DK Shivakumar: ನಿಮ್ಮ ಪಾದಕ್ಕೆ ಬಿಳ್ತೀನಿ ಪಾದಯಾತ್ರೆ ನಿಲ್ಲಿಸಿ: ರೈತರಿಗೆ ಸ್ವತಃ ಡಿಕೆ ಮನವಿ

Kannadaprabha News   | Kannada Prabha
Published : Oct 18, 2026, 06:32 AM IST
DK Shivakumar belagavi

ಸಾರಾಂಶ

ಬೆಳಗಾವಿಯ ಕಿತ್ತೂರಿನಲ್ಲಿ ಪ್ರತಿಭಟನಾನಿರತ ಕಬ್ಬು ಬೆಳೆಗಾರರನ್ನು ಭೇಟಿಯಾದ ಡಿ.ಕೆ.ಶಿವಕುಮಾರ್, ಪಾದಯಾತ್ರೆ ನಿಲ್ಲಿಸುವಂತೆ ಮನವಿ ಮಾಡಿದರು. ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತದೃಷ್ಟಿಯಿಂದ ಮುಂದಿನ ವಾರ ಸಭೆ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಬೆಳಗಾವಿ (ಅ.18): ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ನೀವು ದೇವರ ಸಮಾನ. ನಿಮ್ಮ ಕಾಲಿಗೆ ಬಿದ್ದು ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಪಾದಯಾತ್ರೆ ನಿಲ್ಲಿಸಿ. ಯಾರಿಗೂ ಹೆಚ್ಚು-ಕಡಿಮೆ ಆಗುವುದು ಬೇಡ. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ. ಆದರೆ, ಅದಕ್ಕೆ ಸ್ವಲ್ಪ ಸಮಯಾವಕಾಶ ಬೇಕು. ಹೀಗಾಗಿ ನೀವು ಆರಂಭಿಸಿರುವ ಪಾದಯಾತ್ರೆಯನ್ನು ಕಿತ್ತೂರಿನಲ್ಲಿಯೇ ನಿಲ್ಲಿಸಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರಿಗೆ ಮನವಿ ಮಾಡಿದರು.

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಶನಿವಾರ ಪ್ರತಿಭಟನಾನಿರತ ಕಬ್ಬು ಬೆಳೆಗಾರರನ್ನು ಭೇಟಿಯಾಗಿ ಮಾತನಾಡಿದ ಅವರು, ಮುಂದಿನ ವಾರ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿ ಎಲ್ಲ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸೋಣ ಎಂದು ರೈತರಿಗೆ ತಿಳಿಸಿದರು.

ಪರಿಹಾರದ ಹೊಣೆ ನಮ್ಮದು!

ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಗುರೂಜಿ ಅವರ ಮಾತುಗಳನ್ನು ಆಲಿಸಿದ ಡಿ.ಕೆ.ಶಿವಕುಮಾರ ಅವರು, ರೈತರ ಹೋರಾಟದ ತೀವ್ರತೆ ಮತ್ತು ಅವರ ಸಂಕಷ್ಟದ ಅರಿವು ತಮಗಿದೆ ಎಂದರು. ನಿಮ್ಮ ಮೇಲಿನ ಪ್ರೀತಿ, ಅಭಿಮಾನದಿಂದಲೇ ನಿಮ್ಮನ್ನು ಭೇಟಿಯಾಗಲು ಬಂದಿದ್ದೇನೆ. ನಿಮ್ಮ ಹೋರಾಟದ ಶಕ್ತಿಯನ್ನು ನೋಡಿದ್ದೇನೆ. ನಿಮ್ಮ ಕೂಗು ದೆಹಲಿಗೂ ಮುಟ್ಟಿದೆ. ರೈತರ ಸಮಸ್ಯೆಗಳನ್ನು ಪರಿಹರಿಸುವುದೇ ಸರ್ಕಾರದ ಉದ್ದೇಶ. ಯಾರನ್ನೂ ದೂಷಿಸುವ ಬದಲು ಎಲ್ಲರೂ ಒಟ್ಟಾಗಿ ಕುಳಿತು ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.

ಕಬ್ಬಿನ ಬೆಲೆ ಸೇರಿದಂತೆ ರೈತರ ವಿವಿಧ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿರುವುದಾಗಿ ತಿಳಿಸಿದ ಅವರು, ಕೇಂದ್ರದಲ್ಲಿ ನಡೆದ ಸಭೆಗೆ ಸಚಿವ ಸವದಿ ಅವರನ್ನು ಕಳುಹಿಸಲಾಗಿತ್ತು. ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದು, ಕೇಂದ್ರ ಸಚಿವರನ್ನೂ ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿಯೂ ಸಕ್ಕರೆ ಕಾರ್ಖಾನೆಗಳ ಮೇಲೆ ಒತ್ತಡ ಹೇರಿ ರೈತರಿಗೆ ನೆರವು ನೀಡುವ ಪ್ರಯತ್ನ ಮಾಡಲಾಗಿತ್ತು. ಪ್ರತಿ ಟನ್ ಕಬ್ಬಿಗೆ ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡಿದ್ದೇವೆ. ಈಗಲೂ ರೈತರ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಖಾನೆಗಳೂ ಮುಚ್ಚಬಾರದು:

ಸಕ್ಕರೆ, ಚಾಕೊಲೇಟ್ ಹಾಗೂ ಕಾಫಿ ಸೇರಿದಂತೆ ಮಾರುಕಟ್ಟೆಯ ವಿವಿಧ ಬೆಳವಣಿಗೆಗಳು ಬೆಲೆ ನಿರ್ಧಾರದಲ್ಲಿ ಪ್ರಭಾವ ಬೀರುತ್ತಿವೆ. ರೈತರಿಗೆ ಉತ್ತಮ ಬೆಲೆ ದೊರಕಿಸುವುದರ ಜತೆಗೆ ಸಕ್ಕರೆ ಕಾರ್ಖಾನೆಗಳೂ ನಷ್ಟದಿಂದ ಮುಚ್ಚುವ ಸ್ಥಿತಿಗೆ ತಲುಪದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ಬರ ಘೋಷಣೆಗೆ ಸರ್ಕಾರದ್ದೇ ಆದ ನಿಯಮಗಳಿದೆ. ಅವುಗಳ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ರಾಜ್ಯದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ರೈತರ ವಿದ್ಯುತ್ ಪೂರೈಕೆಗಾಗಿ ಸರ್ಕಾರ 22 ಸಾವಿರ ಕೋಟಿ ರು. ವೆಚ್ಚ ಮಾಡುತ್ತಿದೆ. ಉಚಿತ ವಿದ್ಯುತ್‌ಗಾಗಿ 8 ಸಾವಿರ ಕೋಟಿ ರು. ನೀಡಲಾಗುತ್ತಿದೆ. ನೆರೆಯ ರಾಜ್ಯಗಳಲ್ಲಿಯೂ ಹಲವು ಸಮಸ್ಯೆಗಳಿವೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಕಬ್ಬು ನುರಿಸುವ ಕಾರ್ಯ ಆರಂಭವಾಗಿದೆ. ಹೀಗಾಗಿ ಎಲ್ಲ ಅಂಶಗಳನ್ನು ಪರಿಗಣಿಸಿ ಸಮಗ್ರ ನಿರ್ಧಾರ ಕೈಗೊಳ್ಳಬೇಕಿದೆ ಎಂದು ವಿವರಿಸಿದರು.

ಮಹದಾಯಿ ಯೋಜನೇಲೂ ರೈತರ ಪರ ಸರ್ಕಾರ:

ಮಹದಾಯಿ ಯೋಜನೆ ವಿಚಾರದಲ್ಲಿಯೂ ಸರ್ಕಾರ ರೈತರ ಪರವಾಗಿದೆ. ನಿಮ್ಮ ಹೋರಾಟದ ಶಕ್ತಿ ನನಗೆ ಗೊತ್ತಾಗಿದೆ. ನಿಮ್ಮ ಸಮಸ್ಯೆಗಳೂ ಅರ್ಥವಾಗಿವೆ. ಆದರೆ, ಸಮಸ್ಯೆ ಇತ್ಯರ್ಥಕ್ಕೆ ಸ್ವಲ್ಪ ಸಮಯ ಬೇಕು. ದಯವಿಟ್ಟು ಪಾದಯಾತ್ರೆಯನ್ನು ಇಲ್ಲಿಗೆ ನಿಲ್ಲಿಸಿ. ಕುಳಿತು ಚರ್ಚಿಸೋಣ. ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ನಮ್ಮದು ಎಂದು ರೈತರಿಗೆ ಮನವಿ ಮಾಡಿದರು.

ಕಬ್ಬು ಬೆಳೆಗಾರರ ಹೋರಾಟಕ್ಕೆ ಸರ್ಕಾರದ ಭರವಸೆ ಸಿಕ್ಕಿದ್ದು, ಮುಂದಿನ ವಾರ ನಡೆಯಲಿರುವ ರೈತ ಮುಖಂಡರ ಸಭೆಯತ್ತ ಈಗ ಎಲ್ಲರ ಗಮನ ನೆಟ್ಟಿದೆ. ರೈತರ ಬೇಡಿಕೆಗಳಿಗೆ ಸಭೆಯಲ್ಲಿ ಯಾವ ರೀತಿಯ ಪರಿಹಾರ ಸಿಗಲಿದೆ ಎಂಬುದೇ ಕುತೂಹಲ ಮೂಡಿಸಿದೆ.

ಈ ವೇಳೆ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಸಂತೋಷ ಲಾಡ್‌, ಶಾಸಕ ರಾದ ಲಕ್ಷ್ಮೀ ಹೆಬ್ಬಾಳ್ಕರ್‌, ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ರಾಜು ಶೇಠ್‌ ಇದ್ದರು.

ರೈತರೂ ಉಳಿಯಬೇಕು, ಕಾರ್ಖಾನೆಗಳೂ ಉಳಿಯಬೇಕು. ಎಲ್ಲರೂ ಒಟ್ಟಾಗಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ದಸರಾ ಮುಗಿದ ಬಳಿಕ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸುತ್ತೇನೆ. ಮುಂದಿನ ವಾರ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ರೈತ ಮುಖಂಡರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಸಮಸ್ಯೆ ಬಗೆಹರಿಯುತ್ತದೆ ಎಂಬ ಭರವಸೆ ನೀಡುವುದಷ್ಟೇ ಅಲ್ಲ, ಪರಿಹಾರ ಸಿಗುವವರೆಗೂ ನಿಮ್ಮೊಂದಿಗೆ ಇರಲು ಸಿದ್ಧನಿದ್ದೇನೆ.

-ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಚಿವ ಕೆಜೆ ಜಾರ್ಜ್ ಜೊತೆ ಶಾರದೆಯ ದರ್ಶನ ಪಡೆದ ನೂತನ ರಾಜ್ಯಪಾಲ ಡಾ.ಸುಧಾ ಯಾದವ್
ಕ್ವಿನ್ ಸಿಟಿ ಯೋಜನೆ, ಮಾರ್ಚ್ ಒಳಗೆ ನಿವೇಶನ ಹಂಚಿಕೆ ಗುರಿ ಎಂದ ಎಂಬಿ ಪಾಟೀಲ