‘ವಿಸ್ಕಿ, ಬಿಯರ್ ಹಾಗೂ ರಮ್.. ಸ್ವಾಮಿ.. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ, ಸರ್ಕಾರದ ವಿರುದ್ಧ ಕೋರ್ಟ್ ಗರಂ

Kannadaprabha News   | Kannada Prabha
Published : Jul 25, 2026, 08:42 AM IST
Karnataka HC warns if sale of beer and rum even in grocery stores

ಸಾರಾಂಶ

‘ಕೃಷಿ ಕೆಲಸ ಮಾಡಿ ದಣಿದು ಬಂದ ಕಾರ್ಮಿಕರಿಗೆ ನೀಡಲು ಪ್ರಾವಿಷನ್ ಸ್ಟೋರ್‌ ನಲ್ಲಿ ಬಿಯರ್-ಲಿಕ್ಕರ್ ಇರಿಸಲಾಗಿತ್ತು...’ ಎಂಬ ವಾದ ಕೇಳಿ ಅಚ್ಚರಿಗೊಂಡ ಹೈಕೋರ್ಟ್, ಇಂಥ ಕೆಲಸವನ್ನು ಸ್ಕಾಟ್ ಲ್ಯಾಂಡ್ ನಲ್ಲಿ ವಿಸ್ಕಿ ಕಂಡುಹಿಡಿದಾಗ ಮಾಡಲಾಗುತ್ತಿತ್ತು. ಆ ಪದ್ಧತಿ ಭಾರತದಲ್ಲಿ ಮಾಡಬೇಕಿಲ್ಲ ಎಂದು ನುಡಿಯಿತು.

ಬೆಂಗಳೂರು (ಜು.25): ‘ಕೃಷಿ ಕೆಲಸ ಮಾಡಿ ದಣಿದು ಬಂದ ಕಾರ್ಮಿಕರಿಗೆ ನೀಡಲು ಪ್ರಾವಿಷನ್ ಸ್ಟೋರ್‌ ನಲ್ಲಿ ಬಿಯರ್-ಲಿಕ್ಕರ್ ಇರಿಸಲಾಗಿತ್ತು...’ ಎಂಬ ವಾದ ಕೇಳಿ ಅಚ್ಚರಿಗೊಂಡ ಹೈಕೋರ್ಟ್, ಇಂಥ ಕೆಲಸವನ್ನು ಸ್ಕಾಟ್ ಲ್ಯಾಂಡ್ ನಲ್ಲಿ ವಿಸ್ಕಿ ಕಂಡುಹಿಡಿದಾಗ ಮಾಡಲಾಗುತ್ತಿತ್ತು. ಆ ಪದ್ಧತಿ ಭಾರತದಲ್ಲಿ ಮಾಡಬೇಕಿಲ್ಲ ಎಂದು ನುಡಿಯಿತು.

ಅಲ್ಲದೆ, ಜನರನ್ನು ಅಮಲಿನಲ್ಲಿ ಮುಳುಗಿಸಿ ಹಾಳು ಮಾಡುತ್ತಿರುವುದಕ್ಕೆ ಸರ್ಕಾರದ ವಿರುದ್ಧ ಪ್ರತ್ಯೇಕ ಪ್ರಕರಣ ಸಹ ದಾಖಲಿಸಬೇಕು ಎಂದು ಮೌಖಿಕವಾಗಿ‌ ನುಡಿದಿದೆ.

ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಿರುವ ದೋಷಾರೋಪ ಪಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ಗುಬ್ಬಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ವಿಚಾರಣೆ ರದ್ದುಪಡಿಸುವಂತೆ ಕೋರಿ ತುಮಕೂರು ಜಿಲ್ಲೆಯ ಮಣಿಕುಪ್ಪೆ ಗ್ರಾಮದ ಯಶೋಧಮ್ಮ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಮಧ್ಯಂತರ ತಡೆ:

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಅರ್ಜಿದಾರರು ಮಹಿಳೆ ಹಾಗೂ ಪ್ರಕರಣ ವಿಚಾರಣಾ ಹಂತದಲ್ಲಿದೆ ಎಂಬ ಕಾರಣಕ್ಕೆ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ತಿಳಿಸಿತು. ಹಾಗೆಯೇ ಅರ್ಜಿ ಸಂಬಂಧ ಪ್ರತಿವಾದಿಗಳಾದ ಗುಬ್ಬಿ ವಲಯದ ಅಬಕಾರಿ ಸಬ್ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ, ಅರ್ಜಿದಾರರ ದಿನಸಿ ಅಂಗಡಿಯಲ್ಲಿ ಯಾವ್ಯಾವ ಮದ್ಯವಿತ್ತು ಎಂದು ನ್ಯಾಯಪೀಠ ‌ಕೇಳಿತು. ಅರ್ಜಿದಾರರ ಪರ ವಕೀಲರು, ‘ವಿಸ್ಕಿ, ಬಿಯರ್ ಹಾಗೂ ರಮ್. ಸ್ವಾಮಿ... ವೈಯಕ್ತಿಕ ಬಳಕೆಗೆ ಅದೂ ಕೃಷಿ ಕೆಲಸ ಮಾಡಿ ಬಂದ ಕಾರ್ಮಿಕರಿಗೆ ನೀಡಲು ಈ ಮದ್ಯ ಇರಿಸಲಾಗಿತ್ತು’ ಎಂದರು.

ಆಗ ನ್ಯಾಯಪೀಠ. ಇನ್ನೂ ತುಂಬಾ ಇದೆ. ಒಮ್ಮೆ ಅರ್ಜಿಯನ್ನು ನೋಡಿ. ಲಿಕ್ಕರ್ ಎಷ್ಟಿದೆ ಎಂದು ಒಮ್ಮೆ ಅರ್ಜಿ ಓದಿಕೊಂಡು ಬರಬೇಕಲ್ಲವೇ? 22.8 ಲೀಟರ್ ವಿಸ್ಕಿ, 7 ಬಾಟಲಿ ಬಿಯರ್‌ ಇದೆ. ವೈಯಕ್ತಿಕ ಬಳಕೆಗೆ 22 ಲೀಟರ್ ವಿಸ್ಕಿ ಇಡಲಾಗಿತ್ತೇ? ವಿಸ್ಕಿ‌ ನೀಡಿ ಕಾರ್ಮಿಕರನ್ನು ಹಾಳು‌ ಮಾಡುತ್ತಿದ್ದೀರಿ. ಮದ್ಯ ಇಟ್ಟುಕೊಳ್ಳಬೇಕೆಂದಾದರೆ ಪರವಾನಗಿ ಪಡೆಯಬೇಕು. ಆದರೂ ದಿನಸಿ ಅಂಗಡಿಯಲ್ಲಿ ಮದ್ಯ ಇರಿಸಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಅರ್ಜಿದಾರರ ಪರ ವಕೀಲರು, ಮದ್ಯವನ್ನು ಮಾರಾಟ ಮಾಡುತ್ತಿರಲಿಲ್ಲ. ವೈಯಕ್ತಿಕ ಬಳಕೆಯೆ ಇರಿಸಿಕೊಳ್ಳಲಾಗಿತ್ತು ಎಂದು ಸಮಜಾಯಿಷಿ ನೀಡಿದರು.

ಇದರಿಂದ ಸ್ವಲ್ಪ ಕೋಪಗೊಂಡ ನ್ಯಾಯಪೀಠ, ಹೌದಾ? ಹಾಗಾದರೆ ಜನರನ್ನು ಅಮಲಿನಲ್ಲಿ ಮುಳುಗಿಸಿ ಹಾಳು ಮಾಡುತ್ತಿರುವುದಕ್ಕೆ ಸರ್ಕಾರವು ಅರ್ಜಿದಾರರ ವಿರುದ್ಧ ಪ್ರತ್ಯೇಕ ಪ್ರಕರಣ ಸಹ ದಾಖಲಿಸಬೇಕು.‌ ಪ್ರಕರಣದ ವಿಚಾರಣೆ ಮುಂದುವರಿಯಲಿ. ಮದ್ಯ ಮಾರಾಟ ಮಡಲಾಗುತ್ತಿತ್ತೇ? ಅಥವಾ ವೈಯಕ್ತಿಕ ಬಳಕೆಗೆ ಇರಿಸಿಕೊಳ್ಳಲಾಗಿತ್ತೇ? ಎಂಬುದು ತಿಳಿದು ಬರಲಿ ಎಂದು ಖಾರವಾಗಿ ನುಡಿಯಿತು.

ಕಾರ್ಮಿಕರಿಗಾಗಿ ಸಂಗ್ರಹ:

ಅರ್ಜಿದಾರರ ಪರ ವಕೀಲರು, ವೈಯಕ್ತಿಕ ಬಳಕೆ ಅಂದರೆ ಕೃಷಿ ಕೆಲಸ ಮಾಡಿ ದಣಿದು ಬರುವ ಕಾರ್ಮಿಕರಿಗೆ ನೀಡಲಾಗುತ್ತಿತ್ತು. ಇದುವೇ ಸತ್ಯ ಸ್ವಾಮಿ ಎಂದು ಮತ್ತೆ ಸಮಜಾಯಿಷಿ ನೀಡಿದರು.

ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಅಯ್ಯೋ ಪಾಪ. ಕೆಲಸ ಮಾಡಿ ಸುಸ್ತಾಗಿ ಬರುವ ಕಾರ್ಮಿಕರಿಗೆ ತಗೊಳ್ಳಿ ಅಂತ ಲಿಕ್ಕರ್ ಕೊಡುತ್ತಿದ್ರಾ? ವಿಸ್ಕಿ ಕಂಡು ಹಿಡಿದಾಗ ಈ ರೀತಿ ಸ್ಕಾಟ್ಲೆಂಡ್ ನಲ್ಲಿ ಮಾಡಲಾಗುತ್ತಿತ್ತು‌. ಆ ಪದ್ಧತಿಯನ್ನು ಭಾರತದಲ್ಲಿ ಮಾಡಬೇಕಿಂದಿಲ್ಲ. 23 ಲೀಟರ್ ಲಿಕ್ಕರ್ ಅನ್ನು ಹೇಗೆ ತಾನೆ ದಿನಸಿ ಅಂಗಡಿಯಲ್ಲಿ‌ ಇರಿಸಿಕೊಳ್ಳಲು ಸಾಧ್ಯ? ಪ್ರಕರಣ ಇನ್ನೂ ಪ್ರಾಥಮಿಕ ಹಂತದಲ್ಲಿ ಇರುವುದರಿಂದ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

BPL ಕಾರ್ಡ್‌ ಆದಾಯ ಮಿತಿ 3 ಲಕ್ಷಕ್ಕೆ ಏರಿಸಲು ಸರ್ಕಾರದ ಚಿಂತನೆ; 2 ತಿಂಗಳಲ್ಲಿ ಇಂದಿರಾ ಕಿಟ್‌
16 ಸಾವಿರ ಗರ್ಭ ನಾಪತ್ತೆಗೆ ‘ಗರ್ಭಪಾತ’ದ ಕತೆ! ಸರ್ಕಾರಕ್ಕೆ ಸುಳ್ಳು ಮಾಹಿತಿಯ ಆರೋಪ