ಸಮಾಜದಲ್ಲಿ ಇಂದಿಗೂ ಸಮ ಸಮಾಜ ಅನುಷ್ಠಾನವಾಗಿಲ್ಲ ಹಾಗೂ ಮೇಲು ಕೀಳೆಂಬ ಭಾವನೆಯೂ ದೂರವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.
ನಂಜನಗೂಡು (ಫೆ.08): ಸಮಾಜದಲ್ಲಿ ಇಂದಿಗೂ ಸಮ ಸಮಾಜ ಅನುಷ್ಠಾನವಾಗಿಲ್ಲ ಹಾಗೂ ಮೇಲು ಕೀಳೆಂಬ ಭಾವನೆಯೂ ದೂರವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು. ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಮಾತನಾಡಿದ ಅವರು, ಸಂಪತ್ತು ಅಧಿಕಾರ ಒಬ್ಬರ ಕೈಲಿ ಕೇಂದ್ರೀಕೃತವಾಗದೆ, ಸಮಾಜದಲ್ಲಿನ ಎಲ್ಲರಿಗೂ ಸಮಾನತೆ ಸಿಗುವಂತಾಗಬೇಕು. ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶ್ತಿ ಬಂದಾಗ ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗಲಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಕೆಲವು ಪಟ್ಟಭದ್ರರು ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿದ್ದರೂ ಸಂವಿಧಾನ ನಮ್ಮೆಲ್ಲರನ್ನೂ ರಕ್ಷಣೆ ಮಾಡುತ್ತಿದೆ.
ಹೀಗಾಗಿ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ವೇದಿಕೆಯಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬನಾದ ನಾನು, ಹಿಂದುಳಿದ ವರ್ಗದವರು ಕುಳಿತಿದ್ದೇವೆ ಎಂದರೆ ಇದಕ್ಕೆ ಸಂವಿಧಾನ ಕಾರಣ ಎಂದು ಸೂಚ್ಯವಾಗಿ ತಿಳಿಸಿದರು. ಇತ್ತೀಚೆಗೆ ಕೆಲವು ಪಟ್ಟಭದ್ರರು ಸಮಾಜದಲ್ಲಿ ಜಾತಿಯ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಾವು ಮನುಷ್ಯರು, ನಮ್ಮ ನಡುಎ ದ್ವೇಷ ಭಾವನೆ ಸರಿಯಲ್ಲ. ಸರ್ವಜನಾಂಗದ ಶಾಂತಿಯ ತೋಟದಂತೆ ಸಮಾಜ ಇರಬೇಕು ಎಂದು ಕುವೆಂಪು ಹೇಳಿದ್ದಾರೆ ಎಂದರು. ಎಲ್ಲರೂ ಹುಟ್ಟುವಾಗ ವಿಶ್ವಮಾನವರು, ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ. ಜ್ಞಾನ ವಿಕಾಸ ಆಗಬೇಕು, ಜ್ಞಾನ ಯಾರ ಸ್ವತ್ತಲ್ಲ.
2ನೇ ಅತ್ಯಧಿಕ ತೆರಿಗೆ ಕಟ್ಟುವ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಸಿಎಂ ಸಿದ್ದರಾಮಯ್ಯ
ಜ್ಞಾನ ಒಬ್ಬರ ಸ್ವತ್ತಾಗಿದ್ದರೆ ಅಂಬೇಡ್ಕರ್ ಸಂವಿಧಾನ ರಚಿಸಲು ಸಾಧ್ಯ ಆಗುತ್ತಿರಲಿಲ್ಲ, ವಾಲ್ಮೀಕಿ ಅವರು ರಾಮಾಯಣ ಬರೆಯಲು, ವ್ಯಾಸರು ಮಹಾಭಾರತವನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದರು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುತ್ತೂರು ಮಠ ದೇಶವೇ ಗುರುತಿಸುವ ಕೆಲಸ ಮಾಡಿದೆ. ಆ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಕೆಲಸವನ್ನು ಶ್ರೀಮಠ ಮಾಡಿದೆ. ಸುತ್ತೂರು ಶ್ರೀಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಚಿವರು, ಶಾಸಕರೊಂದಿಗೆ ಡಿಕೆಶಿ ಸಭೆ: ಕಾರಣವೇನು?
ಜೆಎಸ್ಎಸ್ ತಾಂತ್ರಿಕ ಕಾಲೇಜು ಲಕ್ಷಕ್ಕೂ ಹೆಚ್ಚು ಎಂಜಿನಿಯರ್ ಗಳನ್ನು ನೀಡಿದ್ದು, ವೈದ್ಯಕೀಯ ಕಾಲೇಜುಗಳ ಮೂಲಕ ಸಾವಿರಾರು ಡಾಕ್ಟರ್ ಹೊರ ಹೊಮ್ಮಿದ್ದಾರೆ. ಸ್ವಾಮೀಜಿಯವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಸುತ್ತೂರು ಶ್ರೀಮಠ ಕೇವಲ ಧಾರ್ಮಿಕ, ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ಕೊಡುಗೆ ನೀಡಿದೆ. ಅದರಂತೆ ದೇಸಿ ಆಟಗಳನ್ನು ಉಳಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಕೆ.ಜೆ. ಜಾರ್ಜ್, ಡಾ.ಎಂ.ಸಿ. ಸುಧಾಕರ್, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮೊದಲಾದವರು ಇದ್ದರು.