ರಾಜ್ಯದಲ್ಲಿ ಟೆಸ್ಲಾ ಕಾರು ಉತ್ಪಾದನೆ: ಸ್ವತಃ ಸಿಎಂ ಬಿಎಸ್‌ವೈ ಘೋಷಣೆ

By Kannadaprabha News  |  First Published Feb 14, 2021, 7:24 AM IST

ರಾಜ್ಯದಲ್ಲಿ ಟೆಸ್ಲಾ ಕಾರು ಉತ್ಪಾದನೆ| ಸ್ವತಃ ಸಿಎಂ ಬಿಎಸ್‌ವೈ ಘೋಷಣೆ| ಜಗತ್ಪ್ರಸಿದ್ಧ ಕಂಪನಿಯ ಎಲೆಕ್ಟ್ರಿಕ್‌ ಕಾರು ಘಟಕ| ಈಗಾಗಲೇ ಬೆಂಗಳೂರಲ್ಲಿ ಕಚೇರಿ ನೋಂದಣಿ


ಬೆಂಗಳೂರು(ಫೆ.14): ಜಪಾನ್‌ ಮೂಲದ ಟೊಯೋಟಾ ಕಾರು ತಯಾರಿಕಾ ಕಂಪನಿಯನ್ನು ಹೊಂದಿರುವ ಕರ್ನಾಟಕಕ್ಕೆ ಅಮೆರಿಕ ಮೂಲದ ಐಷಾರಾಮಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಟೆಸ್ಲಾ ಕೂಡ ಪ್ರವೇಶಿಸುತ್ತಿದೆ.

ಅತ್ಯಾಧುನಿಕ ಆವಿಷ್ಕಾರಗಳೊಂದಿಗೆ ವಿದ್ಯುತ್‌ ಕಾರುಗಳ ಉತ್ಪಾದನೆ ಮೂಲಕ ವಿಶ್ವದ ಗಮನ ಸೆಳೆದಿರುವ, ಉದ್ಯಮಿ ಎಲಾನ್‌ ಮಸ್ಕ್‌ ಮಾಲೀಕತ್ವದ ಟೆಸ್ಲಾ ಕಂಪನಿ ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಘೋಷಿಸಿದ್ದಾರೆ. ಕೇಂದ್ರ ಬಜೆಟ್‌ ಅನ್ನು ಸ್ವಾಗತಿಸುವ ಕುರಿತು ಯಡಿಯೂರಪ್ಪ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಬಗ್ಗೆ ಪ್ರಸ್ತಾಪವಿದೆ.

Latest Videos

ಜ.8ರಂದು ಟೆಸ್ಲಾ ಕಂಪನಿಯು ‘ಟೆಸ್ಲಾ ಇಂಡಿಯಾ ಮೋಟಾ​ರ್‍ಸ್’ ಎಂಬ ಹೆಸರಿನಲ್ಲಿ ಭಾರತೀಯ ಘಟಕವನ್ನು ನೋಂದಣಿ ಮಾಡಿಸಿದ್ದು, ರಾಜಧಾನಿ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಕಚೇರಿಯನ್ನು ತೆರೆದಿದೆ. ಜತೆಗೆ ಕಂಪನಿಗೆ ಮೂರು ನಿರ್ದೇಶಕರನ್ನು ನೇಮಕ ಮಾಡಿದೆ. ಬೆಂಗಳೂರಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನೂ ಸ್ಥಾಪಿಸಲಿದೆ ಎಂದು ಆಗ ಸುದ್ದಿಯಾಗಿತ್ತು.

ಟೆಸ್ಲಾ ಕಂಪನಿಯನ್ನು ಸೆಳೆಯಲು ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶ, ತಮಿಳುನಾಡು ಕೂಡ ಪ್ರಯತ್ನಿಸಿದ್ದವು. ಆದರೆ ಆ ಕಂಪನಿ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದೆ.

ಯಾವುದಿದು ಕಂಪನಿ?

ಟೆಸ್ಲಾ ಎನ್ನುವುದು ಅಮೆರಿಕ ಮೂಲದ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಕಂಪನಿ. ಅತ್ಯಾಧುನಿಕ, ಐಷಾರಾಮಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಯಲ್ಲಿ ಇದು ಜಗತ್ತಿನಲ್ಲೇ ಮುಂಚೂಣಿ ಕಂಪನಿ. ಟೆಸ್ಲಾದ ಕಾರುಗಳು ಐಷಾರಾಮಿ ಸೌಲಭ್ಯಗಳಿಗೆ ಹೆಸರಾದ ಮರ್ಸಿಡಿಸ್‌ ಬೆಂಜ್‌ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿವೆ. ಟೆಸ್ಲಾದ ಎಲೆಕ್ಟ್ರಿಕ್‌ ಕಾರಿನ ವಿವಿಧ ಮಾದರಿಗಳ ಪೈಕಿ 3 ಸೆಡಾನ್‌ ಮಾದರಿಯನ್ನು ಆರಂಭಿಕ ಹಂತದಲ್ಲಿ ಭಾರತಕ್ಕೆ ಪರಿಚಯಿಸುವ ಸಾಧ್ಯತೆ ಇದೆ. ಇವು ಒಮ್ಮೆ ಚಾಜ್‌ರ್‍ ಮಾಡಿದರೆ 500 ಕಿ.ಮೀ ದೂರ ಸಾಗಬಲ್ಲವು. ದರ 55-60 ಲಕ್ಷ ರು. ಇರಲಿದೆ.

ವಿಶ್ವದ ನಂ.1 ಶ್ರೀಮಂತನ ಕಂಪನಿ

ಎಲಾನ್‌ ಮಸ್ಕ್‌ ಹಾಲಿ ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಕೂಡ ಹೊಂದಿದ್ದಾರೆ. ಇವರದ್ದೇ ಕಂಪನಿ ನಿರ್ವಾತ ಪ್ರದೇಶದಲ್ಲಿ ರೈಲು ಓಡಿಸುವ ವ್ಯವಸ್ಥೆಯಾದ ಹೈಪರ್‌ಲೂಪ್‌ ಅಭಿವೃದ್ಧಿಪಡಿಸಿದೆ. ಬೆಂಗಳೂರು ನಗರದ ಕೇಂದ್ರ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈಪರ್‌ಲೂಪ್‌ ರೈಲು ಓಡಿಸುವ ಬಗ್ಗೆ ಕಾರ್ಯಸಾಧ್ಯತೆ ವರದಿ ತಯಾರಿಸುವ ಕುರಿತು ಟೆಸ್ಲಾ ಮತ್ತು ವಿಮಾನ ನಿಲ್ದಾಣ ಸಂಸ್ಥೆಗಳು ಕೆಲ ತಿಂಗಳ ಹಿಂದೆ ಒಪ್ಪಂದಕ್ಕೆ ಸಹಿ ಹಾಕಿದ್ದವು.

click me!