
ದಾವಣಗೆರೆ (ಜೂ.20): ಒನ್ ವೇನಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಸವಾರನಿಗೆ ಹೀಗೆ ಒನ್ ವೇನಲ್ಲಿ ಬರಬಾರದು ಎಂದು ತಿಳಿ ಹೇಳಿದಕ್ಕೆ ಸವಾರ ತಿರುಗಿ ಜಿಲ್ಲಾಧಿಕಾರಿಗೇ ಬೈದು ಹೋಗಿರುವ ಘಟನೆ ದಾವಣಗೆರೆ ಜಿಲ್ಲೆಯ ಎಸ್.ನಿಜಲಿಂಗಪ್ಪ ಬಡಾವಣೆ ಬಳಿ ಗುರುವಾರ ನಡೆದಿದೆ. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಪ್ರತಿದಿನ ಬೆಳಗ್ಗೆ ವಾಯುವಿಹಾರ ಮಾಡುತ್ತ ಸೈಕಲ್ ರೈಡ್ ಮಾಡುತ್ತಾರೆ. ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದಾಗ, ನಿಜಲಿಂಗಪ್ಪ ಬಡಾವಣೆಯ ಶ್ರೀ ಶಾರದಾಂಬ ದೇವಸ್ಥಾನದ ಬಳಿ ಬೈಕ್‌ನಲ್ಲಿ ವ್ಯಕ್ತಿಯೋರ್ವ ಒನ್ ವೇ ರಸ್ತೆಯಲ್ಲಿ ಬರುತ್ತಿದ್ದುದ್ದನ್ನು ಕಂಡು ಆ ವ್ಯಕ್ತಿಗೆ ಹೀಗೆ ಒನ್ ವೇನಲ್ಲಿ ಸಂಚರಿಸಬಾರದು. ಅದು ಅಪರಾಧ ಎಂದು ತಿಳಿ ಹೇಳಿದ್ದಾರೆ.
ಅದಕ್ಕೆ ಬೈಕ್ ಸವಾರ ಬುದ್ಧಿ ಹೇಳಿದ ವ್ಯಕ್ತಿ ಜಿಲ್ಲಾಧಿಕಾರಿ ಎಂಬುದನ್ನು ಅರಿಯದೇ ದುರ್ವರ್ತನೆ ತೋರಿದ್ದಾನೆ. ತಕ್ಷಣವೇ ಜಿಲ್ಲಾಧಿಕಾರಿ ದುರ್ನಡತೆ ತೋರಿದ ವ್ಯಕ್ತಿಯ ಫೋಟೋ ಮತ್ತು ವಾಹನದ ಫೋಟೋ ತೆಗೆದು ಎಸ್ಪಿ ಉಮಾ ಪ್ರಶಾಂತ್ ಅವರಿಗೆ ವಾಟ್ಸ್‌ಆ್ಯಪ್ ಮಾಡಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಪೊಲೀಸರು ದುರ್ವರ್ತನೆ ತೋರಿದ ಆರೋಪಿಗಾಗಿ ಶೋಧ ನಡೆಸಿದ್ದಾರೆ.
ಚನ್ನಗಿರಿಯಲ್ಲಿ ಲೋಕಾ ಗಾಳಕ್ಕೆ ಗ್ರಾಪಂ ಬಿಲ್ ಕಲೆಕ್ಟರ್: ಇಂದಿರಾ ಗ್ರಾಮೀಣ ವಸತಿ ನಿವೇಶನದಡಿ 2016ನೇ ಸಾಲಿನಲ್ಲಿ ಮಂಜೂರಾಗಿದ್ದ ವಸತಿ ಯೋಜನೆಯ ನಿವೇಶನದ ಹಕ್ಕುಪತ್ರ ನೀಡಲು 5 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ಗ್ರಾಪಂ ಬಿಲ್ ಕಲೆಕ್ಟರ್ ಹಾಗೂ ನೀರುಗಂಟಿ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ಚನ್ನಗಿರಿ ತಾ. ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಚನ್ನಗಿರಿ ತಾ. ದೇವರಹಳ್ಳಿ ಗ್ರಾಪಂ ಹಂಗಾಮಿ ಬಿಲ್ ಕರೆಕ್ಟರ್ ಲೋಕೇಶ ಹಾಗೂ ನೀರುಗಂಟಿ ಶೇಖರಪ್ಪ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಆರೋಪಿಗಳು. ದೇವರಹಳ್ಳಿ ಗ್ರಾಮದ ಆರ್.ಲಕ್ಷ್ಮಿದೇವಿ ಲಕ್ಷ್ಮೀಪತಿ ಎಂಬುವರಿಗೆ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ 2016ನೇ ಸಾಲಿನಲ್ಲಿ ವಸತಿ ನಿವೇಶನ ಮಂಜೂರಾಗಿದ್ದು, ಅದರ ಹಕ್ಕುಪತ್ರ ನೀಡಲು 5 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ, ನೀರುಗಂಟಿ ಶೇಖರಪ್ಪ ಸಿಕ್ಕಿ ಬಿದ್ದಿದ್ದಾರೆ.
ಫಲಾನುಭವಿ ಲಕ್ಷ್ಮೀದೇವಿ ಲಕ್ಷ್ಮೀಪತಿ ದೇವರಹಳ್ಳಿ ಗ್ರಾಪಂನಲ್ಲಿ ಜೂ.18ರಂದು ಹಕ್ಕುಪತ್ರದ ಬಗ್ಗೆ ವಿಚಾರಿಸಿದಾಗ ಬಿಲ್ ಕಲೆಕ್ಟರ್ ಲೋಕೇಶ ಹಕ್ಕುಪತ್ರ ನೀಡಲು 5 ಸಾವಿರ ರು. ಲಂಚದ ಬೇಡಿಕ ಇಟ್ಟಿದ್ದಾರೆ. ಲಂಚ ಕೊಡಲು ಇಷ್ಟವಿಲ್ಲದ ಲಕ್ಷ್ಮೀದೇವಿ ಗ್ರಾಪಂ ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ಮೊಕದ್ದಮೆ ನಂ:07/2025 ಕಲಂ 7(ಎ) ಪಿ.ಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018)ರ ರೀತಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪಿರ್ಯಾದಿ ಲಕ್ಷ್ಮೀದೇವಿ ಲಕ್ಷ್ಮೀಪತಿ ಅವರಿಗೆ ದೇವರಹಳ್ಳಿ ಗ್ರಾಪಂ ಕಚೇರಿಗೆ ಗುರುವಾರ ಲಂಚದ ಹಣ ತರುವಂತೆ ತಿಳಿಸಿದಂತೆ ಆ ಕಚೇರಿಗೆ ಹೋದಾಗ ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ ಹಾಗೂ ನೀರುಗಂಟಿ ಶೇಖರಪ್ಪ ಪಿರ್ಯಾದಿಗೆ 5 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟು, 5 ಸಾವಿರ ರು. ಹಣ ಪಡೆಯುತ್ತಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ