
ಬೆಂಗಳೂರು (ಜೂ.120): ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭಿಸಲಾಗಿದ್ದು, ಸೋಮವಾರ ಮಹದೇವಪುರ ವಲಯ ವ್ಯಾಪ್ತಿಯ ದೊಡ್ಡಾನೆಕುಂದಿ ಮತ್ತು ಹೊಯ್ಸಳ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ತೆರವು ಮಾಡಿ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಕಾರ್ಯಾಚರಣೆ ವೇಳೆ ಸ್ಥಳೀಯ ನಿವಾಸಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆ ಯಿತು.
ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭಗೊಂಡಿದೆ. ದೊಡ್ಡಾನೆಕುಂದಿಯ ಫರ್ನ್‌ಸಿಟಿಯಲ್ಲಿ 200 ಮೀ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣಗೊಂಡಿದ್ದ ಕಾಂಪೌಂಡ್ ಗೋಡೆ, ಕ್ಲಬ್‌ಹೌಸ್ ಕಟ್ಟಡ, ಸ್ವಿಮ್ಮಿಂಗ್ ಪೂಲ್, ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಅದಕ್ಕೂ ಮುನ್ನ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆ, ಫರ್ನ್‌ಸಿಟಿ ನಿವಾಸಿಗಳು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಕಾರ್ಯಾಚರಣೆ ನಡೆಸದಂತೆ ಅಧಿಕಾರಿಗಳಿಗೆ ತಡೆಯೊಡ್ಡಿದರು.
Bengaluru: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಸ್ಥಗಿತ
ಖಾಲಿ ಇರುವ ಜಾಗದಲ್ಲಿ ಮೊದಲು ಕಾರ್ಯಾಚರಣೆ ಮಾಡಿ ಒತ್ತುವರಿ ತೆರವು ಮಾಡಿ, ರಾಜಕಾಲುವೆ ನಿರ್ಮಿಸಿ. ಆನಂತರ ಕಟ್ಟಡಗಳನ್ನು ತೆರವು ಮಾಡಿ ಎಂದು ಆಗ್ರಹಿಸಿದರು. ಬಿಬಿಎಂಪಿ ಅಧಿಕಾರಿಗಳು ಅದಕ್ಕೊಪ್ಪದೆ, ನಮಗೆ ಆದೇಶ ಬಂದಿರುವ ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕಾರ್ಯಾಚರಣೆ ಮುಂದುವರಿಸಿದರು.
ಫರ್ನ್ ಸಿಟಿ ನಂತರ ಮುಂದುವರಿದು ಖಾಲಿ ಸ್ಥಳ, ರಾಜಣ್ಣ ಹೋಟೆಲ್ ಕಟ್ಟಡ, ಶೆಡ್‌ಗಳನ್ನು ಬಿಬಿಎಂಪಿ ತೆರವುಗೊಳಿಸಿದರು. ಈ ವೇಳೆ ಭಗಿನಿ ಹೋಟೆಲ್ ತೆರವು ಮಾಡಲು ಮುಂದಾದಾಗ, ಹೋಟೆಲ್‌ನವರು ಒತ್ತು ವರಿ ಸ್ಥಳವನ್ನು ತಾವೇ ತೆರವು ಮಾಡಿಕೊಡುವುದಾಗಿ ಮನವಿ ಮಾಡಿದರು. ಅದಕ್ಕೆ ಬಿಬಿಎಂಪಿ ಅಧಿಕಾರಿಗಳು ಶೀಘ್ರದಲ್ಲಿ ತೆರವು ಮಾಡಿ ರಾಜಕಾಲುವೆ ಆಗ ಬಿಟ್ಟುಕೊಡುವಂತೆ ಸೂಚಿಸಿದರು ಎಂದು ಮಹದೇವಪುರ ವಲಯ ಮುಖ್ಯ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದರು.
ಕೆಆರ್ ಪುರದ ಹೊರಮಾವು ಉಪ ವಿಭಾಗದ ಹೊಯ್ಸಳ ನಗರ ಮುಖ್ಯ ರಸ್ತೆ ಪಕ್ಕದಲ್ಲಿನ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ 4 ಮಳಿಗೆಗಳು ಹಾಗೂ 1 ಕಾರು ಸವೀರ್‍ಸ್ ಸ್ಟೇಷನ್ ತೆರವು ಮಾಡಲಾಯಿತು.
ಬೊಮ್ಮನಹಳ್ಳಿ ವಲಯದ ಅಂಜನಾಪುರ ವಾರ್ಡ್‌ನ ನಾರಾಯಣ ನಗರದಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟಿದ್ದ ಜಾಗ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ 6 ಮಳಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಿದರು.
ತಡೆಯಾಜ್ಞೆ: ಫರ್ನ್‌ಸಿಟಿ ಕಾರಾರಯಚರಣೆ ಮೊಟುಕು
ಸೋಮವಾರ ಬೆಳಗ್ಗೆ ಫರ್ನ್‌ಸಿಟಿ ತೆರವು ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ, ಮಧ್ಯಾಹ್ನದ ವೇಳೆ ಫರ್ನ್‌ಸಿಟಿ ನಿವಾಸಿಗಳು ಹೈಕೋರ್ಚ್‌ನಿಂದ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾ ದರು. ಹೀಗಾಗಿ ಅಧಿಕಾರಿಗಳು ಫರ್ನ್‌ಸಿಟಿಯಿಂದಾಗಿರುವ ಒತ್ತುವರಿಯ ತೆರವು ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸುವಂತಾಯಿತು. ಅಲ್ಲದೆ, ಸದ್ಯ ತೆರವು ಮಾಡಲಾಗಿರುವ ಜಾಗದಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಶೀಘ್ರದಲ್ಲಿ ಕಾಲುವೆ ನಿರ್ಮಿಸುವುದಾಗಿ ಬಿಬಿಎಂಪಿ ಬೃಹತ್ ಮಳೆನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ತಿಳಿಸಿದರು.
ಬೆಂಗಳೂರು: 15 ದಿನದಲ್ಲಿ 100 ಕಡೆ ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಗುರಿ
ಹೆಚ್ಚುವರಿ ಪೊಲೀಸರ ನಿಯೋಜನೆ
ಸ್ಥಳೀಯರು ಹಾಗೂ ಮಾಜಿ ಶಾಸಕರ ಗದ್ದಲ ಹೆಚ್ಚುತ್ತಿದ್ದಂತೆ ಮಹದೇವಪುರ ವಲಯ ಅಧಿಕಾರಿಗಳು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮಾಹಿತಿ ನೀಡಿದರು. ಆಗ ತುಷಾರ್ ಗಿರಿನಾಥ್ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರಿಗೆ ಕರೆ ಮಾಡಿ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ತಿಳಿಸಿದರು. ಕೊನೆಗೆ ಹೊರಮಾವು ಸೇರಿ ಇನ್ನಿತರ ಪೊಲೀಸ್ ಠಾಣೆಗಳಿಂದ ಸಿಬ್ಬಂದಿ ನಿಯೋಜಿಸಿ, ಕಾರ್ಯಾಚರಣೆ ಮುಂದುವರಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ