ಕರ್ನಾಟಕದಲ್ಲಿ ಚಳಿಯೋ ಚಳಿ, ಬೆಂಗ್ಳೂರಲ್ಲಿ ದಾಖಲೆ..!

Published : Oct 26, 2022, 06:33 AM ISTUpdated : Oct 26, 2022, 07:26 AM IST
ಕರ್ನಾಟಕದಲ್ಲಿ ಚಳಿಯೋ ಚಳಿ, ಬೆಂಗ್ಳೂರಲ್ಲಿ ದಾಖಲೆ..!

ಸಾರಾಂಶ

ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ, ಕನಿಷ್ಠ ತಾಪ ಭಾರೀ ಕುಸಿತ, ಉತ್ತರ ಭಾರತದ ಶೀತ ಗಾಳಿಯಿಂದಾಗಿ ಕರುನಾಡು ಗಡಗಡ

ಬೆಂಗಳೂರು(ಅ.26): ಕಳೆದ ವಾರದವರೆಗೆ ಭರ್ಜರಿ ಮಳೆ ಕಂಡಿದ್ದ ರಾಜ್ಯದಲ್ಲಿ ಇದೀಗ ತೀವ್ರ ಚಳಿಯ ವಾತಾವರಣ ಕಂಡುಬರುತ್ತಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ದಶಕದಲ್ಲೇ ಕನಿಷ್ಠ ತಾಪಮಾನ ದಾಖಲಾಗಿದ್ದು, ಬೇರೆ ಜಿಲ್ಲೆಗಳಲ್ಲಿಯೂ ವಾಡಿಕೆಗಿಂತ ಕಡಿಮೆ ಉಷ್ಣಾಂಶ ವರದಿಯಾಗಿದೆ.

ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ಆದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಮಂಡ್ಯ, ಮಡಿಕೇರಿ, ಮೈಸೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನದಲ್ಲಿ ತುಸು ಹೆಚ್ಚಳವಾಗಿದೆ. ಉಳಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿಯೂ ಇಳಿಕೆ ಕಂಡು ಬಂದಿದೆ. ರಾಜ್ಯದ ಶೇ.73ರಷ್ಟುಭೂ ಭಾಗದಲ್ಲಿ 12 ಡಿಗ್ರಿ ಸೆಲ್ಸಿಯಸ್‌ನಿಂದ 16 ಡಿಗ್ರಿ ಸೆಲ್ಸಿಯಸ್‌ ತನಕ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಪಮಾನ ವೈಪರಿತ್ಯದಿಂದಾಗಿ ಶತಮಾನದ ಅಂತ್ಯದಲ್ಲಿ ಸಾವಿನ ಪ್ರಮಾಣ ಆರು ಪಟ್ಟು ಹೆಚ್ಚುತ್ತಂತೆ!

ಕೋಲಾರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ರಾಮನಗರ, ತುಮಕೂರು, ಬೆಂಗಳೂರು ನಗರ, ಬೀದರ್‌, ವಿಜಯಪುರ, ಕಲಬುರಗಿ, ಮಂಡ್ಯ ಮತ್ತು ಕೊಡಗು ಜಿಲ್ಲೆಯ ಹಲವೆಡೆ ಕನಿಷ್ಠ ತಾಪಮಾನ 10.9 ಡಿಗ್ರಿ ಸೆಲ್ಸಿಯಸ್‌ನಿಂದ 13 ಡಿಗ್ರಿ ಸೆಲ್ಸಿಯಸ್‌ ತನಕ ಕುಸಿದಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, 13 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಕಳೆದ ಹತ್ತು ವರ್ಷದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ 2018ರ ಅಕ್ಟೋಬರ್‌ 30ರಂದು 16.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 1974ರ ಅಕ್ಟೋಬರ್‌ 31 ರಂದು 13.2 ಡಿಗ್ರಿ ಸೆಲ್ಸಿಯಸ್‌ ವರದಿ ಆಗಿದ್ದು ಈವರೆಗಿನ ಕನಿಷ್ಠ ತಾಪಮಾನವಾಗಿದೆ.

ಬೆಂಗಳೂರಿನಲ್ಲಿ ವಾಡಿಕೆಗಿಂತ 3.9 ಡಿಗ್ರಿ ಸೆಲ್ಸಿಯಸ್‌ ಕಡಿಮೆ ತಾಪಮಾನ ದಾಖಲಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಹಲವು ಭಾಗಗಳಲ್ಲಿ 13 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ದಾಖಲಾಗಿರುವುದು ವರದಿಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಉತ್ತರ ಭಾರತದ ತಣ್ಣನೆಯ ಗಾಳಿ ದಕ್ಷಿಣ ಭಾರತದತ್ತ ಬೀಸುತ್ತಿರುವುದು ಚಳಿ ಹೆಚ್ಚಾಗಲು ಕಾರಣವಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

ದಿಲ್ಲಿಯಲ್ಲಿ 50 ಡಿ.ಸೆ ಸಮೀಪಕ್ಕೆ ಉಷ್ಣಾಂಶ,ಉತ್ತರ ಭಾರತದಾದ್ಯಂತ ಭಾರೀ ಉಷ್ಣಗಾಳಿ ಹೊಡೆತ!

ಭಾರತೀಯ ಹವಾಮಾನ ಕೇಂದ್ರದ ನಿರ್ದೇಶಕಿ ಡಾ.ಗೀತಾ ಅಗ್ನಿಹೋತ್ರಿ, ಉತ್ತರದಿಂದ ಬೀಸುತ್ತಿರುವ ಗಾಳಿ ಮತ್ತು ಮೋಡ ಇಲ್ಲದಿರುವುದರಿಂದ ವಾತಾವರಣದ ಉಷ್ಣತೆ ಕುಸಿದಿದೆ. ವಾತಾವರಣದಲ್ಲಿನ ತೇವಾಂಶ ಕೂಡ ಕಡಿಮೆ ಆಗಿದೆ. ಚಳಿಗಾಲದ ಸ್ಥಿತಿ ಸೃಷ್ಟಿಯಾಗಿದೆ. ಪೂರ್ವದಿಂದ ಗಾಳಿ ಬೀಸುವ ತನಕ ಇದೇ ಸ್ಥಿತಿ ಇರಲಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಎರಡ್ಮೂರು ದಿನದಲ್ಲಿ ಪೂರ್ವ ಕರಾವಳಿ ಕಡೆಯಿಂದ ಬೀಸುವ ಗಾಳಿ ಹೆಚ್ಚಾಗಲಿದೆ. ಅದ್ದರಿಂದ ಮೂರ್ನಾಲ್ಕು ದಿನದಲ್ಲಿ ಮತ್ತೆ ಉಷ್ಣಾಂಶದಲ್ಲಿ ಏರಿಕೆ ಕಾಣಬಹುದು. ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ.

ಅತಿಹೆಚ್ಚು ಉಷ್ಣಾಂಶ ಕುಸಿತ: ಜಿಲ್ಲೆ ಗರಿಷ್ಠ ಕನಿಷ್ಠ ವಾಡಿಕೆಗಿಂತ ವ್ಯತ್ಯಾಸ (ಡಿಗ್ರಿ ಸೆಲ್ಸಿಯಸ್‌ಗಳಲ್ಲಿ)

ವಿಜಯಪುರ 29.6 13 -7
ಬಾಗಲಕೋಟೆ 30 13.4 -6.5
ಗದಗ 29.6 14.5 -5.4
ಶಿರಾಲಿ 33.4 18.1 -5.2
ಚಿತ್ರದುರ್ಗ 29.5 14.4 -5.2
ಬೆಳಗಾವಿ ವಿಮಾನ ನಿಲ್ದಾಣ 28 13.2 -4.8
ಮಂಡ್ಯ 31 14.3 -4.7
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ