
ನವದೆಹಲಿ : ಬೆಂಗಳೂರು ಟೆಕ್ ಸಮ್ಮಿಟ್ 2025 ನಾವೀನ್ಯತೆಗೆ ಏಷ್ಯಾದಲ್ಲಿಯೇ ಮುಂಚೂಣಿಯಲ್ಲಿರುವ ವೇದಿಕೆ. ಅದಕ್ಕೂ ಮಿಗಿಲಾಗಿ ಸಂಪರ್ಕ, ಸಹಯೋಗ ಮತ್ತು ಹಂಚಿಕೊಳ್ಳಬಹುದಾದ ಭವಿಷ್ಯವನ್ನು ರೂಪಿಸಲು ಇದೊಂದು ಸದವಕಾಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ನವ ದೆಹಲಿಯ ಹೋಟೆಲ್ ಐಟಿಸಿ ಮೌರ್ಯದ ಕಮಲ್ ಮಹಲ್‌ನಲ್ಲಿ ನಡೆದ ‘ಬ್ರಿಡ್ಜ್ ಟು ಬೆಂಗಳೂರು (ಬೆಂಗಳೂರಿಗೆ ತಂತ್ರಜ್ಞಾನದ ಸೇತು) ತಂತ್ರಜ್ಞಾನಕ್ಕಾಗಿ ಜಾಗತಿಕ ನಾವೀನ್ಯತಾ ಮೈತ್ರಿಯ ಬಗ್ಗೆ ರಾಜತಾಂತ್ರಿಕರೊಂದಿಗೆ ಮಾತುಕತೆ: ಭಾರತದ ಮಹತ್ವಾಕಾಂಕ್ಷಿ ತಂತ್ರಜ್ಞಾನ ವೇದಿಕೆಗೆ ಮುನ್ನುಡಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬನ್ನಿ, ಕರ್ನಾಟಕವನ್ನು ಶೋಧಿಸಿ- ನಮ್ಮ ಹಂಚಿಕೊಳ್ಳಬಹುದಾದ ಪರಂಪರೆಯನ್ನು ನಾವು ಜೊತೆಯಾಗಿ ಆಚರಿಸೋಣ’ ಎಂದು ನಿಮಗೆಲ್ಲರಿಗೂ ನಾನು ಆಹ್ವಾನ ನೀಡುತ್ತೇನೆ ಎಂದು ಅವರು ಹೇಳಿದರು.
ಕರ್ನಾಟಕ ಕೇವಲ ಸಾಂಸ್ಕೃತಿಕ ಕೇಂದ್ರವಾಗಿಲ್ಲ: ಬದಲಿಗೆ ಅದೊಂದು ಆರ್ಥಿಕ ಶಕ್ತಿಕೇಂದ್ರ. 337 ಬಿಲಿಯನ್ ಡಾಲರ್ ಜಿಎಸ್‌ಡಿಪಿ ಹೊಂದಿರುವ ನಾವು ಭಾರತದ ನಾಲ್ಕನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ್ದೇವೆ. ರಾಷ್ಟ್ರದ ಜಿಡಿಪಿಗೆ ಶೇ.9 ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.
ನಮ್ಮ ರಾಜಧಾನಿ ಬೆಂಗಳೂರು ಜಾಗತಿಕ ಟೆಕ್ ನಾಯಕನಾಗಿದ್ದು, ಪ್ರಪಂಚದಾದ್ಯಂತ ಪ್ರತಿಷ್ಠಿತ 15 ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. 18,000ಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳಿಗೆ ಬೆಂಗಳೂರು ನೆಲೆಯಾಗಿದ್ದು, 50+ ಯೂನಿಕಾರ್ನ್‌ಗಳು ಮತ್ತು ಭಾರತದ ಶೇ 40ರಷ್ಟು ಸಾಮರ್ಥ್ಯಾ ಕೇಂದ್ರಗಳು, ಬಾಷ್, ಇಂಟೆಲ್ ಮತ್ತು ಎಸ್ಎಪಿ ಕಂಪನಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ. ನಮ್ಮ ಬಿಯಾಂಡ್ ಬೆಂಗಳೂರು ಯೋಜನೆಯು ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೆಳವಣಿಗೆಯನ್ನು ಪಸರಿಸುತ್ತಿದ್ದು, ಪ್ರತಿ ಪ್ರದೇಶವೂ ಏಳಿಗೆಯಾಗುವುದನ್ನು ಖಾತ್ರಿಪಡಿಸುತ್ತಿದೆ ಎಂದು ತಿಳಿಸಿದರು.
ಕರ್ನಾಟಕದ ಯಶಸ್ಸು ಅದರ ಜನ ಹಾಗೂ ನೀತಿಗಳಿಂದಾಗಿ ದೊರೆತಿದೆ. ನಿಪುಣ ಕರ್ನಾಟಕ ಕಾರ್ಯಕ್ರಮಗಳ ಮೂಲಕ ನಾವು ಒಂದು ಲಕ್ಷಕ್ಕೂ ಹೆಚ್ಚು ಯುವಜನರಿಗೆ ಮೈಕ್ರೋಸಾಫ್ಟ್ ಮತ್ತು ಅಕ್ಸೆಂಚರ್ ನಂತಹ ಜಾಗತಿಕ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಎಐ, ಸೈಬರ್ ಸೆಕ್ಯುರಿಟಿ ಮತ್ತು ಜೈವಿಕ ತಂತ್ರಜ್ಞಾನ ಕೌಶಲ್ಯಗಳಲ್ಲಿ ತರಬೇತಿ ನೀಡುತ್ತಿದ್ದೇವೆ. ನಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ, ಬೆಂಗಳೂರು, ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಸಂಸ್ಥೆಗಳನ್ನು ಜ್ಞಾನ ಮತ್ತು ನಾವೀನ್ಯತಾ ಕ್ಷೇತ್ರಗಳಿಗೆ ಅವು ನೀಡಿರುವ ಕೊಡುಗೆಗಳಿಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ಸ್, ಆನಿಮೇಷನ್, ಗೇಮಿಂಗ್, ಗ್ರೀನ್ ಹೈಡ್ರೋಜನ್, ಪ್ರವಾಸೋದ್ಯಮ ಮತ್ತು ವಿದ್ಯುತ್ ಚಲನೆಗಳಲ್ಲಿ ಕರ್ನಾಟಕದ ಮುಂದಾಲೋಚನೆಯುಳ್ಳ ನೀತಿಗಳು ಸುಸ್ಥಿರ ಅಭಿವೃದ್ಧಿಗೆ ಸದೃಢ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ.
14. 2017 ರಲ್ಲಿ ಪ್ರಾರಂಭಿಸಲಾದ ಜಾಗತಿಕ ನಾವಿನ್ಯತಾ ಮೈತ್ರಿಯು ಕರ್ನಾಟಕವನ್ನು ವಿಶ್ವದೊಂದಿಗೆ ಬೆಸೆಯುವ ಸಂಪರ್ಕಸೇತುವಾಗಿದೆ. 2018 ರಲ್ಲಿ ವಿಶ್ವದ ಹತ್ತು ದೇಶದೊಂದಿಗಿನ ಮೈತ್ರಿ ಈಗ 35 ದೇಶಗಳಿಗೆ ವಿಸ್ತರಿಸಿದ್ದು, ಜರ್ಮನಿ, ಆಸ್ಟ್ರೇಲಿಯಾ, ಯುಕೆ, ಯುಎಸ್. ಜಪಾನ್, ಇಸ್ರೇಲ್, ಫ್ರಾನ್ಸ್, ಸೌತ್ ಕೊರಿಯಾ, ಫಿನ್ಲ್ಯಾಂಡ್ ಮತ್ತು ಸ್ವಿಟ್ಸರ್ಲ್ಯಾಂಡ್ ದೇಶಗಳು ಮೈತ್ರಿಯಲ್ಲಿವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ