ಗ್ಯಾರಂಟಿ ಯೋಜನೆಯಿಂದ ನಮಗೆ ಭಾರ ಬಿದ್ದಿದೆ. ಚಾಣಾಕ್ಷ ನೀತಿಯಿಂದ ಇದನ್ನು ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ ಮಾಡಬಹುದು: ಸಚಿವ ಎಚ್.ಕೆ. ಪಾಟೀಲ್
ಶಿರಸಿ(ಡಿ.26): ‘ಗ್ಯಾರಂಟಿ ಯೋಜನೆಯಿಂದ ನಮಗೆ ಭಾರ ಬಿದ್ದಿದೆ. ಚಾಣಾಕ್ಷ ನೀತಿಯಿಂದ ಇದನ್ನು ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ ಮಾಡಬಹುದು’ ಎಂದು ಸಚಿವ ಎಚ್.ಕೆ. ಪಾಟೀಲ್ ಸುಳಿವು ನೀಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಯಾರು ಅಭ್ಯರ್ಥಿ ಆದರೆ ಸೂಕ್ತ ಎಂಬುದನ್ನು ಅಧ್ಯಯನ ನಡೆಸಲಾಗುತ್ತಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು. ಉತ್ತರ ಕನ್ನಡದಿಂದ ಆರು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದು ಕಾನೂನು ಸಚಿವ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಎಚ್.ಕೆ. ಪಾಟೀಲ್ ಹೇಳಿದರು.
undefined
ತಾಕತ್ತು ಇದ್ರೆ ಹಿಂದೂ ರಾಷ್ಟ್ರವಾಗೋದನ್ನು ತಡೆಯಲಿ: ಸಿಎಂ ಸಿದ್ದರಾಮಯ್ಯಗೆ ಸಂಸದ ಅನಂತಕುಮಾರ ಹೆಗಡೆ ಸವಾಲು!
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಅಭ್ಯರ್ಥಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಜವಾಬ್ದಾರಿ ನೀಡಿದ್ದಾರೆ. ಈಗಾಗಲೇ ಅಂಕೋಲಾದಲ್ಲಿ ಸಭೆ ನಡೆಸಿ ಸಾಕಷ್ಟು ನಾಯಕರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದೇನೆ. ಅದರಂತೆ ಈಗ ಶಿರಸಿಯಲ್ಲೂ ಸಭೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದೇನೆ. ಪಕ್ಷದಿಂದ ಆರು ಅಭ್ಯಥಿಗಳು ಆಕಾಂಕ್ಷೆ ಹೊಂದಿದ್ದಾರೆ ಎಂಬುದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತಿಳಿಸಿದೆ ಎಂದರು.
ಉತ್ತರಕನ್ನಡ ಪ್ರವಾಸೋದ್ಯಮಕ್ಕೆ ಯೋಗ್ಯ ಜಿಲ್ಲೆ. ಅಭಿವೃದ್ಧಿಯ ಜತೆಯಲ್ಲಿ ಬೇರೆ ರಾಜ್ಯದಂತೆ ಜಿಲ್ಲೆಯ ಸಮುದ್ರ ತೀರವನ್ನು ಸುಂದರವಾಗಿ ರೂಪಿಸಬೇಕಿದೆ. ಪ್ರವಾಸೋದ್ಯಮ ಪ್ರಗತಿಯಾಗಲು ಯಾವುದನ್ನು ಅಭಿವೃದ್ಧಿಪಡಿಸಬೇಕು, ಆಕರ್ಷಿಸಲು ಏನೆಲ್ಲ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಅಧ್ಯಯನ ಮಾಡಲು ಉತ್ತರಕನ್ನಡ ಪ್ರವಾಸೋದ್ಯಮ ಅಧ್ಯಯನ ಹಾಗೂ ಅಭಿವೃದ್ಧಿ ಸಮಿತಿ ರಚಿಸಲಾಗುತ್ತದೆ. ಪರಿಣಿತರು, ಸ್ಥಳೀಯರನ್ನು ಒಳಗೊಂಡು ಜನವರಿ ಮೊದಲ ವಾರದಲ್ಲಿ ಈ ಸಮಿತಿ ರಚಿಸಲಾಗುತ್ತದೆ ಎಂದು ಸಚಿವ ಪಾಟೀಲ ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ೧೭ ಮಸೂದೆ ಪಾಸ್ ಮಾಡಿದ್ದೇವೆ. ಅದರಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಮಸೂದೆಯೂ ಸೇರಿದೆ. ಇನ್ನು ಬಾಂಬೆ ಟ್ರಸ್ಟ್ ಕಾಯ್ದೆ ಪುನರುಜ್ಜೀವನಗೊಳಿಸುತ್ತಿದ್ದೇವೆ. ಹಾಗೇ ಕರ್ನಾಟಕ ಹೈಕೊರ್ಟ್, ಸಿವಿಲ್, ಕಂಡೆಕ್ಟ್ ಗೌರರ್ನಮೆಂಟ್ ಲಿಟಿಗೇಶನ್ ಕಾಯ್ದೆ ಜಾರಿ ಮಾಡಿದ್ದೇವೆ ಎಂದರು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅಖಾಡಕ್ಕೆ ಇಳೀತಾರಾ..? ಪರೋಕ್ಷವಾಗಿ ನಾನೂ ಅಭ್ಯರ್ಥಿ ಎಂದರಾ ಕಾಗೇರಿ..?
ನೂತನ ರಾಮಮಂದಿರ ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಗುರುತು. ಹಿಜಾಬ್ ಹಿಂದೆ ತಿರುಗುವ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಕುರಿತು ಉತ್ತರಿಸಿದ ಎಚ್.ಕೆ. ಪಾಟೀಲ, ಇದೆಲ್ಲ ಅನವಶ್ಯವಾಗಿ ಸಮಾಜವನ್ನು ಗೊಂದಲಕ್ಕೆ ಸಿಲುಕಿಸುವ ಹೇಳಿಕೆಯಾಗಿದೆ. ಜನಪ್ರತಿನಿಧಿಗಳು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕು. ನಮ್ಮ ಜವಾಬ್ದಾರಿ ನಿಭಾಯಿಸಬೇಕು. ಅದು ಬಿಟ್ಟು ಹುರುಪು ತುಂಬುವ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವಕರ್, ಎಸ್.ಜಿ. ನಂಜಯ್ಯನಮಠ, ಎಸ್.ಕೆ. ಭಾಗ್ವತ, ದೀಪಕ ಹೆಗಡೆ ದೊಡ್ಡೂರು, ಜಗದೀಶ ಗೌಡ ಹಾಜರಿದ್ದರು.