ಫಾರಿನ್‌ನಲ್ಲಿ ಓದಿದ ಕನ್ನಡಪ್ರಭ ರೈತರತ್ನ ವಿಜೇತನ ಪುತ್ರಿಗೆ ಹೊಲದಲ್ಲಿ ವಿವಾಹ!

Kannadaprabha News   | Kannada Prabha
Published : Jun 02, 2025, 12:11 PM IST
Wedding

ಸಾರಾಂಶ

ಮದುವೆಗಾಗಿ ಪಟ್ಟಣ, ನಗರ ಪ್ರದೇಶದ ಛತ್ರಗಳಿಗೆ ಎಡತಾಕುವವರ ನಡುವೆ ಜಮೀನಿನಲ್ಲೇ ಅದ್ಧೂರಿಯಾಗಿ ಮದುವೆ‌ ಮಾಡುವುದು ಹೇಗೆ ಎಂದು ಈ ರೈತ ತೋರಿಸಿದ್ದಾರೆ.

ದೇವರಾಜು ಕಪ್ಪಸೋಗೆ

ಚಾಮರಾಜನಗರ (ಜೂ.02): ಮದುವೆಗಾಗಿ ಪಟ್ಟಣ, ನಗರ ಪ್ರದೇಶದ ಛತ್ರಗಳಿಗೆ ಎಡತಾಕುವವರ ನಡುವೆ ಜಮೀನಿನಲ್ಲೇ ಅದ್ಧೂರಿಯಾಗಿ ಮದುವೆ‌ ಮಾಡುವುದು ಹೇಗೆ ಎಂದು ಈ ರೈತ ತೋರಿಸಿದ್ದಾರೆ. ಬರೀ ಅದ್ಧೂರಿತನದಿಂದಲ್ಲ ದೇಸಿತನದಿಂದ, ನೆಲದ ಮಗನಾಗಿ, ಉಳುವ ಯೋಗಿಯಾಗಿ ಹಸಿರಿನ‌ ನಡುವೆ‌‌ ಮಗಳಿಗೆ ನವೋಲ್ಲಾಸದ ನವಜೀವನ ತಂದಿದ್ದಾರೆ. ಹೌದು..., ಇದು ಸುಸ್ಧಿರ ಕೃಷಿಗಾಗಿ ಕನ್ನಡಪ್ರಭ ರೈತರತ್ನ ಪುಶಸ್ತಿ ಪುರಸ್ಕೃತ, ಗಡಿ ಜಿಲ್ಲೆಯ ಕಾಡಂಚಿನ ಗ್ರಾಮದ ರೈತನ ಪುತ್ರಿಯ ರಾಯಲ್ ವಿವಾಹ. ಮಲೆ ಮಹದೇಶ್ವರ ಬೆಟ್ಟದ ಸಾಲುಗಳ ನಿಸರ್ಗದ ಮಡಿಲಿನಲ್ಲಿ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಲಂಡನ್‌ನಲ್ಲಿ ಕಾನೂನು ಪದವಿ ಪಡೆದಿರುವ ಪುತ್ರಿ ಮದುವೆಯನ್ನು ಪಿ. ದಯಾನಂದ ಹೊಲದಲ್ಲಿ ನಡೆಸಲಿದ್ದಾರೆ.

ಹಳ್ಳಿಗಾಡಿನವರೇ ಸಾಲ ಸೋಲವಾದ್ರು ಸರಿ ಎಂದು ದೊಡ್ಡ ದೊಡ್ಡ ನಗರಿ, ವಿದೇಶದಲ್ಲಿ ಮದುವೆ ಮಾಡಿಸುವ ಈ ಕಾಲದಲ್ಲಿ ಲಂಡನ್‌ನಲ್ಲಿ ವ್ಯಾಸಂಗ ಮುಗಿಸಿರುವ ಪುತ್ರಿ ವಿವಾಹವನ್ನು ಹನೂರು ತಾಲೂಕಿನ ಚಿಂಚಹಳ್ಳಿ ಗ್ರಾಮದ ರೈತ ಪಿ. ದಯಾನಂದ ತಮ್ಮ ಹೊಲದಲ್ಲೇ ಜೂ. 2ರಂದು ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರೈತ ಬರೀ ಬೆ‍ಳೆ ಬೆಳೆಯುತ್ತಾ ಕುಳಿತರೆ ಸಾಲದು, ತನ್ನ ಕೃಷಿ ಚಟುವಟಿಕೆಯನ್ನು ಪ್ರತಿಯೊಬ್ಬರಿಗೂ ಪರಿಚಯಿಸಬೇಕು. ಅದರ ಮೂಲಕ ರೈತನ ಕೃಷಿ ಭೂಮಿಯೂ ಕೃಷಿ ಪ್ರವಾಸೋದ್ಯಮ ತಾಣವಾಗಬೇಕು ಎಂಬ ಪರಿಕಲ್ಪನೆ ಹುಟ್ಟು ಹಾಕಿ, ಕಿಸಾನ್‌ ಅಗ್ರೋ ಟೂರಿಸಂ ಡೆವಲಪ್ಮೆಂಟ್‌ ಕಂಪನಿ ಮೂಲಕ ರೈತರನ್ನು ಕೃಷಿ ಪ್ರವಾಸೋದ್ಯಮಿಗಳಾಗಿಸಲು ಹೊರಟಿರುವ ಪಿ. ದಯಾನಂದ ತಮ್ಮ ಪುತ್ರಿ ವಿವಾಹಕ್ಕೆ ಭಾಗವಹಿಸುವವರಿಗೆ ಕೃಷಿ ಪ್ರವಾಸೋದ್ಯಮ ಮಾಡಿಸಲು ಮುಂದಾಗಿದ್ದಾರೆ.

ರಾಯಲ್ ಮದುವೆಯಲ್ಲಿ ಏನುಂಟು- ಏನಿಲ್ಲ?: ತಮ್ಮ ಹೊಲವನ್ನು ನಿಸರ್ಗದ ಮಡಿಲಿನಂತೆ ಸೃಷ್ಠಿ ಮಾಡಿದ್ದು, ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಎಲ್ಲೆಡೆಯಿಂದ ಸಂಗ್ರಹಿಸಿ ತಂದು, ಸಂರಕ್ಷಣೆ ಮಾಡುವ ಮೂಲಕ ಹೊಲದಲ್ಲೇ ಕಾಡನ್ನೇ ಬೆಳೆಸಿದ್ದಾರೆ. ಅಲ್ಲಿ ದುಂಬಿಗಳ ಝೇಂಕಾರ, ಚಿಟ್ಟೆ ಪಕ್ಷಿಗಳ ಕಲರವ ಕೇಳುವಂತಹ ವಾತವರಣ ನಿರ್ಮಾಣಮಾಡಿದ್ದು, ಅಲ್ಲೇ ತಮ್ಮ ದ್ವೀತಿಯ ಪುತ್ರಿ ರಶ್ಮಿ ದಯಾನಂದ ಅವರನ್ನು ಬೆಂಗಳೂರಿನ ಕುಬೇರ್‌ ಅವರಿಗೆ ಧಾರೆ ಎರೆದುಕೊಡಲಿದ್ದಾರೆ. ಕೃಷಿ ಪ್ರವಾಸೋದ್ಯಮದಲ್ಲಿ ಅಸಕ್ತಿ ಹೊಂದಿರುವ ಪಿ. ದಯಾನಂದ ಅವರು ಹಿಂದೆ ಮದುವೆಗಳು ಹಳ್ಳಿಯ ಮನೆಗಳಲ್ಲಿ ನೆಂಟರಿಷ್ಟರ ಸಮ್ಮುಖದಲ್ಲಿ ನಡೆಸುತ್ತಿದ್ದವು. ಇದೀಗ ನಮ್ಮ ಮಗಳ ಮದುವೆ ನಾನು ಹತ್ತಾರು ವರ್ಷಗಳಿಂದ ಶ್ರಮಪಟ್ಟು ನೆಟ್ಟಿರುವ ಮರಗಿಡಗಳು, ಪಕ್ಷಿಗಳ ಕಲರವ, ದುಂಬಿಯ ಝೇಂಕಾರದೊಂದಿಗೆ ಇಲ್ಲೇ ಸಿಗುವ ಸ್ಧಳೀಯ ಸಸ್ಯಗಳ ಅಲಂಕಾರರೊಂದಿಗೆ ನಡೆಯಲಿದೆ. ಮದುವೆಗೆ ಬರುವ ಬಂಧುಬಾಂಧವರು, ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣೆ, ರೇಷ್ಮೆ, ಹಾಗೂ ಅರಣ್ಯ ಕೃಷಿಯನ್ನು ನೋಡಿ ಸಂಭ್ರಮಿಸುವ ಮೂಲಕ ಮದುವೆಯಲ್ಲಿ ಭಾಗಿಯಾಗಲಿ ಎಂಬ ಉದ್ದೇಶದಿಂದ ಹೊಲದಲ್ಲೇ ಅದ್ಧೂರಿ ವಿವಾಹಕ್ಕೆ ನಾಂದಿ ಹಾಡಿದ್ದಾರೆ.

ಮದುವೆ ಜೊತೆಗೆ ಕೃಷಿ ಜ್ಞಾನ: ಮದುವೆಗೆ ಬರುವವರು ಸಾವಿರಾರು ಸಸ್ಯ ವರ್ಗಗಳ ಜೊತೆಗೆ ಹತ್ತಾರು ಬೆಳೆ ನೋಡಬಹುದಾಗಿದ್ದು, ನೂರಾರು ಬಗೆ ಬಗೆಯ ಹಣ್ಣುಗಳನ್ನು ಸವಿಯಬಹುದಾಗಿದೆ. ಬರಗೂರ್, ಹಳ್ಳಿಕಾರ್, ತಳಿ ಹಸುಗಳು, ಕುರಿ ಕೋಳಿ, ಮೇಕೆ ಹಾಗೂ ಕತ್ತೆಗಳನ್ನು ಸಾಕುತ್ತಿರುವುದನ್ನು ನೋಡಬಹುದು. ಎಣ್ಣೆ ಘಟಕ, ಸುಗಂಧ ತಯಾರಿಕಾ ಘಟಕವೂ ಇಲ್ಲಿದ್ದು, ತೋಟಕ್ಕೆ ಭೇಟಿ ನೀಡುವವರಿಗೆ ಕೃಷಿ ತಿಳುವಟಿಕೆ ಮೂಡಿಸಬೇಕು ಎಂಬ ಉದ್ದೇಶದಿಂದ ವಿವಿಧ ಬಗೆಯ ಪರಿಕರಗಳ ಜೊತೆಗೆ ಎತ್ತಿನ ಗಾಡಿ, ಕುದುರೆಗಾಡಿ, ವಿವಿಧ ಮಾದರಿಯ ಸ್ಕೂಟರ್‌ಮತ್ತು ಕಾರುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಸುಸ್ಥಿರ ಕೃಷಿಯ ಮೂಲಕ ಕನ್ನಡಪ್ರಭ ರೈತ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ದಯಾನಂದ್ ತಮ್ಮ‌‌ ಜಮೀನನ್ನೇ ಕೃಷಿ ಪ್ರವಾಸಿ ಕ್ಷೇತ್ರವಾಗಿ ಮಾಡಿದ್ದಾರೆ. ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ,ಜೇನು,ಅರಣ್ಯ ಕೃಷಿ ಮಾಡುತ್ತಿದ್ದು ಮಣ್ಣು ಹಾಗೂ‌ ನೀರಿನ‌ ಸಂರಕ್ಷಣೆಗೂ ಒತ್ತು ಕೊಟ್ಟಿದ್ದಾರೆ‌ ರೈತ ದಯಾನಂದ.
- ರೈತ ರತ್ನ ದಯಾನಂದ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌