
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸುತ್ತಲೂ ಹಲವೆಡೆ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಾಕ್ಷಿ ದೂರುದಾರ ನೀಡಿದ ಸೂಚನೆಯಂತೆ ಏಳು ಮತ್ತು ಎಂಟನೇ ಸ್ಥಳಗಳಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಗೆದು ಪರಿಶೀಲನೆ ನಡೆಸಿದರೂ ಯಾವುದೇ ಅವಶೇಷಗಳು ಲಭಿಸಿಲ್ಲ.
ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಎಸ್‌ಐಟಿ ತಂಡ ದೂರುದಾರನೊಂದಿಗೆ ಆಗಮಿಸಿ ಪರಿಶೀಲನೆ ಆರಂಭಿಸಿತು. ಏಳನೇ ಸ್ಥಳವನ್ನು ಜೆಸಿಬಿ ಸಹಾಯದಿಂದ ಹಾಗೂ ಕಾರ್ಮಿಕರನ್ನು ಉಪಯೋಗಿಸಿ ಅಗೆದು ಪರಿಶೀಲನೆ ನಡೆಸಲಾಯಿತು. ಮಧ್ಯಾಹ್ನದ ವರೆಗೂ ಇಲ್ಲಿ ಕಾರ್ಯಾಚರಣೆ ನಡೆದರೂ ಕುರುಹುಗಳು ಪತ್ತೆಯಾಗಲಿಲ್ಲ. ಬಳಿಕ ಎಂಟನೇ ಸ್ಥಳದಲ್ಲಿ ಅಗೆಯವ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇಲ್ಲಿಯೂ ಅನಾಮಿಕ ತಾನೇ ಹೂತು ಹಾಕಿದ್ದೇನೆ ಎಂದು ಹೇಳಿರುವ ಯಾವುದೇ ಮೃತದೇಹಗಳ ಕುರುಹುಗಳು ಪತ್ತೆಯಾಗಲಿಲ್ಲ.
ಎಸ್‌ಐಟಿ ತಂಡದ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್ ರೋಷಿನಿ, ಐಎಸ್‌ಡಿ, ಎಫ್‌ಎಸ್‌ಎಲ್, ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.
ಏಳು ಮತ್ತು ಎಂಟನೆಯ ಸ್ಥಳಗಳು ನದಿ ಬದಿಯಲ್ಲಿಯೇ ಇದ್ದು ಮರಳು ಮಿಶ್ರಿತ ಮಣ್ಣಾದ ಕಾರಣ ಸುಲಭವಾಗಿ ಅಗೆದು ಕಾರ್ಯಾಚರಣೆ ನಡೆಸಲಾಯಿತು. ಶುಕ್ರವಾರವೂ ಕಾರ್ಯಾಚರಣೆ ವೀಕ್ಷಿಸಲು ಜನಜಂಗುಳಿ ಸೇರಿತ್ತು.
ಇಂದು ಅರಣ್ಯದಲ್ಲಿ ಶೋಧ
ಅನಾಮಿಕ ಗುರುತಿಸಿದ 13 ಜಾಗಗಳ ಪೈಕಿ ಈವರೆಗೂ ಒಂದರಿಂದ ಎಂಟರ ವರೆಗಿನ ಸ್ಥಳಗಳು ನದಿ ಬದಿಯಲ್ಲಿಯೇ ಇವೆ. ಅಗೆದ ಪ್ರದೇಶಗಳಲ್ಲಿ ಕೇವಲ ಆರನೇಯ ಸ್ಥಳದಲ್ಲಿ ಮಾತ್ರ ಒಂದು ಅವಶೇಷ ಪತ್ತೆಯಾಗಿತ್ತು. ಶನಿವಾರ ನದಿ ಬದಿಯಿಂದ ಮೇಲ್ಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಇರುವ ಒಂಬತ್ತನೆಯ ಸ್ಥಳದಿಂದ ಅಗೆಯುವ ಕಾರ್ಯ ಆರಂಭವಾಗಲಿದೆ.
ಧರ್ಮಸ್ಥಳ ಗ್ರಾಪಂನಿಂದ ಯುಡಿಆರ್ ದಾಖಲೆ ಸಂಗ್ರಹ
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡದವರು ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದರ ಭಾಗವಾಗಿ ಎಸ್.ಐ.ಟಿ ಅಧಿಕಾರಿಗಳು ಶುಕ್ರವಾರ ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಆಗಮಿಸಿ 1995 ರಿಂದ 2014 ರವರೆಗಿನ ಯುಡಿಆರ್ ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಮೃತದೇಹ ಹೂತು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಮಾಜಿ ಅಧ್ಯಕ್ಷ ಕೇಶವ ಗೌಡ ಹೇಳಿಕೆ ನೀಡಿದ್ದು, ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಸ್ಮಶಾನ ಇರಲಿಲ್ಲ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಅನಾಥ ಶವಗಳನ್ನು ಹಿಂದೆ ವಿವಿಧೆಡೆ ಹೂತು ಹಾಕಲಾಗಿತ್ತು ಎಂದಿದ್ದರು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಈ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದು ಇದರ ಸಮಗ್ರ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ