ಕರ್ನಾಟಕದಲ್ಲಿ ಇನ್ನು ಟ್ಯಾಕ್ಸಿ ಪ್ರಯಾಣ ಬಲು ದುಬಾರಿ!

By Kannadaprabha NewsFirst Published Feb 2, 2021, 7:37 AM IST
Highlights

ಟ್ಯಾಕ್ಸಿ ಚಾಲಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ | ಟ್ಯಾಕ್ಸಿ ಪ್ರಯಾಣ ದರ ಪರಿಷ್ಕರಣೆ| ಎಸಿ ಟ್ಯಾಕ್ಸಿಗೆ .4.50, ನಾನ್‌ ಎಸಿ .3.50 ಹೆಚ್ಚಳ| 

ಬೆಂಗಳೂರು(ಫೆ.02): ಟ್ಯಾಕ್ಸಿ ಚಾಲಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಇನ್ನಿತರ ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದೆ.

ನೂತನ ದರ ಪರಿಷ್ಕರಣೆ ಅನ್ವಯ ಹವಾನಿಯಂತ್ರಣ ರಹಿತ ಟ್ಯಾಕ್ಸಿ ಪ್ರಯಾಣ ದರವನ್ನು ಪ್ರತಿ ಕಿ.ಮೀ.ಗೆ .18 ಮತ್ತು ಕನಿಷ್ಠ 4 ಕಿ.ಮೀ.ವರೆಗೆ .75 ನಿಗದಿ ಮಾಡಲಾಗಿದೆ. ಅಂತೆಯೆ ಹವಾನಿಯಂತ್ರಿತ ಟ್ಯಾಕ್ಸಿಗಳಿಗೆ ಪ್ರತಿ ಕಿ.ಮೀ.ಗೆ .24 ಮತ್ತು ಕನಿಷ್ಠ 4 ಕಿ.ಮೀ.ವರೆಗೆ .100 ನಿಗದಿ ಮಾಡಲಾಗಿದೆ. ಈ ಪರಿಷ್ಕೃತ ದರವು ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸಂಚರಿಸುವ ಎಲ್ಲ ಟ್ಯಾಕ್ಸಿಗಳಿಗೆ ಅನ್ವಯವಾಗಲಿದೆ.

ಪ್ರಯಾಣ ದರ ಏರಿಕೆ ಜೊತೆಗೆ ಟ್ಯಾಕ್ಸಿ ಕಾಯುವಿಕೆ ಹಾಗೂ ಲಗೇಜ್‌ ದರವನ್ನೂ ಪರಿಷ್ಕರಿಸಲಾಗಿದೆ. ಅದರಂತೆ ಮೊದಲ 5 ನಿಮಿಷಗಳವರೆಗೆ ಕಾಯುವುದು ಉಚಿತವಾಗಿದ್ದು, ನಂತರದ ಪ್ರತಿ 1 ನಿಮಿಷಕ್ಕೆ .1 ನಿಗದಿಗೊಳಿಸಲಾಗಿದೆ. ಅಂತೆಯೆ ಲಗೇಜ್‌ ದರ ಮೊದಲ 120 ಕೆ.ಜಿ. ವರೆಗೆ ಉಚಿತವಾಗಿದ್ದು, ನಂತರದ ಪ್ರತಿ 20 ಕೆ.ಜಿ.ಗೆ .7 ಹಾಗೂ ರಾತ್ರಿ ದರ ಮಧ್ಯರಾತ್ರಿ 12ರಿಂದ ಬೆಳಗಿನ 6ರವರೆಗೆ ಪ್ರಯಾಣ ದರದ ಮೇಲಿನ ಶೇ.10 ಹೆಚ್ಚುವರಿ ದರ ನಿಗದಿಗೊಳಿಸಲಾಗಿದೆ.

ಆ್ಯಪ್‌ ಆಧಾರಿತ ಟ್ಯಾಕ್ಸಿ ವಿಚಾರದಲ್ಲಿ ಗೊಂದಲ

ಈ ಪರಿಷ್ಕೃತ ಟ್ಯಾಕ್ಸಿ ಪ್ರಯಾಣ ದರ ಸಿಟಿ ಟ್ಯಾಕ್ಸಿ ಸೇರಿದಂತೆ ಇನ್ನಿತರ ಟ್ಯಾಕ್ಸಿಗಳಿಗೂ ಅನ್ವಯವಾಗಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೆ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಈ ದರ ಪರಿಷ್ಕರಣೆ ವ್ಯಾಪ್ತಿಗೆ ಸೇರುವ ಬಗ್ಗೆ ಖಚಿತವಾಗಿ ಹೇಳದ ಪರಿಣಾಮ ಈ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಸಾರಿಗೆ ಇಲಾಖೆ ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಟ್ಯಾಕ್ಸಿ ಚಾಲಕರ ಸಂಘಟನೆಗಳು ಆಗ್ರಹಿಸಿವೆ.

click me!