲಿರುವ ಎಲ್ಲ ಹಾಡಿಗಳು, ತಾಂಡಾಗಳು, ಗೊಲ್ಲರ ಹಟ್ಟಿ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಕಾಲೋನಿ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಸಾರ್ವಜನಿಕರ ವಿತರಣಾ ಪದ್ಧತಿ ನಿಯಂತ್ರಣ ಆದೇಶಕ್ಕೆ ತಿದ್ದುಪಡಿ ಆದೇಶ ಹೊರಡಿಸಲಾಗಿದೆ ಎಂದು ಅರಣ್ಯ ಮತ್ತು ಆಹಾರ, ನಾಗರಿಕರ ಸರಬರಾಜು ಖಾತೆ ಸಚಿವ ಉಮೇಶ ಕತ್ತಿ ಹೇಳಿದ್ದಾರೆ. 

ವಿಧಾನ ಪರಿಷತ್ತಿನಲ್ಲಿ ಸೋಮವಾರ ಕಾಂಗ್ರೆಸ್ಸಿನ ಪ್ರಕಾಶ್‌ ರಾಠೋಡ್‌ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಈ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶಕ್ಕೆ ಕಳೆದ ಸೆಪ್ಟೆಂಬರ್‌ 22ರಂದು ತಿದ್ದುಪಡಿ ಆದೇಶ ಮಾಡಲಾಗಿದೆ. ಕನಿಷ್ಠ 100 ಪಡಿತರ ಚೀಟಿಗಳಿಗೆ ಸೀಮಿತಗೊಳಿಸಿ ರಾಜ್ಯದ ತಾಂಡಾ ಪ್ರದೇಶಗಳಲ್ಲಿ 376 ನ್ಯಾಯಬೆಲೆ ಅಂಗಡಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು. ಆಯಾ ಜಿಲ್ಲಾಧಿಕಾರಿಗೆ ನ್ಯಾಯಬೆಲೆ ಅಂಗಡಿ ಸ್ಥಾಪನೆಗೆ ಕೋರಿ ಅರ್ಜಿ ಸಲ್ಲಿಸಿದರೆ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕತ್ತಿ ಭರವಸೆ ನೀಡಿದರು.

ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲು 2 ದಿನ ನಿಗದಿ

ಉತ್ತರ ಕರ್ನಾಟಕಕ್ಕೆ ಸಂಬಂಧಪಟ್ಟಸಮಸ್ಯೆಗಳು, ಯೋಜನೆಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಲು ಎರಡು ದಿನ ಮೀಸಲಿಡುವ ತೀರ್ಮಾನವನ್ನು ಕಲಾಪ ಸಲಹಾ ಸಮಿತಿ (ಬಿಎಸಿ) ಕೈಗೊಂಡಿದೆ. ಸೋಮವಾರ ಸುವರ್ಣಸೌಧದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು, ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಎರಡು ದಿನ ನಿಗದಿ ಮಾಡಬೇಕು ಎಂದು ಉತ್ತರ ಕರ್ನಾಟಕ ಭಾಗದ ಶಾಸಕರು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಭಾಧ್ಯಕ್ಷರು ಸಮಿತಿಯಲ್ಲಿ ಚರ್ಚಿಸಿ ಎರಡು ದಿನ ಚರ್ಚೆಗೆ ಅವಕಾಶ ನೀಡಿದ್ದಾರೆ.

ಅಲ್ಲದೇ, ಅಧಿವೇಶನ ಪ್ರಾರಂಭವಾದರೂ ಸರ್ಕಾರವು ಮಂಡನೆ ಮಾಡುವ ವಿಧೇಯಕಗಳ ಕುರಿತು ವಿಧಾನಸಭೆ ಸಚಿವಾಲಯಕ್ಕೆ ಮಾಹಿತಿ ನೀಡಿಲ್ಲ. ಮಂಡನೆ ಮಾಡುವ ವಿಧೇಯಕ ಬಗ್ಗೆ ಮಾಹಿತಿ ನೀಡಬೇಕು. ಜತೆಗೆ ಸದಸ್ಯರಿಗೆ ಪ್ರತಿಯನ್ನು ನೀಡಬೇಕು. ಇದರಿಂದ ಮೊದಲೇ ವಿಷಯ ತಿಳಿದುಕೊಂಡು ಸದನದಲ್ಲಿ ಚರ್ಚಿಸಲು ಸಿದ್ಧತೆ ಕೈಗೊಳ್ಳಲು ಸಹಕಾರವಾಗಲಿದೆ. ಹೀಗಾಗಿ ವಿಧೇಯಕಗಳನ್ನು ಅದಷ್ಟುಬೇಗ ನೀಡಬೇಕು ಎಂದು ತಿಳಿಸಲಾಯಿತು.

ಇದನ್ನೂ ಓದಿ:

1)Karnataka Flood Relief: ಕೇಂದ್ರದಿಂದ ನಯಾಪೈಸೆ ನೆರೆ ಪರಿಹಾರ ಇಲ್ಲ: ಸಿದ್ದರಾಮಯ್ಯ

2)Prajwal Revanna Case ಗೌಡರ ಕುಟಂಬಕ್ಕೆ ಸಂಕಷ್ಟ, ಆಸ್ತಿ ವಿವರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸೂಚನೆ

click me!