
ಬೆಂಗಳೂರು (ಆ.2): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಟೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕೀಟನಾಶಕ ಬೆರೆಸಿರುವುದು ಭಯೋತ್ಪಾದಕ ಕೃತ್ಯಕ್ಕೆ ಕಡಿಮೆಯಿಲ್ಲ. ಕೃತ್ಯ ಎಸಗಿರುವ ದುರುಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹತ್ತಾರು ಎಳೆಯ ಮಕ್ಕಳ ಮಾರಣ ಹೋಮ ನಡೆಸುವ ದುರುದ್ದೇಶ ಹೊಂದಿದ್ದ ಇದು ಯಾವ ಭಯೋತ್ಪಾದಕ ಕೃತ್ಯಗಳಿಗೂ ಕಡಿಮೆಯಿಲ್ಲ ಎನ್ನುವುದು ನನ್ನ ಭಾವನೆ ಎಂದಿದ್ದಾರೆ.
ಅಡುಗೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಘಟಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದು ತಪ್ಪಿದೆ. ಶಾಲೆಯ ಅಡುಗೆ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಕೃತ್ಯ ಎಸಗಿರುವ ದುರುಳರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಕುಡಿಯುವ ನೀರಿಗೆ ವಿಷ ಬೆರೆಸುವ ಮನಸ್ಥಿತಿ ನಮ್ಮ ನಡುವೆ ಮಾನವೀಯತೆಯ ಅಧಃಪತನವನ್ನು ತೋರಿಸುತ್ತದೆ. ಈ ಬಗ್ಗೆ ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ