ವಾಯುಪಡೆಯಲ್ಲೂ ಸೇವೆ ಸಲ್ಲಿಸಲು ಹೊರಟ ಮುಧೋಳ ಶ್ವಾನಗಳು..!

By Suvarna NewsFirst Published Feb 13, 2021, 8:02 PM IST
Highlights

ಬಾಗಲಕೋಟೆ ಜಿಲ್ಲೆಯ  ಹೆಮ್ಮೆಯ ಮುಧೋಳ ಶ್ವಾನಗಳು ಆಸ್ತಿ-ಪಾಸ್ತಿಗೆ ಕಾವಲಿಗಷ್ಟೇ ಸೀಮಿತವಾಗಿಲ್ಲ. ಭಾರತೀಯ ವಾಯುಪಡೆಯಲ್ಲೂ ಸೇವೆ ಸಲ್ಲಿಸಲು ಹೆಜ್ಜೆ ಹಾಕಿವೆ. 

ಬಾಗಲಕೋಟೆ, (ಫೆ.13): ಭಾರತೀಯ ಸೇನೆ ಸೇರ್ಪಡೆ ಮೂಲಕ ಭಾರೀ ಸದ್ದು ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಮುಧೋಳದ ನಾಯಿಗಳು ಇದೀಗ ಭಾರತೀಯ ವಾಯುಪಡೆಯಲ್ಲೂ ಸೇವೆ ಸಲ್ಲಿಸಲು ಹೊರಟಿವೆ.

ಸಮೀಪದ ತಿಮ್ಮಾಪುರದ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು ಶನಿವಾರ ಅಧಿಕೃತವಾಗಿ ನಾಲ್ಕು ಶ್ವಾನ ಮರಿಗಳನ್ನು ವಾಯುಸೇನೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಉತ್ತರ ಪ್ರದೇಶದ ಆಗ್ರಾದ ಏರ್ ಫೋರ್ಸ್ ಸ್ಟೇಶನ್‌ಗೆ ಒಂದು ತಿಂಗಳಿನ ಎರಡು ಗಂಡು ಹಾಗೂ ಎರಡು ಹೆಣ್ಣು ನಾಯಿ ಮರಿಗಳನ್ನು ನೀಡಿದರು. ಒಂದು ವಷರ್ ಕಾಲ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಶ್ವಾನಮರಿಗಳಿಗೆ ತರಬೇತಿ ನೀಡಲಾಗುತ್ತದೆ.

ಮನ್‌ ಕೀ ಬಾತ್‌ನಲ್ಲಿ ಮೋದಿ ಮುಧೋಳ ಪ್ರಸ್ತಾಪ: ಏನೀ ಶ್ವಾನ ಸ್ಪೆಷಾಲಿಟಿ?

ಈಗಾಗಲೇ ಮುಧೋಳ ಶ್ವಾನಗಳು ಭಾರತೀಯ ಸೇನೆ, ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್, ಬಿಎಸ್ ಎಫ್, ಸಶಸ್ತ್ರ ಸೀಮಾಬಲ ಸೇರಿವೆ. ಈಗ ಹೊಸದಾಗಿ ಏರ್ ಫೋರ್ಸ್‌ಗೂ ಮುಧೋಳ ಶ್ವಾನ ಸೇವೆಗೆ ಬಳಕೆಯಾಗುತ್ತಿರುವುದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ಈ ವೇಳೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಸ್ವಾತಂತ್ರ್ಯ ಪೂರ್ವದಲ್ಲಿಯೂ ಮುಧೋಳ ನಾಯಿಗಳು ಪ್ರಸಿದ್ಧಿ ಪಡೆದಿವೆ. ಅವು ನಶೀಸಿ ಹೋಗುತ್ತಿವೆ ಎಂದು ಕೆಲವು ರೈತರು ಹೇಳಿದ್ದರು. ನಾನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಮೂಲಕ 5 ಕೋಟಿ ರೂ. ಬಜೆಟ್‌ನಲ್ಲಿ ಅನುದಾನ ಘೋಷಿಸಿ, ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ಶ್ವಾನ ಸಂಶೋಧನಾ ಕೇಂದ್ರ ಹಾಗೂ ಮಾಹಿತಿ ಕೇಂದ್ರವನ್ನು ಪ್ರಾರಂಭಿಸಿ, ಇಡೀ ದೇಶದಲ್ಲಿ ಜನ ಮೆಚ್ಚುವಂತೆ ಮುಧೋಳ ನಾಯಿ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದರು.

ಮನ್ ಕಿ ಬಾತ್‌ನಲ್ಲಿ ಮುಧೋಳ ನಾಯಿಗಳ ಬಗ್ಗೆ ಪ್ರಧಾನಿ ಮೋದಿ ಅವರು ಹೇಳಿದ ಬಳಿಕ ಮುಧೋಳ ನಾಯಿಗಳು ಇಡೀ ದೇಶದ ಗಮನ ಸೆಳೆದಿವೆ. ಭೂಸೇನೆ ಹಾಗೂ ಸಿಆರ್‌ಪಿಎಫ್ ಪಡೆಗಳಲ್ಲಿ ಮುಧೋಳ ನಾಯಿಗಳನ್ನು ಬಳಕೆ ಮಾಡುತ್ತಿದ್ದು, ಈಗ ವಾಯುಸೇನೆಗೂ ಸೇರ್ಪಡೆಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ವೇಳೆ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮಹೇಶ್ ಆಕಾಶಿ, ಯುವ ಮುಖಂಡ ಅರುಣ ಕಾರಜೋಳ, ಕೆ. ಆರ್. ಮಾಚಪ್ಪನವರ, ನಾಗಪ್ಪ ಅಂಬಿ, ಕುಮಾರ ಹುಲಕುಂದ, ಗೌಡಪ್ಪ ಕಮಕೇರಿ, ನಬಿ ಹಾಜಿಬಾಯಿ, ಸುರೇಶ ಮಾಳಿ, ರಾಮಚಂದ್ರ ಪಡತಾರೆ ಇದ್ದರು.

ವಾಯುಸೇನೆಯಲ್ಲಿ ಮುಧೋಳ ಶ್ವಾನಗಳಿಗೇನು ಕೆಲ್ಸ? 

ಏರ್ ಫೋರ್ಸ್ ಸ್ಟೇಶನ್‌ಲ್ಲಿ ವೈಮಾನಿಕ ತರಬೇತಿ ವೇಳೆ ವಿಮಾನಗಳಿಗೆ ಯಾವುದೇ ಪಕ್ಷಿಗಳು ಅಡ್ಡ ಬಾರದಂತೆ ತಡೆಯುವುದು. ವಾಯುಸೇನೆ ಕ್ಯಾಂಪ್‌ಗಳಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳು ಬರದಂತೆ ಭದ್ರತೆ ನೀಡುವುದು. ವಾಸನೆ ಗೃಹಿಕೆ, ಬೇಹುಗಾರಿಕೆಗೆ ಬಳಸಲು ವಿಶೇಷ ತರಬೇತಿ ಪಡೆಯಲಿರುವ ಮುಧೋಳ ಶ್ವಾನ ಮರಿಗಳು.

click me!