ಪಶುವೈದ್ಯ ನೇಮಕ ಅಕ್ರಮದಲ್ಲೂ ಶಿವಶಂಕರಪ್ಪ ಸಾಹುಕಾರ್‌ ಎ-1! ರ್‍ಯಾಂಕ್‌ ವಿಜೇತರು ಫೇಲ್‌, ಸಾಧಾರಣ ವಿದ್ಯಾರ್ಥಿಗಳು ಪರೀಕ್ಷೇಲಿ ಪಾಸ್!

Kannadaprabha News   | Kannada Prabha
Published : Jul 26, 2026, 05:38 AM IST
Test at resort Rs 80L bribe Karnataka veterinary Doctors allege KPSC recruitment scam

ಸಾರಾಂಶ

ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು (ಜು.26): ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ್ದ ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವಜನಪಕ್ಷಪಾತ ಆರೋಪ ಸಂಬಂಧ ಈಗಾಗಲೇ ಅಮಾನತಾಗಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪಶು ವೈದ್ಯಾಧಿಕಾರಿ ಮಂಜುನಾಥ ಎಂಬುವರು ನೀಡಿದ ದೂರಿನನ್ವಯ ಶಿವಶಂಕರಪ್ಪಅವರನ್ನೇ ಮೊದಲ ಆರೋಪಿ ಮಾಡಲಾಗಿದೆ.

ದೂರಿನಲ್ಲಿ ಶಿವಶಂಕರಪ್ಪ ಅವರ ಸಂಬಂಧಿ ಸೂಗುರೇಶ್‌ ಜಾಕ ಸೇರಿ 24 ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಓಎಂಆರ್‌ ಶೀಟ್‌ ಟ್ಯಾಂಪರಿಂಗ್‌ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಒಂದೊಂದು ಹುದ್ದೆಗೂ ಮದ್ಯವರ್ತಿಗಳ ಮೂಲಕ 80 ಲಕ್ಷ ರು.ಗೆ ಬೇಡಿಕೆ ಇಟ್ಟಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ.

ದೂರಿನಲ್ಲಿ ಏನಿದೆ?:

ಕೆಪಿಎಸ್‌ಸಿಯು 2026ರ ಜುಲೈ 17ರಂದು ಪಶು ವೈದ್ಯಾಧಿಕಾರಿಗಳ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಕೆಪಿಎಸ್‌ಸಿಯ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಸಂಬಂಧಿ ಅಭ್ಯರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತೀರ್ಣ ಹೊಂದಿದ್ದಾರೆ. ಕೆಪಿಎಸ್‌ಸಿಯು ಪಶುವೈದ್ಯಾಧಿಕಾರಿಗಳ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ, ಪದವಿಯಲ್ಲಿ ಚಿನ್ನದ ಪದಕ ಪಡೆದ ಅಭ್ಯರ್ಥಿಗಳು, ಯುಪಿಎಸ್‌ಸಿ ನಡೆಸುವ ಐಎಫ್ಎಸ್ ಪರೀಕ್ಷೆಯಲ್ಲಿ ಉತೀರ್ಣರಾದ ಅಭ್ಯರ್ಥಿಗಳು 350 ಅಂಕಗಳನ್ನೂ ಪಡೆಯಲು ವಿಫಲರಾಗಿದ್ದಾರೆ.

ಆದರೆ ಪಶುವೈದ್ಯ ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿರುವ ಅಭ್ಯರ್ಥಿಗಳೇ 400ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ಅನುಮಾನ ಮೂಡಿಸುವಂತಿದೆ. ಈ ಅನುಮಾನ ಪುಷ್ಟೀಕರಿಸುವಂತೆ ಸಾಹುಕಾರ್ ಎಸ್.ಶಿವಶಂಕರಪ್ಪನವರ ಸಂಬಂಧಿಕ ಅಭ್ಯರ್ಥಿಯಾದ ಸೂಗುರೇಶ್‌ ಜಾಕ ಎಂಬುವರು ಪದವಿಯಲ್ಲಿ 2 ಪರೀಕ್ಷೆಯಲ್ಲಿ ಅನುತೀರ್ಣಗೊಂಡು ಕಂಪಾರ್ಟ್‌ಮೆಂಟ್ ಪರೀಕ್ಷೆ(ಪೂರಕ ಪರೀಕ್ಷೆ)ಯಲ್ಲಿ ಉತ್ತೀರ್ಣಗೊಂಡು ಕನಿಷ್ಠ ಸಿಜಿಪಿಎಯೊಂದಿಗೆ ಪದವಿ ಮುಗಿಸಿದ್ದರೂ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭರ್ಜರಿ 450ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ಇದು ಭಾರೀ ಅನುಮಾನಕ್ಕೆ ಗ್ರಾಸವಾಗಿದೆ.

ಇದಲ್ಲದೆ ಈ ಅಭ್ಯರ್ಥಿಗಳ ಮೊಬೈಲ್ ಫೋನ್‌ಗಳು ಪರೀಕ್ಷೆಯ ಹಿಂದಿನ ದಿನ ಹಾಗೂ ಪರೀಕ್ಷೆಯ ದಿನದಂದು ಸ್ವಿಚ್ ಆಫ್ ಆಗಿವೆ. ಈ ಸಮಯದಲ್ಲಿ ಮಧ್ಯವರ್ತಿಗಳು ತಮ್ಮ ವಾಹನಗಳಲ್ಲಿ ಈ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ಹೊರರಾಜ್ಯ ಹಾಗೂ ಇತರೆ ಸ್ಥಳದಲ್ಲಿನ ಹೋಟೆಲ್‌ ಅಥವಾ ರೆಸಾರ್ಟ್‌ಗಳಲ್ಲಿ ತಂಗಿಸಿ ಅಲ್ಲಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ನೀಡಿ, ಅಭ್ಯರ್ಥಿಗಳಿಗೆ ತರಬೇತಿ ನೀಡಿ ಪರೀಕ್ಷಾ ಕೇಂದ್ರದ ಸಮೀಪಕ್ಕೆ ತಂದು ಬಿಟ್ಟಿರುತ್ತಾರೆ ಎಂಬ ಮಾಹಿತಿಯಿದೆ. ಅಂದು ಅವರ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿದ್ದ ಕಾರಣ ಈ ಅಭ್ಯರ್ಥಿಗಳು ಆ ದಿನ ಯಾವ ಸ್ಥಳಗಳಲ್ಲಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಹಲವು ಅಭ್ಯರ್ಥಿಗಳು ಪರೀಕ್ಷೆಗೆ ಹೋಗುವ ಮುನ್ನವೇ ಅಕ್ರಮದ ಸಿದ್ಧತೆ ನಡೆಸಿ, ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆಯಲ್ಲಿ ನೀಡಿದ ಓಎಂಆರ್ ಪ್ರತಿಯಲ್ಲಿ ಕೆಲವೇ ಕೆಲ ಪ್ರಶ್ನೆಗಳಿಗೆ ಉತ್ತರಿಸಿ, ಬಹುಪಾಲು ಪ್ರಶ್ನೆಗಳಿಗೆ ಉತ್ತರಿಸದೆ ಖಾಲಿ ಓಎಂಆರ್ ಪ್ರತಿ ನೀಡಿರುವುದನ್ನು ಕೆಲ ಅಭ್ಯರ್ಥಿಗಳು ಗಮನಿಸಿದ್ದಾರೆ ಎಂದು ಆರೋಪಿಸಲಾಗಿದೆ.

80 ಲಕ್ಷ ಹಣಕ್ಕೆ ಬೇಡಿಕೆ ಬಗ್ಗೆ ಉಲ್ಲೇಖ:

2026 ರ ಫೆ.12 ರಂದು ಕರ್ನಾಟಕ ಲೋಕಸೇವಾ ಆಯೋಗವು ಅರ್ಹತಾ ಪಟ್ಟಿ ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ ಕೇವಲ ಅಭ್ಯರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆ ಮಾತ್ರ ಇತ್ತು. ಅಭ್ಯರ್ಥಿಗಳ ವಿಳಾಸವಾಗಲಿ, ದೂರವಾಣಿ ಸಂಖ್ಯೆಯಾಗಲಿ ಅಥವಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಾಗಲಿ ಯಾವುದೂ ಇರಲಿಲ್ಲ. ಆದರೆ ಮಧ್ಯವರ್ತಿಗಳು ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಕರೆ ಮಾಡಿ ಅವರ ಹಲವು ಖಾಸಗಿ ಮಾಹಿತಿಗಳನ್ನು ನೀಡಿ, ಅವರನ್ನು ನಂಬಿಸಿ ಇನ್ನೂ ಮುಂದುವರೆದು ಓಎಂಆರ್‌ ಅಂಕಗಳನ್ನು ಸಹ ಅಭ್ಯರ್ಥಿಗಳಿಗೆ ತಿಳಿಸಿ, ತಾವು ಆಯ್ಕೆ ಪಟ್ಟಿಯ ಕೊನೆಯ ಹೆಸರಿಗಿಂತ ಇಂತಿಷ್ಟು ಅಂಕಗಳಿಂದ ಹಿಂದಿದ್ದೀರಿ, ನಾವು ಓಎಂಆ‌ರ್ ಪ್ರತಿ ಹೊರ ತಂದು ಸ್ವತಃ ನಿಮ್ಮ ಕೈಯಲ್ಲಿಯೇ ತಿದ್ದುಪಡಿ ಮಾಡಿಸಿ, ಉದ್ಯೋಗ ಕೊಡಿಸುವುದಾಗಿ ಹೇಳಿ ಸುಮಾರು 80 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಒಪ್ಪಿಕೊಂಡಲ್ಲಿ 40 ಲಕ್ಷ ರು. ಮುಂಗಡ ಪಾವತಿಸಿ, ಉದ್ಯೋಗ ಖಾತರಿಯಾದ ನಂತರ ಉಳಿದ ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಹಾಗೂ ಆಡಿಯೋ ದಾಖಲೆ ಸಾಕ್ಷಿಗಳು ಲಭ್ಯ ಇವೆ. ಈ ಕುರಿತು ಕೆಪಿಎಸ್‌ಸಿಗೆ ಕಳೆದ ಮೇ 29 ರಂದು ದೂರು ನೀಡಲಾಗಿದ್ದು, ಕೆಪಿಎಸಿಯು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ತನಿಖೆ ಮುಂದುವರಿದಿದೆ.

ಏನಿದು ಪ್ರಕರಣ?:

ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಗೋಲ್‌ಮಾಲ್ ನಡೆದು, ಒಂದು ಸರ್ಕಾರಿ ಹುದ್ದೆಯನ್ನು ಬರೋಬ್ಬರಿ 80 ಲಕ್ಷ ರು.ಗೆ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಮೊಹಮ್ಮದ್ ಆರಿಫ್ ಎಂಬ ಮಧ್ಯವರ್ತಿಯು ವಿದ್ಯಾರ್ಥಿ ಸಂಘಟನೆಯ ಮುಖಂಡ ಕಾಂತಕುಮಾ‌ರ್ ಹಾಗೂ ಮತ್ತೊಬ್ಬ ಯುವಕನ ಜತೆ ಫೋನ್ ಕರೆ ಮಾಡಿ ನೇರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಇದೀಗ ದೂರು ದಾಖಲಿಸಲಾಗಿದೆ.

ಕೆಪಿಎಸ್‌ಸಿ ಅಧಿಕಾರಿಗಳ ಕೈವಾಡ:

ಅಭ್ಯರ್ಥಿಗಳ ಖಾಸಗಿ ಮಾಹಿತಿ ಹಾಗೂ ಓಎಂಆರ್ ಅಂಕಗಳ ಮಾಹಿತಿ ಮಧ್ಯವರ್ತಿಗಳಿಗೆ ಲಭ್ಯವಾಗಿದ್ದರೆ ಹಿಂದೆ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ನೇರ ಕೈವಾಡವಿದ್ದು ಅವರೇ ದಲ್ಲಾಳಿಗಳನ್ನು ಇಟ್ಟು ಅಭ್ಯರ್ಥಿಗಳ ಮಾಹಿತಿ ನೀಡಿ ಅಭ್ಯರ್ಥಿಗಳಿಗೆ ಕರೆ ಮಾಡಿಸಿರುವ ಸಾಧ್ಯತೆ ಹೆಚ್ಚಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿ ಕೋರುತ್ತೇವೆ. 24 ಮಂದಿ ಅಭ್ಯರ್ಥಿಗಳು ಈ ಅಕ್ರಮದಲ್ಲಿ ಭಾಗಿಯಾಗಿ ಉತೀರ್ಣರಾಗಿದ್ದಾರೆ ಎಂದು ಅವರ ಹೆಸರು ದೂರಿನಲ್ಲಿ ಉಲ್ಲೇಖಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಧಾನ್ ರಾಜೀನಾಮೆ ಕೈ ಗೆಲುವಲ್ಲ! ಅವನ್ಯಾರ್ರೀ ಪ್ರಿಯಾಂಕ್ ಖರ್ಗೆ? ಉಗ್ರರಿಗಷ್ಟೇ ಇವನು ಮಂತ್ರಿಯೇ?: ವಿಜಯೇಂದ್ರ ಕಿಡಿ
‘ವಿಸ್ಕಿ, ಬಿಯರ್ ಹಾಗೂ ರಮ್.. ಸ್ವಾಮಿ.. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ, ಸರ್ಕಾರದ ವಿರುದ್ಧ ಕೋರ್ಟ್ ಗರಂ