ಉತ್ತರ ಕರ್ನಾಟಕದಲ್ಲಿದೆ ಇಡೀ ಕರ್ನಾಟಕದ ಭವ್ಯ ಭವಿಷ್ಯ: ಸಂಸದ ಬೊಮ್ಮಾಯಿ

Published : Nov 04, 2024, 09:38 AM ISTUpdated : Nov 07, 2024, 06:40 PM IST
ಉತ್ತರ ಕರ್ನಾಟಕದಲ್ಲಿದೆ ಇಡೀ ಕರ್ನಾಟಕದ ಭವ್ಯ ಭವಿಷ್ಯ: ಸಂಸದ ಬೊಮ್ಮಾಯಿ

ಸಾರಾಂಶ

ಶ್ರೀಮಂತ ಸಂಸ್ಕೃತಿ, ಸಂಪನ್ಮೂಲ ಹೊಂದಿರುವ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿ ಉತ್ತರ ಕರ್ನಾಟಕದಲ್ಲಿ ಕರ್ನಾಟಕದ ಭವ್ಯ ಭವಿಷ್ಯ ಅಡಗಿದೆ. ಇದಕ್ಕೆ ಉತ್ತರ ಕರ್ನಾಟಕ ಸಾಧಕರ ಸಾಧನೆಗಳೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. 

ಮುಂಬೈ (ನ.04): ಶ್ರೀಮಂತ ಸಂಸ್ಕೃತಿ, ಸಂಪನ್ಮೂಲ ಹೊಂದಿರುವ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿ ಉತ್ತರ ಕರ್ನಾಟಕದಲ್ಲಿ ಕರ್ನಾಟಕದ ಭವ್ಯ ಭವಿಷ್ಯ ಅಡಗಿದೆ. ಇದಕ್ಕೆ ಉತ್ತರ ಕರ್ನಾಟಕ ಸಾಧಕರ ಸಾಧನೆಗಳೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಕನ್ನಡಪ್ರಭ ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್‌ ಮುಂಬೈನ ಪೋವಾಯಿಯ ಪ್ರತಿಷ್ಠಿತ ಸುಪ್ರೀಂ ಬ್ಯುಸಿನೆಸ್‌ ಪಾರ್ಕ್‌ನಲ್ಲಿ ಆಯೋಜಿಸಿದ್ದ "ಉತ್ತರ ಕರ್ನಾಟಕ ಸಾಧಕರು" ಪ್ರಶಸ್ತಿ ಪ್ರದಾನ ಮಾಡಿದ ಅವರು, ರವಿ ಹೆಗಡೆ ಅವರು ತಮ್ಮ ಭಾಷಣದಲ್ಲಿ ಕರ್ನಾಟಕ ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಕುರಿತು ಮಾತನಾಡಿದ್ದು, ಈ ಕನಸು ನನಸಾಗಲು ಉತ್ತರ ಕರ್ನಾಟಕದ ಪಾತ್ರ ಬಹುದೊಡ್ಡದು. ಕೃಷಿ ಕ್ಷೇತ್ರದಲ್ಲಿ ಅತೀ ಹೆಚ್ಚು ಉತ್ಪಾದನೆ ಉತ್ತರ ಕರ್ನಾಟಕದಲ್ಲಿದೆ. ಅದ್ಭುತ ಜಲ ಸಂಪನ್ಮೂಲ, ಉತ್ಕೃಷ್ಟ ಮಣ್ಣು, ಅರಣ್ಯ ಸಂಪತ್ತು, ಶಿಕ್ಷಣ ಸೇರಿದಂತೆ ಉತ್ತರ ಕರ್ನಾಟಕ ಶ್ರೀಮಂತ ನಾಡಾಗಿದೆ ಎಂದರು.

ಯಾವತ್ತೂ ನಮ್ಮತನದ ಮಹತ್ವ ನಮಗೆ ಗೊತ್ತಾಗುವುದಿಲ್ಲ. ಅದಕ್ಕಾಗಿಯೇ ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯೇ ಹುಟ್ಟಿಕೊಂಡಿದೆ. ನಮ್ಮತನ ಹಾಗೂ ನಮ್ಮ ಸಾಧನೆ ಹೊರಗೆ ಹೋದಾಗಲೇ ಅಥವಾ ಹೊರಗಿನವರು ಹೇಳಿದಾಗಲೇ ಗೊತ್ತಾಗಲಿದೆ. ಅದೇ ರೀತಿ ದೂರದ ಉತ್ತರ ಕರ್ನಾಟಕದಿಂದ ಮುಂಬೈಗೆ ಬಂದು ಪ್ರಶಸ್ತಿ ಪಡೆದಾಗ ಉತ್ತರ ಕರ್ನಾಟಕದ ಸಾಧಕರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ ಎಂಬುದನ್ನು ಅವರ ಮುಖದಲ್ಲಿ ಕಂಡಿದ್ದೇನೆ. ಉತ್ತರ ಕರ್ನಾಟಕವು ಸಮೃದ್ಧವಾಗಿ, ಶ್ರೀಮಂತವಾಗಿರುವುದಕ್ಕೆ ನಿಮ್ಮಂತಹ ಸಾಧಕರೇ ಕಾರಣವಾಗಿದ್ದು, ಸಾಧಕರಿಗೆ ಹಾಗೂ ಅವರ ಸಾಧನೆಗೆ ಹೃದಯದ ಅಂತರಾಳದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸುಸ್ಥಿರ ಮಾದರಿಗಳ ಮೂಲಕ ಸಮಾಜದ ಪ್ರಗತಿ ಸಾಧ್ಯ: ರವಿ ಹೆಗಡೆ

ಸಾಧನೆಗೆ ಪ್ರೇರಣೆ: ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ತನ್ನ ಗುರುತು ಸ್ಥಾಪನೆಗೆ ಇಡೀ ಜೀವನದಲ್ಲಿ ಹೋರಾಟ ಮಾಡುತ್ತಾನೆ. ಸಮಾಜದಲ್ಲಿ ತನ್ನನ್ನು ಗುರುತಿಸಬೇಕು, ಯಶಸ್ವಿ ಜೀವನ ನಡೆಸಬೇಕು. ಅದಕ್ಕಾಗಿ ಏನಾದರೂ ಸಾಧನೆ ಮಾಡಬೇಕು ಎಂದು ಪ್ರತಿಯೊಬ್ಬರು ಹಂಬಲಿಸುತ್ತಾರೆ. ಹಾಗೆಯೇ, ಎಲ್ಲರಿಗೆ ಒಂದು ಐಡೆಂಟಿಟಿ ಇರುತ್ತದೆ. ಆದರೆ, ಆ ಐಡೆಂಟಿಗೆ ಬೆಲೆ ಬರುವುದು ಸಮಗ್ರತೆ ಹಾಗೂ ಅರಿವು ಸೇರಿದಾಗ. ಇವುಗಳೊಂದಿಗೆ ಸದ್ವಿಚಾರ, ಉದ್ದೇಶ ಒಳ್ಳೆಯದ್ದು ಇದ್ದಾಗ ಮಾತ್ರ ದೊಡ್ಡ ಪ್ರಮಾಣದ ಯಶಸ್ಸು ದೊರೆಯಲಿದೆ. ಇದೀಗ ಪ್ರಶಸ್ತಿ ಸ್ವೀಕರಿಸಿದ ಪ್ರತಿಯೊಬ್ಬರಿಗೂ ದೊಡ್ಡ ಯಶಸ್ಸು ದೊರೆತಿದ್ದು ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಿದೆ ಎಂದರು.

ಪ್ರತಿಯೊಬ್ಬರಿಗೂ ಬದುಕಿನಲ್ಲಿಆತ್ಮಸಾಕ್ಷಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ರಾಜಕಾರಣಿಗಳಿಗೆ ಇರುವ ಆತ್ಮಸಾಕ್ಷಿ ಬೇರೇ. ರಾಜಕಾರಣಿಗಳ ಆತ್ಮಸಾಕ್ಷಿ ದೇವರ ಜಗಲಿ ಮೇಲೆ ಕಟ್ಟಿಡಲಾಗಿದೆ ಎಂದ ಅವರು, ಪ್ರಸ್ತುತ ಯಾರೊಬ್ಬರೂ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಯಾರು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತಾರೋ ಅವರು ನಿಜವಾದ ಸಾಧಕರು. ಪ್ರಾಂಜಲ ಮನಸ್ಸು ಹಾಗೂ ಆತ್ಮಸಾಕ್ಷಿ ಇದ್ದವರೇ ದೊಡ್ಡ ಸಾಧಕರು. ನಾರ್ಥ ಕರ್ನಾಟಕ ಅಚೀವರ್ಸ್‌ ಪ್ರಶಸ್ತಿ ಪಡೆದ ಪ್ರತಿಯೊಬ್ಬರು ಒಂದೊಂದು ಕ್ಷೇತ್ರದಲ್ಲಿ ಮಾಡಿರುವ ಕೆಲಸವು ಇವತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬೇಕು. ಶಿಕ್ಷಣ, ವೃತ್ತಿ, ಕೃಷಿ, ಉದ್ಯೋಗದಲ್ಲಿ ಸರ್ಕಾರಿ ರಂಗದಲ್ಲಿ ನಿಮ್ಮ ಮಾಡಿರುವ ಸಾಧನೆಯು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.

ಗುರುತಿಸಿದ್ದೇ ದೊಡ್ಡ ಸಾಧನೆ: ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಉತ್ತರ ಕರ್ನಾಟಕದ ಸಾಧಕರನ್ನು ಗುರುತಿಸಿ ದೂರದ ಮುಂಬೈಗೆ ಕರೆ ತಂದು ಪ್ರಶಸ್ತಿ ನೀಡುತ್ತಿರುವುದೇ ಅವರ ದೊಡ್ಡ ಸಾಧನೆ. ಸ್ಥಳೀಯ ಪರಿಸರದಲ್ಲಿ ಎಲೆ ಮರೆ ಕಾಯಿಯಂತೆ ಇದ್ದ ನಿಮ್ಮನ್ನು ಕನ್ನಡಪ್ರಭ, ಸುವರ್ಣ ನ್ಯೂಸ್‌ ಗುರುತಿಸುತ್ತಾರೆ ಎಂದುಕೊಂಡಿದ್ದಾರಾ? ನಿಮ್ಮ ಸಾಧನೆ ಮೂಲಕ ನಿಮ್ಮ ಗುರುತಿಸುವ ಕೆಲಸ ಮಾಡಿ ಇತರರಿಗೆ ಪ್ರೇರಣೆ ನೀಡಿರುವುದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ ಪ್ರಮುಖ ಉದ್ದೇಶ. ಸಮಾಜದಿಂದ ಪಡೆದ ಕ್ರೆಡಿಟ್‌ನ್ನು ಕೊನೆಯಲ್ಲಿ ಸಮಾಜಕ್ಕೆ ಡೆಬಿಟ್‌ ಮಾಡಿ ಹೋಗುವ ಮೂಲಕ ಬದುಕಿನ ಬ್ಯಾಲೆನ್ಸ್‌ ಶೀಟ್‌ನ್ನು ತುಂಬಿಸಿಕೊಂಡಿದ್ದೀರಿ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧಕ ಎಂದು ವಿವೇಕಾನಂದರು ಹೇಳಿದ್ದು, ಅವರು ಹೇಳಿದ ಮಾತಿನ ದಾರಿಯಲ್ಲಿ ನಡೆದರೆ ಹಾಗೂ ಅಧಿಕಾರಕ್ಕಿಂತ ಸೇವೆ ದೊಡ್ಡದು ಎಂದು ತಿಳಿದು ಜೀವನ ಮಾಡುವದು ಮತ್ತು ಸಮಾಜಕ್ಕಾಗಿ ತಮ್ಮ ಅಂತಃಕರಣ ಮಿಡಿದರೆ ತಮ್ಮ ಜೀವನ ಸಾರ್ಥಕವಾಗಲಿದೆ ಎಂದು ಸಾಧಕರನ್ನು ಉದ್ದೇಶಿಸಿ ಮಾತನಾಡಿದರು.

ನಾನು ಅಪ್ಪಟ ಕನ್ನಡಪ್ರಭ ಅಭಿಮಾನಿ. ತುರ್ತು ಪರಿಸ್ಥಿತಿ ಸಮಯದಲ್ಲಿ ನಿರ್ಬಿಡೆ, ನಿರ್ಭೀತಿಯಿಂದ ಕನ್ನಡಪ್ರಭ ವರದಿ ಮಾಡಿದೆ. 80ರ ದಶಕದಲ್ಲಿ ಟೆ.ಜೆ. ಎಸ್‌. ಜಾರ್ಜ್‌ ಮತ್ತು ಅರುಣ ಶೌರಿ ನೇತೃತ್ವದಲ್ಲಿ ಬಂಡವಾಳಿ ಶಾಹಿ ವಿರುದ್ಧ ನಿರಂತರ ವೈಚಾರಿಕ ಹೋರಾಟ ಮಾಡಿದ ಸಂಸ್ಥೆ ಇದು. ಜಾರ್ಜ್‌ ಅವರ ಲೇಖನಗಳು ಇನ್ನೂ ಮನದಲ್ಲಿವೆ. ಶೌರಿ ಅವರ ಬದ್ಧತೆ ಇವತ್ತೂ ನನಗೆ ಮಾರ್ಗದರ್ಶನ ಎಂದ ಬಸವರಾಜ ಬೊಮ್ಮಾಯಿ ಅವರು, 90ರ ದಶಕದಲ್ಲಿ ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣದಿಂದ ಇಡೀ ದೇಶ, ಜಗತ್ತು ಬದಲಾಗಿದೆ. ಈ ಮೂರರಲ್ಲಿ ಮಧ್ಯೆ ಅಂತಃಕರಣ ಕಡಿಮೆಯಾಗಿದೆ. ಇವತ್ತು ಸಮಾಜಕ್ಕೆ ಅಂತಃಕರಣದ ಅಗತ್ಯವಾಗಿದೆ. ಇದಕ್ಕಾಗಿ ಪ್ರತಿಯೊಬ್ಬರು ಅಂತಃಕರಣ ಬೆಳೆಸಿಕೊಳ್ಳಿ ಎಂದರು.

ಉತ್ತರ ಕರ್ನಾಟಕ ಸಾಧಕರಿಗೆ ಮುಂಬೈಯಲ್ಲಿ ಪ್ರಶಸ್ತಿ: ಬೊಮ್ಮಾಯಿ, ನಟ ನವೀನ ಶಂಕರರಿಂದ ಪ್ರದಾನ

ಅಭಿಯಾನ ಮುಂದುವರಿಯಲಿ: ಕನ್ನಡಪ್ರಭ, ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಅವರ ನೇತೃತ್ವದಲ್ಲಿ ನಾನು ಮುಖ್ಯಮಂತ್ರಿ ಇದ್ದಾಗ ಉತ್ತರ ಕರ್ನಾಟಕದ ಏಳು ಅದ್ಭುತಗಳ ಹುಡುಕುವಿಕೆ ಹಾಗೂ ವನ್ಯಜೀವಿ ಸಂರಕ್ಷಣಾ ಅಭಿಯಾನ ಪ್ರಯೋಗ ಯಶಸ್ವಿಯಾದವು. ಈ ಪೈಕಿ ಉತ್ತರಕರ್ನಾಟಕದ ಏಳು ಅದ್ಭುತಗಳು ಅಭಿಯಾನವನ್ನು ಮತ್ತೇ ಪ್ರಾರಂಭಿಸಬೇಕು. ಉತ್ತರ ಕರ್ನಾಟಕ ಶ್ರೀಮಂತವಾಗಿದೆ. ನಮ್ಮ ಹಿರಿಯರು ಕಲೆ, ಸಂಸ್ಕೃತಿ, ಸಂಸ್ಕಾರ ಬಿಟ್ಟು ಹೋಗಿದ್ದಾರೆ. ಅವರ ಮಾಡಿದ ಸಾಧನೆಗಳ ಕುರುಹುಗಳು ಎಲ್ಲೆಡೆ ಇವೆ. ಆದ್ದರಿಂದ ಈ ಅಭಿಯಾನ ಮುಂದುವರಿಸಲು ವೇದಿಕೆಯಲ್ಲಿ ಬೊಮ್ಮಾಯಿ ಅವರು ರವಿ ಹೆಗಡೆ ಅವರಲ್ಲಿ ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ - ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್