ಬೆಂಗಳೂರು: ಹಸಿ ಕಸ ಸಂಗ್ರಹಕ್ಕೆ ಟೆಂಡರ್‌ ಅನಿವಾರ್ಯ

By Kannadaprabha NewsFirst Published Aug 6, 2020, 8:56 AM IST
Highlights

ಹಿಂದಿನ ಅವಧಿಯಲ್ಲಿ ಪ್ರತ್ಯೇಕವಾಗಿ ಹಸಿ ಕಸ ಸಂಗ್ರಹಕ್ಕೆ ಒಲವು| ಬಿಜೆಪಿಯಿಂದ ಒಂದೇ ಟೆಂಡರ್‌ಗೆ ಒಲವು| ಹೈಕೋರ್ಟ್‌ ಮೆಟ್ಟಿಲೇರಿದ್ದ ಗುತ್ತಿಗೆದಾರರು| ನ್ಯಾಯಾಂಗ ನಿಂದನೆ ಕೇಸ್‌ ತಪ್ಪಿಸಿಕೊಳ್ಳಲು ಬಿಬಿಎಂಪಿ ಸರ್ಕಸ್‌| 

ಬೆಂಗಳೂರು(ಆ.06): ಹೈಕೋರ್ಟ್‌ನ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ಬಿಬಿಎಂಪಿ ಮನೆ-ಮನೆಯಿಂದ ಪ್ರತ್ಯೇಕ ಹಸಿ ಕಸ ಸಂಗ್ರಹಿಸುವ ಟೆಂಡರ್‌ ಮುಂದುವರೆಸುವ ಸಾಧ್ಯತೆ ದಟ್ಟವಾಗಿದೆ.

ಪಾಲಿಕೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಆಡಳಿತದ ಸಂದರ್ಭದಲ್ಲಿ 198 ವಾರ್ಡ್‌ನಲ್ಲಿ ವಿಂಗಡಿಸಿದ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು, ಒಣ ತ್ಯಾಜ್ಯವನ್ನು ಕೇಂದ್ರ ಸರ್ಕಾರದ ಘನತ್ಯಾಜ್ಯ ವಿಲೇವಾರಿ ನಿಯಯ 2016ರ ಪ್ರಕಾರ ಸ್ವಯಂ ಸೇವಾ ಸಂಸ್ಥೆಗಳು, ಚಿಂದಿ ಆಯುವವರನ್ನು ಬಳಕೆ ಮಾಡಿಕೊಂಡು ಸಂಗ್ರಹಿಸಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಹಸಿ ಕಸ ಸಂಗ್ರಹಿಸುವುದಕ್ಕೆ ಮಾತ್ರ ಟೆಂಡರ್‌ ಆಹ್ವಾನಿಸಿತ್ತು. ಬಹುತೇಕ 45 ವಾರ್ಡ್‌ನಲ್ಲಿ ಗುತ್ತಿಗೆದಾರರನ್ನೂ ಅಂತಿಮಗೊಳಿಸಲಾಗಿತ್ತು.

ಬದಲಾದ ರಾಜಕೀಯ ಪರಿಸ್ಥಿತಿಯ ಪರಿಣಾಮ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದಿನ ಅಧಿಕಾರ ಅವಧಿಯಲ್ಲಿ ಆಹ್ವಾನಿಸಲಾಗಿದ್ದ ಟೆಂಡರ್‌ ಬದಲು ಇಂದೋರ್‌ ಮಾದರಿಯಲ್ಲಿ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ಎಲ್ಲವನ್ನೂ ಒಟ್ಟಿಗೆ ಸಂಗ್ರಹಿಸುವುದಕ್ಕೆ ಆಡಳಿತರೂಢ ಬಿಜೆಪಿ ಮುಂದಾಗಿತ್ತು.

ಹಸಿ, ಒಣ, ಸ್ಯಾನಿಟರಿ ತ್ಯಾಜ್ಯ ಸಂಗ್ರಹಕ್ಕೆ ಒಬ್ಬನೇ ಗುತ್ತಿಗೆದಾರ: ಪ್ರತ್ಯೇಕ ಟೆಂಡರ್‌ಗೆ ತಿಲಾಂಜಲಿ!

ಈ ವೇಳೆ ಗುತ್ತಿಗೆದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ಕೋರ್ಟ್‌ ಟೆಂಡರ್‌ ನಿಯಮದ ಪ್ರಕಾರ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ಎಂದು ಬಿಬಿಎಂಪಿಗೆ ಸೂಚನೆ ನೀಡಿತ್ತು. ಆದರೆ, ಬಿಬಿಎಂಪಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡದ ಕಾರಣ ಕೋರ್ಟ್‌ ಪಾಲಿಕೆಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ. ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಬಿಬಿಎಂಪಿ ಇದೀಗ ಅನಿವಾರ್ಯವಾಗಿ ಪ್ರತ್ಯೇಕ ಹಸಿ ತ್ಯಾಜ್ಯ ಸಂಗ್ರಹಿಸುವ ಟೆಂಡರ್‌ ಮುಂದುವರೆಸಲು ಚಿಂತನೆ ನಡೆಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಎಂ.ಗೌತಮ್‌ಕುಮಾರ್‌, ಹೈಕೋರ್ಟ್‌ನಲ್ಲಿ ಆ.12 ರಂದು ಕಸದ ಟೆಂಡರ್‌ ವಿಚಾರಣೆಗೆ ಬರಲಿದೆ. ನ್ಯಾಯಾಂಗ ನಿಂದನೆ ಆಗದಂತೆ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 45 ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲೂ ಸೂಚನೆ ನೀಡಲಾಗಿದೆ. ಜತೆಗೆ ಉಳಿದ ವಾರ್ಡ್‌ಗಳಲ್ಲೂ ಈ ಹಿಂದೆ ಟೆಂಡರ್‌ ಕರೆಯಲಾಗಿರುವ ಗುತ್ತಿಗೆದಾರರಿಗೆ ಟೆಂಡರ್‌ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಜನ ಮಿಶ್ರ ಕಸ ನೀಡಿದರೆ ಏನು ಮಾಡಬೇಕು ಎನ್ನುವ ಸಂಬಂಧವೂ ಚರ್ಚೆ ನಡೆದಿದೆ. ಆ.10ಕ್ಕೆ ಕೌನ್ಸಿಲ್‌ ಸಭೆ ನಡೆಯಲಿದ್ದು, ಕೌನ್ಸಿಲ್‌ ಸಭೆಯಲ್ಲಿ ಈ ವಿಷಯ ಮಂಡನೆ ಮಾಡಿ ಅನುಮೋದನೆ ಪಡೆದುಕೊಳ್ಳಲಿದ್ದೇವೆ ಎಂದು ವಿವರಿಸಿದರು.

ಇಂದೋರ್‌ ಮಾದರಿಗೆ ತಿಲಾಂಜಲಿ?

ಪ್ರಾಯೋಗಿಕವಾಗಿ ನಗರದಲ್ಲಿ ಐದು ವಾರ್ಡ್‌ನಲ್ಲಿ ಇಂದೋರ್‌ ಮಾದರಿಯಲ್ಲಿ ತ್ಯಾಜ್ಯ ಸಂಗ್ರಹಿಸುವ ಪರೀಕ್ಷೆ ಆರಂಭಿಸಲಾಗಿತ್ತು. ಕೊರೋನಾ ಸೋಂಕಿನ ಭೀತಿ ಆರಂಭವಾದ ಹಿನ್ನೆಲೆಯಲ್ಲಿ ಅರ್ಧಕ್ಕೆ ಕೈಬಿಡಲಾಗಿತ್ತು. ಇದೀಗ ಪ್ರತ್ಯೇಕ ಹಸಿ ಕಸ ಟೆಂಡರ್‌ ಮುಂದುವರೆಸುತ್ತಿರುವುದರಿಂದ ಇಂದೋರ್‌ ಮಾದರಿ ತ್ಯಾಜ್ಯ ಸಂಗ್ರಹಿಸುವ ಯೋಜನೆಗೆ ತಿಲಾಂಜಲಿ ಬೀಳುವ ಸಾಧ್ಯತೆ ಇದೆ.

ಎನ್‌ಜಿಟಿ ಆದೇಶದಂತೆ ಮತ್ತು ನಗರ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರತ್ಯೇಕ ಹಸಿ ಕಸ ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೆ, ಅಧಿಕಾರ ಬದಲಾವಣೆಯಿಂದ ತೊಡಕು ಉಂಟಾಗಿತ್ತು. ಇದೀಗ ಕೋರ್ಟ್‌ ಮಧ್ಯ ಪ್ರವೇಶದಿಂದ ಜಾರಿಯಾಗುತ್ತಿದೆ ಎಂದು ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ತಿಳಿಸಿದ್ದಾರೆ. 
 

click me!